ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಆದರ್ಶ ಚಾರಿಟೇಬಲ್ ಟ್ರಸ್ಟ್ (ರಿ.), ಆದರ್ಶ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಮತ್ತು ಆದರ್ಶ ಆಸ್ಪತ್ರೆ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ನವೆಂಬರ್ ೧೪ ರಂದು ಆಚರಿಸಲಾಗುವ ವಿಶ್ವ ಮಧುಮೇಹ ದಿನದ ಅಂಗವಾಗಿ ‘ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ’ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಜರುಗಿತ್ತು.
ಈ ಕಾರ್ಯಕ್ರಮವನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಮಯದಲ್ಲಿ ಮಾತನಾಡಿದ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಜಿ.ಎಸ್. ಚಂದ್ರಶೇಖರ್ “ಹೆಚ್ಚುತಿರುವ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಅತೀ ಹೆಚ್ಚಾಗಿ ಬಾಧಿಸಲಿರುವ ಈ ಕಾಯಿಲೆಯನ್ನು ನಿಯಂತ್ರಿಸಲು ಅದರ ಮೂಲ ಕಾರಣದ ಬಗ್ಗೆ ಅವಲೋಕನ ಮಾಡಬೇಕಾಗಿದೆ. ಮಧುಮೇಹಕ್ಕೆ ಮುಖ್ಯವಾದ ಕಾರಣವೇ ನಮ್ಮ ಜೀವನಶೈಲಿ. ಭಾರತವನ್ನು ಪರಿಗಣಿಸಿದರೆ ೩೫% – ೪೦% ಅತಿಯಾದ ತೂಕದ ಜನರಿದ್ದಾರೆ. ಇಂಥವರು ಬಹಳ ಸುಲಭವಾಗಿ ಮಧುಮೇಹಕ್ಕೆ ತುತ್ತಾಗುತ್ತಾರೆ. ಇದರಿಂದ ಕೇವಲ ಮಧುಮೇಹ ಮಾತ್ರವಲ್ಲದೆ ರಕ್ತದೊತ್ತಡ, ಹೃದಯಾಘಾತ, ಸ್ಟ್ರೋಕ್ ಆಗುವ ಸಾಧ್ಯತೆಗಳು ಕೂಡ ಇವೆ. ಈ ದೇಹದ ಅತಿಯಾದ ತೂಕಕ್ಕೆ ಪ್ರಮುಖವಾದ ಕಾರಣವೆಂದರೆ, ಆಹಾರ ಪದ್ಧತಿ ಸರಿಯಿಲ್ಲದಿರುವುದು ಮತ್ತು ವ್ಯಾಯಾಮ ಕಡಿಮೆಯಾಗಿರುವುದು. ಇದರೊಂದಿಗೆ ಅತಿಯಾದ ಒತ್ತಡ ಮತ್ತು ಅನುವಂಶಿಕ ಕೂಡ ಕಾರಣವಾಗಿದೆ. ಆದ್ದರಿಂದ ಹೆಚ್ಚುತ್ತಿರುವ ಈ ಸಮಸ್ಯೆಯನ್ನ ಕಡಿಮೆಗೊಳಿಸಬೇಕಾದರೆ, ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ” ಎಂದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ ಬೈಂದೂರು, ಉಡುಪಿ ಸಿವಿಲ್ ನ್ಯಾಯಾಧೀಶರಾದ ಶರ್ಮಿಳಾ, ಆದರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಪ್ರೊ| ಎ. ರಾಜಾ ಮತ್ತು ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಮೂತ್ರಪಿಂಡ ಖಾಯಿಲೆಗಳ ತಪಾಸಣೆ, ನರರೋಗ ತಪಾಸಣೆ, ಹೃದಯ ರೋಗದ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ರಕ್ತದ ಸಕ್ಕರೆ ಅಂಶ, ರಕ್ತದ ಕೊಬ್ಬಿನಾಂಶ ಹಾಗೂ ಇ.ಸಿ.ಜಿ ಪರೀಕ್ಷೆಗಳಿಗೆಂದು ಮಾಡಲಾದ ಸ್ಟಾಲ್ಗಳಲ್ಲಿ, ಭಾಗವಹಿಸಿದವರು ಈ ಉಚಿತ ಆರೋಗ್ಯ ತಪಾಸಣೆ ಮಾಡಸಿ ಉಪಯೋಗವನ್ನು ಪಡೆದುಕೊಂಡರು. ಅಲ್ಲದೆ ಮಧುಮೇಹದ ಬಗ್ಗೆ ಮಾಹಿತಿ ನೀಡುವ ನಾನಾ ಪ್ರಾತ್ಯಕ್ಷಿತೆಗಳ ಪ್ರದರ್ಶನ ಕೂಡ ಮಾಡಲಾಗಿತ್ತು.