ಲಾಲಾ ರಸ ಎಂಬ ಜೀವ ದ್ರವ್ಯ

ನಮ್ಮ ದೇಹದಲ್ಲಿನ ಜೊಲ್ಲು ರಸ ಗ್ರಂಥಿಗಳಿಂದ ಸ್ರವಿಸಲ್ಪಡುವ ದ್ರವ್ಯವನ್ನು ಜೊಲ್ಲು ರಸ ಅಥವಾ ಲಾಲಾರಸ ಎಂದು ಕರೆಯುತ್ತಾರೆ. ಈ ಜೊಲ್ಲುರಸದಲ್ಲಿ ಶೇಖಡಾ 99 ರಷ್ಟು ಬರೀ ನೀರು ಇರುತ್ತದೆ. ಮನುಷ್ಯ ಮಾತ್ರವಲ್ಲದೆ ಹೆಚ್ಚಿನ ಎಲ್ಲಾ ಪ್ರಾಣಿಗಳಲ್ಲಿಯೂ ಈ ಲಾಲಾರಸ ಸ್ರವಿಸಲ್ಪಡುತ್ತದೆ. ಕುತ್ತಿಗೆಯ ಸುತ್ತ ಇರುವ ಜೊಲ್ಲುರಸ ಗ್ರಂಥಿಗಳಿಂದ ಈ ಜೊಲ್ಲುರಸ ಸ್ರವಿಸಲ್ಪಡುತ್ತದೆ. ಸಬ್ ಮ್ಯಾಂಡಿಬುಲಾರ್ ಸಬ್‍ಲಿಂಗ್ರ್ವಲ್ ಮತ್ತು ಪೆರೋಟಿಡ್ ಎಂಬ ಮೂರು ಜೊತೆ ದೊಡ್ಡದಾದ ಜೊಲ್ಲು ರಸ ಗ್ರಂಥಿಗಳು ಈ ಜೊಲ್ಲುರಸ ಉತ್ಪಾದನೆ ಮಾಡಿ ಬಾಯಿಯೊಳಗೆ ಸ್ರವಿಸುತ್ತದೆ. ಇದಲ್ಲದೆ, ಇತರ ಸಣ್ಣ ಸಣ್ಣ ನೂರಾರು ಜೊಲ್ಲು ರಸಗ್ರಂಥಿಗಳು ಬಾಯಿಯಲ್ಲಿ, ನಾಲಗೆಯಲ್ಲಿ ಮತ್ತು ನಾಲಗೆಯ ತಳ ಭಾಗದಲ್ಲಿ ಇರುತ್ತದೆ. ಇವುಗಳಿಂದಲೂ ಸಣ್ಣ ಪ್ರಮಾಣದಲ್ಲಿ ಜೊಲ್ಲು ರಸ ಸ್ರವಿಸಲ್ಪಡುತ್ತದೆ. ದಿನವೊಂದರಲ್ಲಿ ಮನುಷ್ಯರಲ್ಲಿ ಏನಿಲ್ಲವೆಂದರೂ ಒಂದರಿಂದ ಒಂದೂವರೇ ಲೀಟರ್‍ನಷ್ಟು ಜೊಲ್ಲು ರಸ ನಿರಂತರವಾಗಿ ಸ್ರವಿಸ್ಪಡುತ್ತದೆ. ನಾವು ಮಾತನಾಡಲು, ಆಹಾರ ಜಗಿಯಲು ಮತ್ತು ಆಹಾರ ಜೀರ್ಣಿಸಲು ಈ ಲಾಲಾರಸ ಅತಿಅಗತ್ಯ. ಈ ಕಾರಣದಿಂದಲೇ ಲಾಲಾರಸವನ್ನು ಜೀವದ್ರ್ರವ್ಯ ಎಂದು ಕರೆಯುತ್ತಾರೆ. ಈ ಜೊಲ್ಲುರಸ ಉತ್ಪಾದನೆಯಲ್ಲಿ ವ್ಯತ್ಯಯವಾದಲ್ಲಿ ಜೀರ್ಣಪ್ರಕ್ರಿಯೆಗೆ ತೊಂದರೆ ಆಗುತ್ತದೆ. ಆಹಾರ ಜಗಿಯಲು, ಜೀರ್ಣಿಸಲು ಕಷ್ಟವಾಗುತ್ತದೆ.

