ಪಚ್ಚನಾಡಿ ದೇವಿ ನಗರ ಶ್ರೀ ದೇವಿ ಫ್ರೆಂಡ್ಸ್ ವೇದಿಕೆಯಲ್ಲಿ ಆಶ್ರಯ ಕಾಲನಿ ಅಂಗನವಾಡಿ ಕೇಂದ್ರದ ವತಿಯಿಂದ ವಿಜೃಂಭಣೆಯ ಮಕ್ಕಳ ದಿನಾಚರಣೆ

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ದೇವಿನಗರ ಆಶ್ರಯ ಕಾಲನಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮವು ದಿನಾಂಕ 14-11-2022 ಸೋಮವಾರ ಬೆಳಿಗ್ಗೆ 10-00 ಗಂಟೆಗೆ ಅತಿಥಿಗಳಾಗಿ ಆಗಮಿಸಿದ್ದ ಸ್ಥಳೀಯ ಜನಪ್ರತಿನಿದಿ ಶ್ರೀಮತಿ ಸಂಗೀತ ನಾಯಕ್, ಅಂಗನವಾಡಿ ಮೇಲ್ವಿಚಾರಕರು ಶ್ರೀಮತಿ ಭವ್ಯ,ಸಮಾಜ ಸೇವಕ, ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಗೌರವಧ್ಯಕ್ಷರಾದ ಮೋಹನ್ ಪಚ್ಚನಾಡಿ, NGO ನಾಗರಾಜ್ ಬಜಾಲ್, NGO ಶ್ರೀಮತಿ ರೂಪ, ಶ್ರೀ ದೇವಿ ಫ್ರೆಂಡ್ಸ್ ಅಧ್ಯಕ್ಷರು ರಾಜೇಶ್ ಕುಲಾಲ್, ಶ್ರೀಮತಿ ಭವಾನಿ ಟೀಚರ್, ಜನಾರ್ದನ ಗಟ್ಟಿ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂತೋಷನಗರ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭವಾನಿ ಟೀಚರ್ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಸ್ಥಳೀಯ ಜನಪ್ರತಿನಿದಿ ಸಂಗೀತ ನಾಯಕ್ ಮನೆಯಲ್ಲಿ ಎರಡು ಮಕ್ಕಳನ್ನು ನೋಡಿಕೊಳ್ಳುವುದೇ ಕಷ್ಟ. ಅಂತಹದರಲ್ಲಿ 24 ಮಕ್ಕಳನ್ನು ನೋಡಿಕೊಳ್ಳುವುದೆಂದರೆ ತುಂಬಾ ಕಷ್ಟದ ಮಾತು.. ಅದೂ ಅಲ್ಲದೆ ಸರಕಾರಿ ಸೌಲಭ್ಯಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯಾರದಾಗಿರುತ್ತದೆ. ಇಷ್ಟೊಂದು ಕೆಲಸ ನಿಭಾಯಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಅಭಿನಂದನೆಗೆ ಅರ್ಹರು ಎಂದು ಪ್ರಶಂಸಿದರು. ಮಕ್ಕಳ ದಿನಾಚರಣೆಯ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದ ಜನಾರ್ದನ ಗಟ್ಟಿಯವರನ್ನು ಅಭಿನಂದಿಸಿದರು.
ಬಳಿಕ ಮಾತನಾಡಿದ ಮೋಹನ್ ಪಚ್ಚನಾಡಿ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಾ “ಮನೆ ತುಂಬಾ ಮಕ್ಕಳಿರಲವ್ವಾ ” ಎಂಬ ನಾಣ್ಣುಡಿಯನ್ನು ನೆನಪಿಸಿಕೊಳ್ಳುತ್ತಾ ಈಗ ಮನೆ ತುಂಬಾ ಮಕ್ಕಳನ್ನು ನೆನಪಿಸಿಕೊಳ್ಳಬೇಕೆಂದರೆ ಅಂಗನವಾಡಿಗೆ ಅಥವಾ ಪ್ಲೇಸ್ಕೂಲ್ ಗೆ ಹೋಗಬೇಕು. ಯಾಕೆಂದರೆ ಆರತಿಗೊಂದು ಕೀರ್ತಿಗೊಂದು ಇತ್ತು.

