ನೂತನ ಸರ್ಕಾರದಲ್ಲಿ ಬಿಲ್ಲವ ಮುಖಂಡರಿಗೆ ಸಚಿವ ಸ್ಥಾನ ನೀಡಿ : ಸತ್ಯಜಿತ್ ಸುರತ್ಕಲ್

ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದಲ್ಲಿ ಬಿಲ್ಲವ ಸಮುದಾಯದ ಕನಿಷ್ಠ ಎರಡು ಮಂದಿಗೆ ಸಚಿವ ಸ್ಥಾನ ನೀಡಬೇಕೆಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದ್ದಾರೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರು ವಿಧಾನಪರಿಷತ್ ಸದಸ್ಯರನ್ನು ಒಳಗೊಂಡು ಐದು ಜನ ಶಾಸಕರನ್ನು ಹೊಂದಿರುವ ನಮ್ಮ ಸಮಾಜಕ್ಕೆ ಎರಡು ಮಂತ್ರಿಸ್ಥಾನವನ್ನು ನೀಡಬೇಕು. ಅದೇ ರೀತಿ ನೂತನ ಸರ್ಕಾರ ಬಿಲ್ಲವ ಸಮಾಜದ ನ್ಯಾಯಯುತವಾದ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಹೇಳಿದರು. ಅಧಿಕೃತ ಅದೇಶ ಆಗಿರುವ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವನ್ನು ತಕ್ಷಣ ರಚಿಸಿ, ವಾರ್ಷಿಕ 500 ಕೋಟಿ ರೂಪಾಯಿ ಮೀಸಲಿಡಬೇಕು. ಬಿಲ್ಲವ ಸಮಾಜವನ್ನು ಒಳಗೊಂಡ 2ಎ ಪ್ರವರ್ಗದಲ್ಲಿರುವ ಯಾವುದೇ ಸಮಾಜಕ್ಕೆ 15% ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಕಾಂತರಾಜು ಆಯೋಗದ ವರದಿಯ ಜಾರಿ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರು ಹಾಗೂ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹೆಸರು ಇಡುವುದು ಸೇರಿದಂತೆವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ಸತ್ಯಜಿತ್ ಸುರತ್ಕಲ್ ಪ್ರತಿಕ್ರಿಯಿಸಿದ ಅವರು, ಹಿಂದೂ ಸಮಾಜಕ್ಕೆ ಏನು ಅನ್ಯಾಯ ಆಗಿದೆ ಎಂದು ಪೂಂಜಾ ಕೇಳಿದ್ದಾರೆ. ಏನು ಅನ್ಯಾಯ ಆಗಿದೆ ಎಂಬುವುದನ್ನು ಶೀಘ್ರದಲ್ಲೇ ಸ್ಪಷ್ಟಪಡಿಸುತ್ತೇನೆ ಎಂದು ಸತ್ಯಜಿತ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಅಚ್ಚುತ್ ಅಮೀನ್ ಕಲ್ಮಾಡಿ, ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ರಾಕೇಶ್ ಉಡುಪಿ, ಉಡುಪಿ ಜಿಲ್ಲಾಧ್ಯಕ್ಷ ಜಗನ್ನಾಥ ಕೋಟೆ, ತಾಲೂಕು ಅಧ್ಯಕ್ಷರಾದ ನವೀನ್ ಕೋಟ್ಯಾನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.