ಕಾಣದ ಗ್ರಹಣವ ತಂತ್ರಜ್ಞಾನದಲ್ಲಿ ಕಾಣುವ ತವಕ
ಸೂರ್ಯ ಗ್ರಹಣ ಮತ್ತೆ ಬಂದಿದೆ. ಭಾರತದಲ್ಲಿ ಕಾಣುವುದಿಲ್ಲ. ನೇಸರನು ದೊಡ್ಡ ತೊರಕೆಯಾದರೆ, ಭೂಮಿ ಮಾಂಜಿ ಹಾಗೂ ಚಂದ್ರ ಚಿಕ್ಕ ಚಿಪ್ಪರ್ ಮೀನು ಆಗಿರುವುದರಿಂದ ಸೂರ್ಯ ಗ್ರಹಣವು ಭೂಮಿಯ ಎಲ್ಲ ಕಡೆ ಕಾಣಿಸುವುದಿಲ್ಲ. ಹಾಗಾದರೆ ಸೂರ್ಯ ಗ್ರಹಣ ಎಂದರೆ ಏನು? ಭಾರತೀಯ ನಂಬಿಕೆ ಪ್ರಿಯರ ಪ್ರಕಾರ ರಾಹು ಮತ್ತು ಕೇತು ಸೂರ್ಯನನ್ನು ನುಂಗುವುದೇ ಸೂರ್ಯ ಗ್ರಹಣ. ಆದರೆ ಅವರಿಂದ ನುಂಗಲಾಗದೆ ಸೂರ್ಯ ಉಳಿದುಕೊಂಡ, ಗ್ರಹಣ ಬಿಡುತ್ತಲೇ ಮತ್ತೆ ಕಾಣುವ ಬೆಂಗದಿರನ ಬಗೆಗೆ ಮತ್ಯಾವುದೇ ಪುರಾಣದ ಕತೆ ಇಲ್ಲ.
ಹಾಗಾದರೆ ವೈಜ್ಞಾನಿಕವಾಗಿ ಸೂರ್ಯ ಗ್ರಹಣ ಎಂದರೆ ಏನು? ಸೂರ್ಯ ಗ್ರಹಣವು ದಿನಕರ, ಮಹಿ ಮತ್ತು ತಂಗದಿರ ಮೂವರನ್ನು ಒಳಗೊಂಡ ಒಂದು ಖಗೋಳ ಪ್ರಕ್ರಿಯೆಯಾಗಿದೆ. ಕೊರೋನಾ ಓಡಿಸಲು ಬಟ್ಟಲು ಬಾರಿಸಿದವರ ದೇಶ ಭಾರತ. ಹಾಗಾಗಿ ಗ್ರಹಣ ಓಡಿಸಲು ಬಟ್ಟಲನ್ನ ಜಾಗಟೆ ಮಾಡಿಕೊಂಡು ಬಾರಿಸುವುದು ಭಾರತದಲ್ಲಿ ಒಂದು ಸಂಪ್ರದಾಯವಾಗಿತ್ತು. ಈಗ ಆ ಸಂಪ್ರದಾಯ ಪೂರ್ತಿ ಅಳಿದಿದೆ ಎಂದೇನೂ ಹೇಳಲಿಕ್ಕಾಗದು. ವಿಜ್ಞಾನ ಕಲಿವವರು, ಕಲಿಸುವವರು ಕೂಡ ಗ್ರಹಣ ಕಾಲದಲ್ಲಿ ಬಟ್ಟಲು ಬಡಿದುದನ್ನು ಕಂಡವರಿದ್ದಾರೆ. ಈಗಲೂ ಅದರ ಪಳೆಯುಳಿಕೆ ಭಾರತದಲ್ಲಿ ಉಳಿದಿರಬಹದು.