ಈಗ ಮನೆಗೊಂದೇ ಮಗು ಎಂಬತಾಗಿದೆ ಎಂದರು. ಈ ದಿನ ಸನ್ಮಾನಿತರಾದ ಭವಾನಿ ಟೀಚರ್ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡುತ್ತ ಪ್ರತಿಯೊಬ್ಬರೂ ತಮ್ಮ ವೃತ್ತಿ ಧರ್ಮವನ್ನು ಶ್ರದ್ದೆಯಿಂದ ಹಾಗೂ ಪ್ರೀತಿಯಿಂದ ಮಾಡಿದರೆ ಸನ್ಮಾನಗಳು ತನ್ನಿಂತಾನೆ ಹುಡುಕಿಕೊಂಡು ಬರುತ್ತವೆ. ಇದಕ್ಕೆ ಭವಾನಿ ಟೀಚರ್ ಒಂದು ಉದಾಹರಣೆ ಎಂದರು. ಯಾಕೆಂದರೆ ಪಕ್ಕದ ಸಂತೋಷ್ ನಗರದಲ್ಲಿ ಸರಕಾರದ ಅನುದಾನ ರಹಿತವಾಗಿ, ಕೊಡುಗೈ ದಾನಿಗಳ ಸಹಕಾರದಿಂದ ಅಂಗನವಾಡಿ ಕಟ್ಟಡ ರಚನೆ ಮಾಡಿ ಅದಕ್ಕೆ ಸರಕಾರದಿಂದ 5 ಸೆಂಟ್ಸ್ ಜಾಗವನ್ನು ಮಂಜೂರಾತಿ ಮಾಡಿಸಿ ಕ್ರಮೇಣ ಅಂಗನವಾಡಿ ಕಟ್ಟಡ ಶಿಥಿಲಗೊಂಡ ಸಮಯದಲ್ಲಿ ಸರಕಾರದ ಅನುದಾನವನ್ನು ಕಾಯದೆ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಗೆ ಮನವಿ ಮಾಡಿ, ಆ ಮೂಲಕ ಶಿಥಿಲಗೊಂಡ ಅಂಗನವಾಡಿ ಕಟ್ಟಡವನ್ನು ಪುನರ್ ನಿರ್ಮಿಸಿ ತನ್ನ ಕರ್ತವ್ಯವನ್ನು ಶ್ರದ್ದಾಪೂರ್ವಕವಾಗಿ ಪ್ರೀತಿಯಿಂದ ನಿರ್ವಹಿಸಿರುತ್ತಾರೆ. ಆ ಕಾರಣಕ್ಕಾಗಿ ಅಭಿನಂದನೀಯರು. ಹಾಗೆಯೇ ಆಶ್ರಯ ಅಂಗನವಾಡಿ ಕೇಂದ್ರದ ಹರಿಣಾಕ್ಷಿ ಟೀಚರ್ ನವರನ್ನು ಶ್ಲಾಘಿಸುತ್ತಾ ಅವರೂ ಕೂಡ ತನ್ನ ಗೌರವಧನದಲ್ಲಿ ಬಾಡಿಗೆಯ ಕಟ್ಟಡದಲ್ಲಿ ಅಂಗನವಾಡಿಯನ್ನು ನಡೆಸುತ್ತಾ ತನ್ನ ಕರ್ತವ್ಯವನ್ನು ಶೃದ್ದಾಪೂರ್ವಕವಾಗಿ ನಡೆಸಿಕೊಂಡಿರುವುದು ಅಲ್ಲದೆ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಗೆ ಮನವಿ ಸಲ್ಲಿಸಿ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವನ್ನು ಉಚಿತವಾಗಿ ನಡೆಸಿಕೊಂಡು ಬರುತ್ತಿರುವುದು ಅವರ ವೃತ್ತಿ ಕ್ಷೇತ್ರದಲ್ಲಿರುವ ಶ್ರದ್ದೆ ಮತ್ತು ಪ್ರೀತಿಯನ್ನು ತೋರಿಸುತ್ತದೆ. ಅಲ್ಲದೆ ಸದಾ ಒಂದಿಲ್ಲೊಂದು ಕಾರ್ಯಕ್ರಮವನ್ನು ನಡೆಸುತ್ತಾ ವಾರ್ಷಿಕವಾಗಿ ಬಹಳಷ್ಟು ಕಾರ್ಯಕ್ರಮವನ್ನು ನಡೆಸುವ ಮೂಲಕ ಸದಾ ಚಟುವಟಿಕೆಯಲ್ಲಿರುವ ಹರಿಣಾಕ್ಷಿ ಟೀಚರ್ ರವರು ಅಭಿನಂದನೆಗೆ ಅರ್ಹರು ಎಂದು ಹೇಳಿದರು.


