ಉಡುಪಿ: ಕನ್ನಡ ನಾಮಫಲಕ ಜನ ಜಾಗೃತಿ ಆಂದೋಲನ :ಕರವೇ ಕಾರ್ಯಕರ್ತರಿಂದ ನಗರಸಭೆಗೆ ಮುತ್ತಿಗೆ ಯತ್ನ
ಉಡುಪಿ: ಕರವೇ ವತಿಯಿಂದ ಕನ್ನಡ ನಾಮಫಲಕ ಜನ ಜಾಗೃತಿ ಆಂದೋಲನ ಉಡುಪಿಯಲ್ಲಿ ನಡೆಯಿತು. ಕರವೇ ಕಾರ್ಯಕರ್ತರು ಕರಪತ್ರ ಹಂಚುತ್ತಾ ಕರಾವಳಿ ಬೈಪಾಸ್ ಬನ್ನಂಜೆ ಮಾರ್ಗವಾಗಿ ಸಿಟಿ ಬಸ್ ಸ್ಟಾಂಡ್, ಸರ್ವಿಸ್ ಬಸ್ ಸ್ಟ್ಯಾಂಡ್ ಮೂಲಕ ಜೋಡುಕಟ್ಟೆ ಮಾರ್ಗವಾಗಿ ನಗರಸಭೆಗೆ ತೆರಳಿದರು.
ನಗರಸಭೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗಡೆ, ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ರಾಜ್ಯಾದ್ಯಂತ ಸುಗ್ರೀವಾಜ್ಞೆ ಜಾರಿಗೆ ತಂದಿದೆ. ಅಂಗಡಿ ಮುಂಗಟುಗಳಲ್ಲಿ ಶೇಕಡ 60 ಭಾಗ ಕನ್ನಡಕ್ಕೆ ಮೀಸಲಿಟ್ಟಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಆಂಗ್ಲ ಮಾಧ್ಯಮ ನಾಮಫಲಕಗಳು ರಾರಾಜಿಸುತ್ತಿವೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಎಸಿ ರೂಮ್ ನಿಂದ ಆಚೆ ಬಂದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.