ಲಾಲಾ ರಸದಲ್ಲಿ ಏನಿದೆ?
ಲಾಲಾ ರಸದಲ್ಲಿ 99 ಶೇಕಡಾದಷ್ಟು ನೀರಿರುತ್ತದೆ. ಇದಲ್ಲದೇ ಎಲೆಕ್ಟ್ರೋಲೈಟ್, ಮ್ಯೂಕಸ್ ಕಿಣ್ವಗಳು ಮತ್ತು ಆಂಟಿಬಾಡಿಗಳು ಲಾಲಾ ರಸದಲ್ಲಿ ಇರುತ್ತದೆ. ಸೋಡಿಯಂ, ಪೋಟಾಸಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕ್ಲೋರೈಡ್ ಮುಂತಾದ ಎಲೆಕ್ಟ್ರೋಲೈಟ್‍ಗಳು ಲಾವರಸದಲ್ಲಿ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಮ್ಯೈಕೋಪಾಲಿಸಾಖರೈಡ್ ಮತ್ತು ಗೈಕೋಪ್ಲೋಟೀನ್ ಎಂಬ ಮ್ಯುಖಸ್ ಇರುತ್ತದೆ. ಅಮೈಲೇಸ್, ಲೈಪೇಸ್ ಮತ್ತು ಕಾಲಿಕ್ರೈನ್ ಎಂಬ ಕಿಣ್ಣಗಳು ಇರುತ್ತದೆ. ಬ್ಯಾಕ್ಟ್ರೀರಿಯಗಳನ್ನು ನಾಶಮಾಡುವ ಶಕ್ತಿಯುಳ್ಳ ಲೈಸೋಜೈಮ್, ಲಾಕ್ಟೋಪೆರೋಕ್ಸಿಡೇಸ್, ಲ್ಯಾಕ್ಟೋ ಪೆರಿನ್ ಮತ್ತು ಇಮ್ಯುನೋ ಗ್ಲೋಬ್ಯೂಲಿನ್ A ಎಂಬ ವಸ್ತುಗಳು ಇರುತ್ತದೆ. ಒಟ್ಟಿನಲ್ಲಿ ಲಾಲಾರಸ ಎನ್ನುದು ಸಂಕೀರ್ಣವಾದ ಜೀವ ದ್ರವ್ಯವಾಗಿದ್ದು ದೇಹದ ಜೀರ್ಣಪ್ರಕ್ರೀಯೆಗೆ ಮತ್ತು ರಕ್ಷಣೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ.

ಲಾಲಾರಸದ ಕೆಲಸಗಳು ಏನು?