ನಾಗರಾಜ್ ಬಜಾಲ್ ರವರು ಪೋಷಕರನ್ನು ಉದ್ದೇಶಿಸಿ ಮಾತನಾಡಿ ನಿಮ್ಮ ಮಕ್ಕಳನ್ನು ಇವತ್ತು ಬೇರೆ ಬೇರೆ ಛದ್ಮವೇಶ ಸ್ಪರ್ಧೆಗೆ ಕರೆತಂದಿರುವಿರಿ. ಅದು ಸೈನಿಕ ಆಗಿರಬಹುದು ಅಥವಾ ರೈತ ಆಗಿರಬಹುದು. ಆ ಒಂದು ಮನಸ್ಥಿತಿಯನ್ನು ಮುಂದುವರಿಸಬೇಕು. ಅದರ ಬದಲು ಮಗ ಇಂಜಿನಿಯರ್ ಆಗಬೇಕೆಂದು ಅಥವಾ ವೈದ್ಯ ಆಗಬೇಕೆಂದು ಹಠಕ್ಕೆ ಬೀಳದಿರಿ. ದೇಶಕ್ಕೆ ಅನ್ನ ಕೊಡುವ ರೈತನೂ ಬೇಕು. ದೇಶಕ್ಕಾಗಿ ಗಡಿ ಕಾಯುವ ಸೈನಿಕನೂ ಬೇಕು. ಬರೀ ವೈದ್ಯರೋ ಅಥವಾ ಇಂಜಿನಿಯರೋ ಇದ್ದರೆ ಸಾಲದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಭವ್ಯ ಮಾತನಾಡುತ್ತಾ ಚಿಕ್ಕ ಮಕ್ಕಳ ಆರೈಕೆ ಪೋಷಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಪೋಷಕರು ಗಮನಹರಿಸಬೇಕೆಂದು ಹೇಳಿ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯವನ್ನು ಕೋರಿದರು .


ಅಂಗನವಾಡಿ ಪುಟಾಣಿ ಮಕ್ಕಳಿಗೆ ಛದ್ಮವೇಶ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಒಂದು ವರ್ಷದೊಳಗಿನ, ಒಂದರಿಂದ ಮೂರು ವರ್ಷದೊಳಗೆ ಹಾಗೂ ಮೂರು ವರ್ಷದಿಂದ ಆರು ವರ್ಷದೊಳಗಿನ ಮೂರು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಿ ಪ್ರಥಮ ದ್ವಿತೀಯ ಬಹುಮಾನ ವಿತರಿಸಿದ್ದು ಅಲ್ಲದೆ ಭಾಗವಹಿಸಿದ ಎಲ್ಲಾ 37 ಮಕ್ಕಳಿಗೂ ಸಮಾಧಾನಕರ ಬಹುಮಾನ ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು. ಮಕ್ಕಳ ಪೋಷಕರು ಹಾಗೂ ನಾಗರಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಕಾರ್ಯಕ್ರಮವನ್ನು ಗಣೇಶ್ ಕುಮಾರ್ ದೇವಿನಗರ ನಿರೂಪಿಸಿ ಶ್ರೀಮತಿ ಹರಿಣಾಕ್ಷಿ ಟೀಚರ್ ಮತ್ತು ಸಹಾಯಕಿ ಶ್ರೀಮತಿ ಮಾಲತಿ ನಿರ್ವಹಿಸಿದರು. ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಜೊತೆ ಜನಾರ್ದನ ಗಟ್ಟಿ ಸಹಕರಿಸಿದರು.

Related Posts

Leave a Reply

Your email address will not be published.