ತಲಪಾಡಿ : ಸ್ಥಳೀಯರಿಗೆ ಶಾಪವಾದ ರಸ್ತೆ ಸಮಸ್ಯೆ
ಮಂಜೇಶ್ವರ : ತಪಾಡಿಯಿಂದ ಕಾಸರಗೋಡು ತನಕದ ರಾ.ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಬೃಹತಕಾರದ ಹೊಂಡಗಳನ್ನು ಜಲ್ಲಿ ಕಲ್ಲು ಹಾಗೂ ಜಲ್ಲಿ ಹುಡಿಯನ್ನು ಹಾಕಿ ಮುಚ್ಚುತ್ತಿರುವುದು ಪ್ರಯಾಣಿಕರಿಗೂ ಸ್ಥಳೀಯರಿಗೂ ಶಾಪವಾಗಿ ಪರಿಣಮಿಸಿದೆ.ರಾಷ್ಟ್ರೀಯ ಹೆದ್ದಾರಿ ಪುನರ್ ನವೀಕರಣದ ಭಾಗವಾಗಿ ರಸ್ತೆ ನಿರ್ಮಾಣ ನಡೆಯುತ್ತಿರುವ ಭಾಗಗಳಲ್ಲಿ ಮಳೆಗಾಲದಲ್ಲಿ ಮಳೆ ನೀರು ಕಟ್ಟಿ ನಿಂತು ರಸ್ತೆ ಬಹುತೇಕ ಭಾಗಗಳಲ್ಲಿ ಕುಸಿದು ಹೋಗಿತ್ತು.
ರಾ.ಹೆದ್ದಾರಿ ನಿರ್ಮಾಣದ ಕಾಮಗಾರಿಯಲ್ಲಿ ಹಲವು ಸ್ಥಳಗಳಲ್ಲಿ ಚರಂಡಿಗಳು ಮುಚ್ಚಿ ಹೋಗಿ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಗಳಲ್ಲೇ ಮಳೆ ನೀರು ಹರಿದು ಹೋಗಿ ಅದೇ ನೀರು ರಸ್ತೆಯಲ್ಲೇ ಕಟ್ಟಿ ನಿಂತು ರಸ್ತೆ ಕುಸಿಯಲು ಕಾರಣವಾಗಿದೆ. ತೂಮಿನಾಡು, ಕುಂಜತ್ತೂರು, ಉದ್ಯಾವರ, ಉಪ್ಪಳ ಗೇಟ್ ಸಮೀಪ, ಕೊಪ್ಪರ ಬಝಾರ್, ಮೊಗ್ರಾಲ್ ಪುತ್ತೂರು ಮೊದಲಾದ ಸ್ಥಳಗಳಲ್ಲಿ 10 ರಿಂದ 20 ಮೀಟರುಗಳ ತನಕ ಕುಸಿದ ರಸ್ತೆಯನ್ನು ಜಲ್ಲಿ ಕಲ್ಲು ಹುಡಿಗಳಿಂದ ತುಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ದಾರಿಯಾಗಿ ಆಂಬ್ಯುಲೆನ್ಸ್ ಸೇರಿದಂತೆ ಇತರ ವಾಹನಗಳು ಸಂಚಾರ ನಡೆಸಲು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಶೀಘ್ರದಲ್ಲಿ ಸ್ಥಳೀಯರಿಗೆ ತೊಂದರೆ ಅಗದ ರೀತಿಯಲ್ಲಿ ರಸ್ತೆ ಡಾಮರೀಕರಣ ಮಾಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.