ಉಜಿರೆ ಎಸ್‌ಡಿಎಂನಲ್ಲಿ ಮಾಹಿತಿ ಕಾರ್ಯಗಾರ ಮತ್ತು ವೈದ್ಯಕೀಯ ಕೋಡಿಂಗ್ ತರಬೇತಿಗೆ ಚಾಲನೆ
ಉಜಿರೆ: ಶ್ರೀ ಧ.ಮಂ ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ ಹಾಗೂ ಯೂನೈಟೆಡ್ ಹೆಲ್ತ್ ಗ್ರೂಪ್‌ನ ಅಂಗಸಂಸ್ಥೆ ಒಪ್ಟಮ್‌ನ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಅ.8ರಂದು ಮಾಹಿತಿ ಕಾರ್ಯಗಾರ ಮತ್ತು 5 ವಾರಗಳ ವೈದ್ಯಕೀಯ ಕೋಡಿಂಗ್ ತರಬೇತಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಒಪ್ಟಮ್‌ನ ಉಪಾಧ್ಯಕ್ಷ ಒರ್ವಿಲ್ ಜೇಮ್ಸನ್ ಡಿಸೋಜ ಸಂಸ್ಥೆಯ ಉದ್ಯೋಗಾವಕಾಶದ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪಿ.ಎನ್ ಉದಯಚಂದ್ರ ಕೈಗಾರಿಕಾ ಕೌಶಲ್ಯವನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಳ್ಳಬೇಕು ಎಂದರು.
ಸಂಸ್ಥೆಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳಿದ್ದು ಮೊದಲ ಸುತ್ತಿನಲ್ಲಿ ಪರೀಕ್ಷೆ ಮೂಲಕ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 5 ವಾರಗಳ ತರಬೇತಿ ನೀಡಿ ಎಎಪಿಸಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಉದ್ಯೋಗ ನೀಡಲಾಗುತ್ತದೆ. ಸುಮಾರು 80 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಟ್ಯಾಲೆಂಟ್ ಅಕ್ವಿಜಿಶನ್ ಹೆಡ್ ಕ್ಲೆಮೆಂಟ್ ಜಾಯೆಲ್ ಸಿಕ್ವೇರಾ, ಮೆಡಿಕಲ್ ಕೋಡಿಂಗ್ ಮ್ಯಾನೇಜರ್ ಭಾಸ್ಕರ ಮಾಂಡ್ಲೆಮ್ ಉಪಸ್ಥಿತರಿದ್ದರು. ಉಪನ್ಯಾಸಕ ಹರೀಶ್ ಶೆಟ್ಟಿ ಸ್ವಾಗತಿಸಿ ಡಾ. ಪಿ ವಿಶ್ವನಾಥ್ ವಂದಿಸಿದ್ದು ವಿದ್ಯಾರ್ಥಿನಿ ಸಮೀಕ್ಷಾ ಹಾಗೂ ಸಂಧ್ಯಾ ನಿರೂಪಿಸಿದರು