ಅದನ್ನೆಲ್ಲ ಉತ್ಖನನ ಮಾಡಿ ನೋಡುವ ವ್ಯವದಾನ ಭಾರತೀಯರಿಗೆ ಇಲ್ಲ. ಏಕೆಂದರೆ ಮೊಬಾಯಿಲ್ ಎಂಬ ಗ್ರಹಣದಲ್ಲಿ ಬಿದ್ದು ತಮ್ಮನ್ನೇ ಕಳೆದುಕೊಳ್ಳುತ್ತಿರುವವರ ಕಾಲವಿದು. ಗ್ರಹಣ ಎಂದರೆ ಏನು? ಹಿಡಿಯುವುದು ಎಂದು ಅರ್ಥ. ಛಾಯಾಗ್ರಹಣ ಎಂದರೆ ಕನ್ನಡದಲ್ಲಿ ನೆರಳು ಹಿಡಿಯುವುದು ಎಂದು ಅರ್ಥ. ಚುನಾವಣೆಯಲ್ಲಿ ಯಾರ ನೆರಳು ಯಾರನ್ನೆಲ್ಲ ಆವರಿಸಿಕೊಳ್ಳುತ್ತದೆ ಎನ್ನುವುದು ಇನ್ನೂ ಲೆಕ್ಕಾಚಾರದ ಹಂತದಲ್ಲಿದೆ. ಈ ಗ್ರಹಣವು ಮುಖ್ಯವಾಗಿ ಅಮೆರಿಕದಲ್ಲಿ ಕಾಣಿಸುವುದರಿಂದ ಅಲ್ಲಿನ ಅಧ್ಯಕ್ಷೀಯ ಚುನಾವಣೆಯ ಮೇಲೂ ನೆರಳು ಚೆಲ್ಲಬಹುದು.
ಯಾವುದಾದರೊಂದರ ಮೇಲೆ ಬೆಳಕು ಚೆಲ್ಲುವುದು ಮೇಲು; ನೆರಳು ಚೆಲ್ಲುವುದು ಎಂದರೆ ಮರೆ ಮಾಡುವುದು ಹೆಚ್ಚು ವಿಶ್ವಾಸಾರ್ಹವಾದುದಲ್ಲ. ಆದರೆ ಅದು ಕೆಲವೊಮ್ಮೆ ಅಗತ್ಯ ಬೀಳಬಹುದು. ಭೂಮಿಯ ಸುತ್ತ ಚಂದ್ರ ಸುತ್ತುವನು, ಭೂಮಿಯು ಸೂರ್ಯನ ಸುತ್ತ ಸುತ್ತುವುದು. ಇಲ್ಲಿ ಸೂರ್ಯನು ಸ್ಥಿರ. ಆದರೆ ಗ್ರಹವಾದ ಭೂಮಿ ಮತ್ತು ಉಪಗ್ರಹವಾದ ಚಂದ್ರರು ಸುತ್ತುತ್ತ ಸುತ್ತುತ್ತ ಆಚೀಚೆ ಆಗುತ್ತಾರೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಉಂಟಾಗುತ್ತದೆ.
ಈ ಮೂರು ಒಂದೇ ಸಾಲಿನಲ್ಲಿ ಬಂದು ತಿಂಗಳನು ಭೂಮಿ ನೇಸರನ ನಡುವೆ ಬರುವುದು ಅಮಾವಾಸ್ಯೆಯ ದಿನವಾದ್ದರಿಂದ ಸೂರ್ಯ ಗ್ರಹಣವು ಅಮಾವಾಸ್ಯೆಯ ದಿನದಂದು ನಡೆಯುತ್ತದೆ. ಭಾಗಶಾ ಸೂರ್ಯ ಗ್ರಹಣಗಳು ನಡೆಯುತ್ತಲೇ ಇರುತ್ತವೆ. ಪೂರ್ಣ ಸೂರ್ಯ ಗ್ರಹಣಗಳು ನಡೆಯುವುದು ಕಡಿಮೆ. ಅಲ್ಲದೆ ಆಕಾರಗಳ ಕಾರಣಕ್ಕೆ ಪೂರ್ಣ ಸೂರ್ಯ ಗ್ರಹಣ ನಡೆದರೂ ಕೂಡ ಅದು ಭೂಮಿಯ ಎಲ್ಲ ಕಡೆ ಕಾಣಿಸಿಕೊಳ್ಳುವುದಿಲ್ಲ. ದಿನಪನು ಪ್ರಖರ ಬೆಳಕಿನ ಉರಿಯುವ ಉಂಡೆಯಾಗಿರುವುದರಿಂದ ಪೂರ್ಣ ಗ್ರಹಣವು ಸಂಭವಿಸಿದಾಗ ಉಂಗುರವಾಗಿ ಸೂರ್ಯನು ಕಾಣಿಸುವುದು ನೈಸರ್ಗಿಕ ವಿಶೇಷಗಳಲ್ಲಿ ಒಂದಾದುದಾಗಿದೆ. ಅದನ್ನು ಕಂಕಣ ಸೂರ್ಯ ಗ್ರಹಣ ಎಂದು ಹೇಳುವರು.
