ಉಡುಪಿ: ಕಾನೂನು ಹೋರಾಟಕ್ಕಿಂತ ರಾಜಿಸಂಧಾನ ಸವಾಲಿನ ಕೆಲಸ-ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್
ಉಡುಪಿ: ಕಾನೂನು ಹೋರಾಟ ನಡೆಸಬಹುದು. ಅದು ವಕೀಲರಿಗೂ ಕಕ್ಷಿದಾರರಿಗೂ ಸುಲಭ. ಆದರೆ ರಾಜಿ ಸಂಧಾನ ಕಷ್ಟ ಮತ್ತು ಸವಾಲಿನ ಕೆಲಸವಾಗಿದೆ. ಅಂತಹ ಸವಾಲಿನ ಕೆಲಸವನ್ನು ಉಡುಪಿ ನ್ಯಾಯಾಲಯ ಮೆಟ್ಟಿನಿಂತು, ಸಹಸ್ರಾರು ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಹೇಳಿದರು.
ಅವರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಮೂರನೇ ಲೋಕ ಅದಾಲತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಲೋಕ ಅದಾಲತ್ ಉದ್ಘಾಟನೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ. ಶಾಂತವೀರ ಶಿವಪ್ಪ ನೆರವೇರಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್, ನ್ಯಾ.ದಿನೇಶ್ ಹೆಗ್ಡೆ ನ್ಯಾಯಾಧೀಶರುಗಳು, ವಕೀಲರು ಉಪಸ್ಥಿತರಿದ್ದರು.
ಈ ವರ್ಷದ ಲೋಕ ಅದಾಲತ್‍ನಲ್ಲಿ ಖಾಸಗಿ ವಿಮಾ ಕಂಪೆನಿಯೊಂದು ರಾಜಿ ಸಂಧಾನದ ಮೂಲಕ ಕಕ್ಷಿದಾರರೊಬ್ಬರಿಗೆ ಸುಮಾರು ತೊಂಬತ್ತು ಲಕ್ಷಕ್ಕೂ ಅಧಿಕ ಮೊತ್ತದ ಪರಿಹಾರ ಹಣ ಪಾವತಿಸಿದೆ. ಇದು ಉಡುಪಿ ನ್ಯಾಯಾಲಯದ ಇತಿಹಾಸದಲ್ಲೇ ಮೊದಲನೆಯ ಪ್ರಕರಣವಾಗಿದೆ ಎಂದು ಹಿರಿಯ ವಕೀಲರು ಸಭೆಗೆ ತಿಳಿಸಿದರು.