  1. ಬಾಯಿಯನ್ನು ಮತ್ತು ಆಹಾರವನ್ನು ಒದ್ದೆಯಾಗಿಸಿ ಆಹಾರ ಜಗಿಯಲು, ನುಂಗಲು ಮತ್ತು ಮಾತನಾಡಲು ಸಹಕರಿಸುತ್ತದೆ.
  2. ಆಹಾರದ ಪಚನಕ್ರಿಯೆ ಮತ್ತು ಜೀರ್ಣವಸ್ಥೆಯಲ್ಲಿ ಲಾಲಾರಸ ಬಹುಮುಖ್ಯ ಪಾತ್ರ ವಹಿಸುತ್ತದೆ. ಲಾಲಾರಸದಲ್ಲಿನ ಕಿಣ್ಣನಗಳು ಸಂಕೀರ್ಣವಾದ ಶಕರಪಿಷ್ಟದ ಆಹಾರಗಳನ್ನು ಒಡೆದು ಸರಳ ಸಕ್ಕರೆಯಾಗಿ ಪರಿವರ್ತಿಸಿ ಜೀರ್ಣ ಕ್ರಿಯೆಯನ್ನು ಸರಳವಾಗಿಸುತ್ತದೆ.
  3. ಆಹಾರದ ರುಚಿಯನ್ನು ಆಸ್ವಾಧಿಸಲು ಲಾಲಾರಸ ಅತೀ ಅಗತ್ಯ.
  4. ಬಾಯಿಯೊಳಗಿನ ಕ್ಷಾರೀಯತೆ ಮತ್ತು ಆಮ್ಲಿಯತೆಯನ್ನು ಸಮತೋಲನದಲ್ಲಿ ಇಡಲು ಲಾಲಾರಸ ಅತೀ ಅಗತ್ಯ. ಬಾಯಿಯೊಳಗಿನ Pಊ 6.2 ರಿಂದ 7.4 ರ ಒಳಗೆ ಇಡುವಲ್ಲಿ ಲಾಲಾರಸ ಮುಖ್ಯ ಪಾತ್ರವಹಿಸುತ್ತದೆ.
  5. ಲಾಲಾರಸದಲ್ಲಿರುವ ಎಪಿಡರ್ಮಲ್ ಗ್ರೋಥ್ ಫ್ಯಾಕ್ಟರ್ ಗಾಯ ಒಣಗುವಲ್ಲಿ ಸಹಾಯ ಮಾಡುತ್ತದೆ. ಅದೇ ರೀತಿ ಬಾಯಿಯೊಳಗಿನ ಹುಣ್ಣನ್ನು ಗುಣಪಡಿಸುವಲ್ಲಿ ಬಹಳ ಸಹಾಯಕಾರಿ. ಲಾಲಾರಸದಲ್ಲಿರುವ ಸ್ರವಿಸ್ಪಡುವ ಕಾರ್ಬೋನಿಕ್ ಎನ್‍ಹೈಡ್ರೇಸ್ ಅಥವಾ ಗಸ್ಟಿನ್ ಎಂಬ ಕಿಣ್ವ ರುಚಿಗ್ರಂಥಿಗಳ ಬೆಳವಣಿಗೆಯಲ್ಲಿ ಸಹಾಯಮಾಡುತ್ತದೆ.

ಜೊಲ್ಲು ರಸ ಸ್ರವಿಸುವಿಕೆ ಕಡಿಮೆಯಾಗಲು ಕಾರಣಗಳೇನು?

  1. ಕಡಿಮೆ ದ್ರವಹಾರ ಸೇವಿಸುವುದರಿಂದ ಜೊಲ್ಲುರಸ ಸ್ರವಿಸುವಿಕೆ ಬತ್ತಿಹೋಗುತ್ತದೆ.
  2. ಧೂಮಪಾನ ಮಧ್ಯಪಾನದಿಂದಾಗಿ, ನಿರ್ಜಲೀಕರಣವಾಗಿ ಜೊಲ್ಲುರಸ ಸ್ರವಿಸುವಿಕೆ ಕುಂಟಿತವಾಗುತ್ತದೆ.
  3. ವಿಕಿರಣ ಚಿಕಿತ್ಸೆಯಿಂದ ಜೊಲ್ಲುರಸ ಗ್ರಂಥಿಗಳಿಗೆ ಹಾನಿಯಾಗಿ ಜೊಲ್ಲುರಸದ ಪ್ರಮಾಣ ಗಣನೀಯವಾಗಿ ಕುಂಟಿತವಾಗುತ್ತದೆ.
  4. ಪೆಪ್ಸಿ, ಕೋಲ, ಸೋಡಾದಂತಹ ಕಾರ್ಬನ್‍ಯುಕ್ತ ಪೇಯಗಳ ಸೇವನೆಯಿಂದ ಶುಷ್ಕ ಬಾಯಿ ಉಂಟಾಗುತ್ತದೆ.
  5. ಅತಿಯಾಗಿ ಅನಗತ್ಯವಾಗಿ ಔಷದಿ ಬಳಕೆಯಿಂದಲೂ ಶುಷ್ಕ ಬಾಯಿ ಉಂಟಾಗಬಹುದು.
  6. ಬಾಯಿಯಿಂದ ಉಸಿರಾಟದಿಂದಲೂ ಶುಷ್ಕ ಬಾಯಿ ಉಂಟಾಗಬಹುದು.
    ತೊಂದರೆಗಳು ಏನು?
  7. ಆಹಾರ ಜಗಿಯಲು, ನುಂಗಲು ಮತ್ತು ಜೀರ್ಣಿಸಲು ಕಷ್ಟವಾಗುತ್ತದೆ.
  8. ಬಾಯಿ ಒಣಗಿದಾಗ ಮಾತನಾಡುವುದು ಕಷ್ಟವಾಗುತ್ತದೆ.
  9. ದಂತ ಕ್ಷಯ ಮತ್ತು ಒಸಡು ರೋಗಗಳು ಉಲ್ಬಣವಾಗುತ್ತದೆ.
  10. ಕೃತಕ ದಂತ ಪಂಕ್ತಿ ಬಳಸುವವರಿಗೆ ಬಾಯಿಯಲ್ಲಿ ಉರಿತ ಮತ್ತು ಉರಿಯೂತ ಉಂಟಾಗಬಹುದು.
  11. ಬಾಯಿ ಒಣಗುವುದರಿಂದ ಪದೇ ಪದೇ ದ್ರವಾಹಾರ ಸೇವಿಸಬೇಕೆಂಬ ತುಡಿತ ಉಂಟಾಗಬಹುದು.