ಉಂಗುರ ಕಾಣುವ ಸೂರ್ಯ ಗ್ರಹಣವನ್ನು ಖಗ್ರಾಸ ಸೂರ್ಯ ಗ್ರಹಣ ಎಂದೂ ಹೇಳುತ್ತಾರೆ. ಕಪ್ಪಿನ ಹೊರಾವರಣದಲ್ಲಿ ಕಾಣುವ ಈ ಹೊಳೆಯುವ ಬೆಳಕಿನ ಉಂಗುರವನ್ನು ವಜ್ರದುಂಗುರ ಎಂದು ಕೂಡ ಹೇಳುವುದಿದೆ. ಖಗೋಳ ಶಾಸ್ತ್ರಜ್ಞರ ಪ್ರಕಾರ ನಿಮ್ಮ ಕಣ್ಣಿಗೆ ನೇರ ಅಡ್ಡ ಗೆರೆಯಂತೆ ಚಂದ್ರನು ಅಡ್ಡ ಬರುವುದು ಸೂರ್ಯ ಗ್ರಹಣ ಉಂಟು ಮಾಡುತ್ತದೆ. ಚಂದ್ರನ ನೆರಳು 100 ಮೈಲು ಅಗಲಕ್ಕೆ ಬೀಳಬಹುದಾದ್ದರಿಂದ ಭೂಮಿಯ ಎಲ್ಲ ಕಡೆ ಇರುವ ಜನರಿಗೆ ಸೂರ್ಯ ಗ್ರಹಣವು ಕಾಣಿಸುವುದಿಲ್ಲ. ಅಲ್ಲದೆ ಕಾಣಿಸುವಾಗಲೂ ಏಕ ಕಾಲದಲ್ಲಿ ಕಾಣಿಸುವುದಿಲ್ಲ. ಚೂರು ಮರೆ ಎಂದರೆ ಪಾಶ್ರ್ವ ಸೂರ್ಯ ಗ್ರಹಣವು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿರುತ್ತದೆ.
ಚಂದ್ರನು ಸೂರ್ಯನನ್ನು ಪೂರ್ಣ ಮರೆ ಮಾಡುವ ಕಾಲವು ನಾಲ್ಕೂವರೆ ನಿಮಿಷಕ್ಕಿಂತ ಹೆಚ್ಚು ಇರುವುದಿಲ್ಲ. ಹಾಗಾಗಿ ಪೂರ್ಣ ನೇಸರು ನುಂಗುವಿಕೆ ಕೆಲವೇ ಕೆಲವು ಕಡೆ ನಾಲ್ಕೇ ನಿಮಿಷದಲ್ಲಿ ಮುಗಿದು ದಿನಕರನು ನೆರಳು ಕಳಚಿಕೊಂಡು ಪ್ರಜ್ವಲಿಸುತ್ತಾನೆ. 2024ರ ಏಪ್ರಿಲ್ 8ರ ಸೂರ್ಯ ಗ್ರಹಣವು ಭಾರತದಲ್ಲಿ ಕಾಣಿಸುವುದಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನ, ಮೆಕ್ಸಿಕೋ, ಕೆನಡಾ ಮತ್ತು ಇತರ ಬಡಗಣ ಅಮೆರಿಕ ಖಂಡದ ಪ್ರದೇಶಗಳಲ್ಲಿ ಈ ಸೂರ್ಯ ಗ್ರಹಣ ಕಾಣಿಸಿತು. ಒಂದು ಕೋಣದಲ್ಲಿ ತುಸು ಮಾತ್ರ ಬ್ರಿಟನ್ನಿನಲ್ಲಿ ಕೂಡ ಈ ಸೂರ್ಯ ಗ್ರಹಣವು ಕಾಣಿಸಿತು ಎನ್ನಲಾಗಿದೆ.
