ಡ್ರಗ್ಸ್ ಎಂಬ ಮದ್ದು ಮಾದಕ ಆಗುವುದು ಹೇಗೆ?

ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಒಳಾಡಳಿತ ಮಂತ್ರಿಗಳಾದ ಜಿ. ಪರಮೇಶ್ವರ್ ಅವರು ಪೋಲೀಸು ಅಧಿಕಾರಿಗಳ ಸಭೆಯಲ್ಲಿ ಹೇಳಿದರು. ಬೆಂಗಳೂರು ಮತ್ತು ಮಂಗಳೂರುಗಳ ಮಾದಕ ದ್ರವ್ಯಗಳ ಲೋಕ, ಆಫ್ರಿಕಾದ ವಿದ್ಯಾರ್ಥಿಗಳ ಡ್ರಗ್ಸ್ ಕೈಚಳಕವನ್ನೂ ಅವರು ಪ್ರಸ್ತಾಪ ಮಾಡಿದರು.

ಜಿ. ಪರಮೇಶ್ವರ್

ಈ ಶಬ್ದ ನೋಡಿ ಡ್ರಗ್ಸ್. ಡ್ರಗ್ಸ್ ಎಂದರೆ ಮದ್ದುಗಳು. ಮದ್ದುಗಳಿಂದ ಲೋಕವನ್ನು ಮುಕ್ತ ಮಾಡುವುದು ಸಾಧ್ಯವಿಲ್ಲ. ಮದ್ದುಗಳ ದುರ್ಬಳಕೆಯೇ ಮಾದಕ ದ್ರವ್ಯ ಇಲ್ಲವೇ ಮಾದಕ ವಸ್ತುಗಳು. ಆದ್ದರಿಂದ ಅದು ಕೂಡ ಡ್ರಗ್ಸ್.

ನಿದ್ರೆ ಬರಿಸುವ, ಮತಿ ತಪ್ಪಿಸುವ, ಉತ್ತೇಜಿಸುವ, ನೋವು ನಿವಾರಿಸುವ ಔಷಧಗಳನ್ನು ಅತಿಯಾಗಿ ಇಲ್ಲವೇ ಬೇರೆ ರೂಪದಲ್ಲಿ ಬಳಸುವುದೇ ಮಾದಕ ವಸ್ತುಗಳ ವ್ಯಸನ. ಕ್ರಿಸ್ತ ಪೂರ್ವದಲ್ಲೇ ಗ್ರೀಕರು ಅಫೀಮನ್ನು ನೋವು ನಿವಾರಕವಾಗಿ ಚಿಕಿತ್ಸೆಯಲ್ಲಿ ಬಳಸಿದ್ದನ್ನು ದಾಖಲಿಸಿದ್ದಾರೆ.

ಸಮಯದ ಗೊಂಬೆ ಚಿತ್ರದಲ್ಲಿ ರಾಜಕುಮಾರ್ ರೂಪಾದೇವಿ, ಆಪ್ ಕಿ ಕಸಮ್‌ನಲ್ಲಿ ರಾಜೇಶ್ ಖನ್ನಾ ಮುಮ್ತಾಜ್ ರಾಮರಸ ಕುಡಿದು ಆಕಾಶ ಕೆಳಗೇಕೆ ಬಂತು, ಈ ಭೂಮಿ ಮೇಲೇಕೆ ಹೋಯ್ತು ಎಂದು ವಾಲಿ ನಲಿಯುವರು.

ಈ ರಾಮರಸ ಮತ್ತು ಭಂಗಿ ಕುಡಿಯುವುದು ಇತ್ಯಾದಿ ಭಾರತದ ಪರಂಪರೆಯಲ್ಲಿ ಬೆರೆತು ಹೋದ ಸಂಗತಿಗಳಾಗಿವೆ. ಎಲ್ಲ ದೇಶಗಳಲ್ಲೂ ಈ ಮಾದಕ ಅಮಲು ರೀತಿ ರಿವಾಜುಗಳಿವೆ. ಮಾಜೀ ಕೇಂದ್ರ ಸರಕಾರದ ಬಿಜೆಪಿಯ ಮಾಜೀ ಮಂತ್ರಿ ಜಸ್ವಂತ ಸಿಂಗ್ ಅವರ ಮನೆಯ ಮದುವೆಯಲ್ಲಿ ಭಂಗಿ ಸೇದಿದ್ದು ನಾಲ್ಕಯ್ದು ವರುಷಗಳ ಹಿಂದೆ ಸುದ್ದಿ ಆಗಿತ್ತು. ರಾಜಸ್ತಾನ ಮತ್ತು ಬಡಗಣ ಭಾರತದ ಹಲವು ಕಡೆ ಹುಕ್ಕಾ ಮೂಲಕ ಭಂಗಿ ಸೇದುವುದು ಶುಭ ಸಮಾರಂಭಗಳ ಸಂಪ್ರದಾಯವಾಗಿದೆ. ರಾಮ ನವಮಿ, ಶಿವರಾತ್ರಿಗಳಲ್ಲಿ ರಾಮರಸ ಮಾಡಿ ಕುಡಿಸುವ ಸಂಪ್ರದಾಯ ಕೆಲವು ದೇವಾಲಯಗಳಲ್ಲಿ ಇದೆ. ಇದು ಸಹ ಉತ್ತರ ಭಾರತದಲ್ಲೇ ಹೆಚ್ಚು.

