ತೌಡುಗೋಳಿ : ನಿಯಂತ್ರಣ ತಪ್ಪಿದ ಕಾರು, ಬೈಕ್, ಬಸ್ ನಿಲ್ದಾಣಕ್ಕೆ ಢಿಕ್ಕಿ
ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿದ ಕಾರು ಜಂಕ್ಷನ್‍ನಲ್ಲಿ ತಿರುವು ಪಡೆದುಕೊಳ್ಳುತ್ತಿರುವಂತೆಯೇ ರಸ್ತೆಯ ಪಕ್ಕದಲ್ಲಿದ್ದ ಆಕ್ಟಿವಾ ಸ್ಕೂಟರ್‍ಗೆ ಢಿಕ್ಕಿ ಹೊಡೆದು ಬಳಿಕ ಪ್ರಯಾಣಿಕರ ತಂಗುದಾಣಕ್ಕೆ ಢಿಕ್ಕಿಯಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೌಡುಗೋಳಿ ಕ್ರಾಸ್ ನಲ್ಲಿ ನಡೆದಿದೆ.
ಘಟನೆಯಿಂದ ಸ್ಕೂಟರ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಂಗುದಾಣದ ಮುಂಭಾಗದ ಕಿರುಗೋಡೆ ನೆಲಕ್ಕುರುಳಿದೆ. ಅದೇ ಸಮಯದಲ್ಲಿ ಪ್ರಯಾಣಿಕರ ತಂಗುದಾಣದಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಕಾರು ಧಾವಿಸಿ ಬರುತ್ತಿರುವುದನ್ನು ಕಂಡು ಅತ್ತ ಓಡಲಾರದೆ ಇತ್ತ ಧರೆಯ ಹಾರಲಾರದ ಸಂದಿಗ್ಧತೆಯಲ್ಲಿ ಸಿಲುಕಿ ಬಚಾವಾದರು.
ನರಿಂಗಾನ ಗ್ರಾಮದ ಶಾಂತಿಪಳಿಕೆ ನಿವಾಸಿ ಅಶ್ರಫ್ ವಿದೇಶದಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಬೆಳಗ್ಗೆ ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಇನ್ನೇನು ಎರಡು ಕಿ. ಮೀ. ದೂರ ಸಂಚರಿಸಿದರೆ ಮನೆ ತಲುಪಬೇಕಿತ್ತು. ಸಂಬಂಧಿ ಕಾರು ಚಲಾಯಿಸುತ್ತಿದ್ದು ಅದೃಷ್ಟವಶಾತ್ ಚಾಲಕ ಹಾಗೂ ಅಶ್ರಫ್ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.