ಕೊನೆ ಮಾತು

ಜೊಲ್ಲುರಸ ಅಥವಾ ಲಾಲಾರಸ ಎನ್ನುವುದು ಅತೀ ಮೂಲ್ಯ ಜೀವದ್ರವ್ಯವಾಗಿದ್ದು, ನಮ್ಮ ದೇಹದ ಜೀರ್ಣಾಂಗ ಪ್ರಕ್ರಿಯೆಯಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಕಾರಣಾಂತರಗಳಿಂದ ಜೊಲ್ಲುರಸದ ಪ್ರಮಾಣ ಕಡಿಮೆಯಾದಲ್ಲಿ ಶುಷ್ಕ ಬಾಯಿ ಅಥವಾ ಒಣಬಾಯಿ ಎಂಬ ಪರಿಸ್ಥಿತಿ ಕಾರಣವಾಗಿ ಮಾತನಾಡಲು, ಆಹಾರ ಜಗಿಯಲು, ಜೀರ್ಣಿಸಲು ಕಷ್ಟವಾಗಿ ಹಲವಾರು ದೈಹಿಕ ತೊಂದರೆಗಳಿಗೆ ಕಾರಣವಾಗಿರಬಹುದು. ದೇಹಕ್ಕೆ ಜ್ವರ ಬಂದಾಗಲೂ ನಿರ್ಜಲೀಕರಣದಿಂದಾಗಿ ಬಾಯಿ ಒಣಗಬಹುದು. ಯಾವ ಕಾರಣದಿಂದ ಬಾಯಿ ಒಣಗಿದೆ ಎಂಬುದನ್ನು ತಿಳಿದುಕೊಂಡು ತಕ್ಷಣವೇ ದಂತ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ತೆಗೆದುಕೊಂಡಲ್ಲಿ ಶುಷ್ಕ ಬಾಯಿ ತೊಂದರೆಯನ್ನು ನಿವಾರಿಸಬಹುದು. ಇಲ್ಲವಾದಲ್ಲಿ ಬಾಯಿಯಲ್ಲಿಯೂ ಬರಗಾಲ ಉಂಟಾಗಿ ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿ ನಮ್ಮ ಕೆಲಸದ ಕಾರ್ಯಕ್ಷಮತೆಗೆ ತೊಂದರೆಯಾಗುವ ಎಲ್ಲಾ ಸಾಧ್ಯತೆಗಳು ಇದೆ. ಈ ಕಾರಣದಿಂದಲೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಮುಂದಾಗುವ ತೊಂದರೆಗಳನ್ನು ಆರಂಭದಲ್ಲಿಯೇ ನಿವಾಳಿಸಿ ಹಾಕಬಹುದು. ಅದರಲ್ಲಿ ನಮ್ಮೆಲ್ಲರ ಒಳಿತು ಅಡಗಿದೆ.

ಡಾ|| ಮುರಲೀ ಮೋಹನ ಚೂಂತಾರು
BDS MDS DNB MBA MOSRCSEd
Consultant Oral and Maxillofacial Surgeon
9845135787

Related Posts

Leave a Reply

Your email address will not be published.