ಗಸಗಸೆ
ಗಸಗಸೆ

ಅಫೀಮು ಸೊನೆಯ ಬದಲು ಬಲಿಸಿ ಕೊಯ್ಲು ಮಾಡಿದರೆ ಅದು ಗಸಗಸೆ. ಗಸಗಸೆ ಎಂಬುದು ಆಹಾರ. ಗಸಗಸೆಯ ಭಾಗವನ್ನು ಬೇರೆ ರೀತಿ ಬಳಸಿದರೆ ಅದು ಮಾದಕ ದ್ರವ್ಯ. ಮಂಗಳೂರಿನಲ್ಲಿ, ಮಣಿಪಾಲದಲ್ಲಿ, ಬೆಂಗಳೂರಿನಲ್ಲಿ ಮಾದಕವಸ್ತು ಮಾರಾಟ, ಸೇವನೆ, ಬಂಧನ ಸದಾ ಸುದ್ದಿ ಮಾಡುತ್ತದೆ. ವಿದೇಶದ ಮುಖ್ಯವಾಗಿ ಆಫ್ರಿಕಾದ ಕೆಲವರು ಇದನ್ನು ಕಸುಬು ಮಾಡಿಕೊಂಡಿದ್ದಾರೆ. ಈ ಸ್ಥಳಗಳು ಮಾದಕ ದ್ರವ್ಯ ವಿಷಕ್ಕೆ ವಿದ್ಯಾರ್ಥಿಗಳು ಬಲಿ ಬೀಳುವುದನ್ನು ಸೂಚ್ಯವಾಗಿ ತಿಳಿಸುತ್ತದೆ. ಅಮೆರಿಕದಲ್ಲಿ ಮಾನಿಟರಿಂಗ್ ಫ್ಯೂಚರ್ ನಡೆಸಿದ ಅಧ್ಯಯನದಂತೆ ಮಾದಕ ವ್ಯಸನಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ವಿದ್ಯಾರ್ಥಿಗಳು. ಅವರಲ್ಲಿ 48.2 ಶೇಕಡಾ ಪಿಯುಸಿ ಮುಟ್ಟಿದ ವಿದ್ಯಾರ್ಥಿಗಳಾಗಿದ್ದರು.

The Future of Monitoring in America
The Future of Monitoring in America

ಮಾನಸಿಕ ದೈಹಿಕ ನೋವು ನಿವಾರಿಸಿ, ಮೂರ್ಖ ನಿದ್ರೆಗೆ, ಮಾನಸಿಕ ಸುಖ ಲೋಕಕ್ಕೆ ಮಾದಕ ದ್ರವ್ಯಗಳು ನಿಮ್ಮನ್ನು ಮುಟ್ಟಿಸುತ್ತವೆ. ಅದು ವ್ಯಸನವಾದಾಗ ನಾನಾ ಕಾಯಿಲೆಗಳಿಗೆ ದಾರಿ ಮಾಡುತ್ತದೆ. ಮಾದಕ ವ್ಯಸನದ ರೋಗಗಳಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ದಶಕದ ಹಿಂದೆ ವರುಷಕ್ಕೆ 2 ಲಕ್ಷದಷ್ಟು ಇದ್ದುದು ಈಗ ವರುಷಕ್ಕೆ 4 ಲಕ್ಷದಷ್ಟು ಸಾವು ಮಾದಕ ದ್ರವ್ಯ ದುಷ್ಪರಿಣಾಮಗಳಿಂದ ಆಗುತ್ತಿದೆ. ಅಫೀಮಿನ ಮಾರ್ಫಿನನ್ನು ಜರ್ಮನ್ ವಿಜ್ಞಾನಿಗಳು 19ನೇ ಶತಮಾನದಲ್ಲಿ ನೋವು ನಿವಾರಕ ಹೆರಾಯಿನ್ ಚುಚ್ಚುಮದ್ದು ಮಾಡಿದರು. ಕೆಲವರ ಇಡೀ ದೇಹ ಸೂಜಿಮದ್ದಿನ ವಶವಾಯಿತು. ಪುಡಿ, ಮಾತ್ರೆ ಎಂದು ಹೆರಾಯಿನ್ ಜಗತ್ತನ್ನು ಕಾಡುತ್ತಿರುವ ಬಹು ದೊಡ್ಡ ಮಾದಕ ವಸ್ತು ಆಗಿದೆ.

