ಉಡುಪಿ: ಪ್ರತಿಷ್ಠಾಪನೆ ಬಳಿಕ ಭಕ್ತರಿಗೆ ಬಾಲರಾಮನ ದರ್ಶನಕ್ಕೆ ಅವಕಾಶವಿದೆ: ಪೇಜಾವರ ಶ್ರೀ
ಉಡುಪಿ: ದೇಶದಲ್ಲಿ ರಾಮನ ಭಕ್ತರು ಸಂತರು ಮಹಂತರು ಬಹಳ ಇದ್ದಾರೆ. ಜನಪ್ರತಿನಿಧಿಗಳು, ದಾನಿಗಳು ಭಕ್ತರೆಲ್ಲ ಆಮಂತ್ರಿತರೇ. ಪ್ರಾಣಪ್ರತಿಷ್ಠೆಗೆ ಪ್ರಾತಿನಿಧ್ಯ ಇಟ್ಟುಕೊಂಡು ಆಯ್ಕೆ ಮಾಡಲಾಗಿದೆ ಆಹ್ವಾನ ಕೊಡಲಾಗಿದೆ. ಸೀಮಿತ ಸ್ಥಳ ಇರೋದರಿಂದ ಎಲ್ಲರೂ ಭಾಗಿಯಾಗೋದು ಕಷ್ಟ ಎಂದು ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಆಹ್ವಾನ ಗೊಂದಲ ಬಗ್ಗೆ ಪೇಜಾವರ ಮಠಾಧೀಶ, ಟ್ರಸ್ಟಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರತಿಷ್ಟಾಪನೆ ನಂತರ ಕೋಟ್ಯಾಂತರ ಭಕ್ತರಿಗೆ ಬಾಲರಾಮನ ದರ್ಶನಕ್ಕೆ ಅವಕಾಶ ಇದೆ. ನಾಡಿದ್ದು ಮೈದಾನದಲ್ಲಿ ಕಾರ್ಯಕ್ರಮ ಮಾಡಲು ಸಾದ್ಯವಿಲ್ಲ. ಮಂದಿರದ ಸ್ಥಳಾವಕಾಶ ಬಹಳ ಸೀಮಿತವಾಗಿದೆ. ಭಕ್ತರು ಯಾರೂ ತಪ್ಪು ತಿಳಿಯಬಾರದು. ಆಹ್ವಾನ ಇದ್ದವರು ಖಂಡಿತಾ ಭಾಗಿಯಾಗಬೇಕು. ಉಳಿದೆಲ್ಲರು ಮುಂದಿನ ದಿನದಲ್ಲಿ ಅಯೋಧ್ಯೆಗೆ ಬರಬೇಕು. ಅಯೋಧ್ಯೆಯಲ್ಲಿ ಅನೇಕ ಟೆಂಟ್, ಶೆಡ್ ತಯಾರಾಗಿದೆ. ಧನುರ್ಮಾಸ ಇರೋದರಿಂದ ಹೊರಗೆ ಮಲಗಲು ಸಾಧ್ಯವಿಲ್ಲ ಎಂದರು.
ಅಯೋಧ್ಯೆಯಲ್ಲಿ ಇರುವುದು ಬಿಜೆಪಿ ರಾಮ ಮಂದಿರ ಎಂದಿರುವ ಮಾಜಿ ಸಚಿವ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಮ ಬೇರೆಯಲ್ಲ ಕೃಷ್ಣ ಬೇರೆಯಲ್ಲ. ದೇವರು ಮಂದಿರದಲ್ಲಿ ಮಾತ್ರವಲ್ಲ ಎಲ್ಲರೊಳಗಿದ್ದಾನೆ. ಸಿದ್ದರಾಮಯ್ಯನೊಳಗೂ ಇದ್ದಾನೆ. ಬಿಜೆಪಿ ಮಂದಿರವೆಂದು ಯಾಕೆ ಹಾಗೆ ಅಂದುಕೊಳ್ಳಬೇಕು? ನಾವು ಭಾರತೀಯರು ಈ ಮಂದಿರ ಎಲ್ಲರದ್ದೂ. ಬಿಜೆಪಿಯವರು ಮಾತ್ರ ದೇಣಿಗೆ ಕೊಟ್ಟದ್ದಾ? ಇದು ಪಕ್ಷದ ಮಂದಿರ ಹೇಗೆ ಸಾಧ್ಯ? ಪಕ್ಷದ, ಸರಕಾರದ ದೇಣಿಗೆಯಿಂದ ಮಂದಿರ ಕಟ್ಟಿದ್ದಲ್ಲ. ಜಗತ್ತಿನ ಭಕ್ತರ ದೇಣಿಗೆಯಿಂದ ಕಾರ್ಯಕ್ರಮ ನಡೆಯುತ್ತಿದೆ ಎಂದಿದ್ದಾರೆ.
ಹುಬ್ಬಳ್ಳಿ ಕರಸೇವಕರ ಕೇಸ್ ರೀ ಓಪನ್ ಬಗ್ಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಂದಿನ ಕರ ಸೇವಕರ ಬಂಧನ ಮಾಡಲಾಗಿದೆ. ಇದು ಹಿಂದೂಗಳನ್ನು ಮಟ್ಟ ಹಾಕುವ ಪ್ರಯತ್ನವೆಂದು ನಾವು ಭಾವಿಸುತ್ತೇವೆ. ಇಂತಹ ಕಾಲದಲ್ಲಿ ಈ ಬೆಳವಣಿಗೆ ಯಾಕೆ? ಈ ಬೆಳವಣಿಗೆ ಕೋಲಾಹಲಕ್ಕೆ ಕಾರಣವಾಗುತ್ತದೆ. ಗೊಂದಲವಾಗದಂತೆ ಸರಕಾರ ಮುಂಜಾಗೃತೆ ವಹಿಸಬೇಕು ಎಂದು ಹೇಳಿದ್ದಾರೆ. ಇನ್ನು ಪ್ರಾಣಪ್ರತಿಷ್ಠೆ ಜಗತ್ತಿನ ಉತ್ಸವ. ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರು ಇದ್ದಾರೆ. ಎಲ್ಲರ ಭಾವನೆ ಮನ್ನಿಸಿ ಗೌರವಿಸಿ ರಜೆ ಘೋಷಿಸಿ. ಉಡುಪಿ ಶಾಸಕರು ರಜೆ ಕೋರಿದ್ದಾರೆ ನಾನು ರಜೆಯನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.