ಸೂರ್ಯ ಗ್ರಹಣವು ತೀರಾ ಅಲ್ಪಾವಧಿಯದಾಗಿದ್ದು ದೈಹಿಕವಾಗಿ ಅದು ಮಾನವನ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವನ್ನು ಬೀರುವುದಿಲ್ಲ. ಆದರೆ ಮಾನಸಿಕವಾಗಿ ಕೆಲವರು ಸ್ವಲ್ಪ ಕುಗ್ಗಬಹುದು. ಅದರಲ್ಲೂ ಮೂಢನಂಬಿಕೆಯೊಳಗಿಂದ ಹೊರಗೆ ಬಾರದವರು ಸೂರ್ಯ ಗ್ರಹಣದಿಂದ ಸ್ವಲ್ಪ ಮಾನಸಿಕವಾಗಿ ಕುಗ್ಗಿದರೂ ಅದು ತೀರಾ ಅಲ್ಪ ಕಾಲದ್ದಾಗಿರುತ್ತದೆ. ಏಕೆಂದರೆ ಸೂರ್ಯ ಗ್ರಹಣವು ಇಡೀ ದಿನ ನಡೆಯುವುದಿಲ್ಲ. ನೇರ ಕಣ್ಣಿನಿಂದ ನೋಡಿದರೆ ಸ್ವಲ್ಪ ತೊಂದರೆಯಾದೀತು. ಮಸಿ ಉಜ್ಜಿದ ಗಾಜಿನಿಂದ ಮಾತ್ರ ನೋಡಿ. ಹಿಂದೊಂದು ಕಾಲದಲ್ಲಿ ಸೂರ್ಯ ಮುಳುಗುವುದರೊಳಗೆ ಕೊಲ್ಲುವುದಾಗಿ ಪ್ರಮಾಣ ಮಾಡಿದ್ದರಂತೆ. ಅಂದು ಸೂರ್ಯ ಗ್ರಹಣ ಆಗಿತ್ತಂತೆ. ಕತ್ತಲಾಯಿತು ಎಂದು ಖಳನು ಬೀಗಿ ಹೊರ ಬಂದನಂತೆ. ನಾಲ್ಕೂವರೆ ನಿಮಿಷದಲ್ಲಿ ಗ್ರಹಣ ಕಳೆದು ಮತ್ತೆ ದಿನಕರ ತೋರಿದನಂತೆ. ಪ್ರಮಾಣ ಮಾಡಿದವನು ಖಳನನ್ನು ಕೊಂದು ಕಳೆದನಂತೆ. ಇವೆಲ್ಲ ನಮ್ಮ ಪುರಾಣಗಳ ಕಲ್ಪನೆ ಮತ್ತು ವೈಜ್ಞಾನಿಕಕ್ಕೆ ಸಂಪರ್ಕ ಕಲ್ಪಿಸಿದ ಕತೆಗಳಾಗಿವೆ.
ಏಪ್ರಿಲ್ 8ರ ಸೂರ್ಯ ಗ್ರಹಣವು ತನ್ನ ಪೂರ್ಣ ಪಯಣದಲ್ಲಿ ಬೇರೆ ಬೇರೆ ಕಡೆ ಕಾಣುತ್ತ ಒಟ್ಟು 28 ನಿಮಿಷಗಳ ಅವಧಿಯದಾಗಿರುತ್ತದೆ. ಒಂದು ನಿಶ್ಚಿತ ಸರಾಸರಿ ಅವಧಿ 4 ನಿಮಿಷವಾಗಿರುತ್ತದೆ. ಭಾರತದಲ್ಲಿ ಕಾಣುವ ಸೂರ್ಯ ಗ್ರಹಣಕ್ಕೆ ಇನ್ನೂ ಏಳು ವರುಷ ಕಾಯಬೇಕಾಗಿದೆ. 2031ರ ಮೇ 21ರಂದು ನಡೆಯುವ ಸೂರ್ಯ ಗ್ರಹಣವು ಭಾರತದವರು ನೋಡಲು ಸಾಧ್ಯವಾಗುವ ಸೂರ್ಯ ಗ್ರಹಣವಾಗಿದೆ. ಮುಖ್ಯವಾಗಿ ತೆಂಕಣ ಭಾರತದಲ್ಲಿ ಕೊಚ್ಚಿ, ಅಲಪ್ಪುಳ, ಚಾಲಕುಡಿ, ಕೊಟ್ಟಾಯಂ, ತಿರುವೆಳ್ಳ, ಪಟ್ಟಣಂತಿಟ್ಟ, ತೇನಿ, ಮಧುರೈ, ಇಳಯಂಗುಡಿ, ಕಾರೈಕ್ಕುಡಿ, ವೇದಾರಣ್ಯಂ ಎಂದು ಮುಖ್ಯವಾಗಿ ಕೇರಳ ತಮಿಳುನಾಡುಗಳಲ್ಲಿ ಕಾಣಿಸುತ್ತದೆ. ಗ್ರಹಣ ಬೇಗನೆ ಬಿಡುವುದರಿಂದ ಸೂರ್ಯನ ಬಿಸಿಯಿಂದ ನೀವು ಪಾರಾಗುವುದು ಖಂಡಿತ ಸಾಧ್ಯವಿಲ್ಲ.
ಬರಹ: ಪೇರೂರು ಜಾರು, ಹಿರಿಯ ಸಂಪಾದಕರು