ಹೆರಾಯಿನ್

ಗಾಂಜಾ ಎಲೆ, ಹೊಗೆಸೊಪ್ಪು ಎಲೆಯ ಸಾರ ಎಂದು ಹೆಚ್ಚಿನವು ಮೂಲದಲ್ಲಿ ಸಸ್ಯ ಮೂಲದವು. ಈಗ ಅವನ್ನೆಲ್ಲ ರಾಸಾಯನಿಕವಾಗಿ ಅಭಿವೃದ್ಧಿ ಪಡಿಸಿ ಮಾದಕ ವ್ಯಸನಿಗಳ ಲೋಕ ಸೃಷ್ಟಿಸಲಾಗಿದೆ. ಗುಜರಾತ್, ದಿಲ್ಲಿ, ರಿಷಿಕೇಶ ಕಳೆದ ವರುಷ ಮಾದಕ ವಸ್ತುಗಳ ಕಳ್ಳ ಸಾಗಣಿಕೆ ವಿಷಯದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಈಗ ಕರ್ನಾಟಕದಲ್ಲಿ ದೊಡ್ಡ ಸುದ್ದಿ ಮಾಡುತ್ತಿರುವುದು ಎಂಡಿಎಂಎ ಮಾತ್ರೆ. ಮೆಥಡಿನ್‌ಡಿಲಾಕ್ಸಿ ಮತ್ತು ಮೆಥಾಪೆತಾಮಿನ್ ಮಾತ್ರೆಯೇ ಎಂಡಿಎಂಎ. ಇದು ವೈದ್ಯರು ಉತ್ತೇಜಕವಾಗಿ ನೀಡುವ ಮಾತ್ರೆಯಾಗಿದೆ. ಅದರ ಅತಿ ಬಳಕೆ, ದುರ್ಬಳಕೆ ಮಾದಕ ವ್ಯಸನಕ್ಕೆ ಹೆದ್ದಾರಿ ಆಗುತ್ತದೆ.

ಗಾಂಜಾ ಎಲೆ

ಮದ್ಯಪಾನ ಕೂಡ ಅತಿಯಾದಾಗ ಮಾದಕ ವ್ಯಸನ ಆಗುತ್ತದೆ. ಇತ್ತೀಚೆಗೆ ಕಟಪಾಡಿಯಲ್ಲಿ ಭಕ್ತರೊಬ್ವರು ಕೊರಗಜ್ಜನಿಗೆ ಸಾವಿರಾರು ಬಾಟಲಿ ಮದ್ಯದ ಹರಕೆ ಒಪ್ಪಿಸಿದ್ದು ಸುದ್ದಿಯಾಗಿದೆ. ಒಂದು ಬೊಟ್ಟ ಕಳ್ಳು ಕುಡಿಯುವ ಕೊರಗಜ್ಜ ಪಾಡ್ದನದಲ್ಲಿ ಇದ್ದಾರೆ.

ಕಟಪಾಡಿ

ಮಾದಕ ವ್ಯಸನ ಹರಡುವ ಹರಕೆ ಬೇಕೆ? ಸಾಮಾನ್ಯವಾಗಿ ಬೇರೆಯವರ ಮೂಲಕ ಮಾದಕ ವಸ್ತುಗಳ ಸಂಪರ್ಕ ಆಗುತ್ತದೆ. ಮಾನಸಿಕ ಅಶಾಂತಿ, ನೋವು ಓಡಿಸಲು ಮೊದಲು ಬಳಸುತ್ತಾರೆ. ಅನಂತರ ಅಭ್ಯಾಸ. ಅದಕ್ಕೆ ಹಣ ಹೊಂದಿಸಲು ಕೆಟ್ಟ ದಾರಿ ಹಿಡಿಯುತ್ತಾರೆ. ನಿರುದ್ಯೋಗ ಕೂಡ ಮಾದಕಕ್ಕೆ ದೂಡುತ್ತದೆ ಎನ್ನುತ್ತದೆ ಸಮೀಕ್ಷೆ. ಹೀಗೆ ಮಾದಕದತ್ತ ಬಂದವರು ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆಯವರು, ಮಾರಾಟಗಾರರು ಆಗುತ್ತಾರೆ.

ಬರಹ: ಪೇರೂರು ಜಾರು

Related Posts

Leave a Reply

Your email address will not be published.