ಉಳ್ಳಾಲ: ಸಂಚಾರಿ ಪೇದೆಗೆ ಕಾರು ಢಿಕ್ಕಿ ಹೊಡೆದು ಪರಾರಿ
ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಪೇದೆಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು, ಅವರು ತಲೆಗೆ ಗಾಯಗೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲಬೈಲ್ ರಸ್ತೆಯಲ್ಲಿ ಸಂಭವಿಸಿದ್ದು, ಶಿವಮೊಗ್ಗ ನಿವಾಸಿ ಲೋಕೇಶ್ (35) ಗಾಯಾಳು ಪೇದೆ ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೈವೇ ಪ್ಯಾಟ್ರಲ್ ವಾಹನದಲ್ಲಿ ಚಾಲಕನಾಗಿದ್ದ ಇವರು ಉಳ್ಳಾಲಬೈಲ್ ಬಳಿ ತಪಾಸಣೆಗೈಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ.
ತೊಕ್ಕೊಟ್ಟು ಕಡೆಯಿಂದ ಉಳ್ಳಾಲ ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಸ್ವಿಫ್ಟ್ ಕಾರನ್ನು ತಡೆಯಲು ಯತ್ನಿಸಿದಾಗ, ಚಾಲಕ ಕಾರನ್ನು ನಿಲ್ಲಿಸದೇ ಪೇದೆ ಲೋಕೇಶ್‍ಗೆ ಗುದ್ದಿ ಪರಾರಿಯಾಗಿದ್ದಾನೆ. ಢಿಕ್ಕಿ ಹೊಡೆದ ರಭಸಕ್ಕೆ ಲೋಕೇಶ್ ಅವರ ತಲೆ ರಸ್ತೆಯ ವಿಭಾಜಗಕ್ಕೆ ಬಡಿದು ರಕ್ತಸ್ರಾವ ಉಂಟಾದ ಹಿನ್ನಲೆ. ತಕ್ಷಣ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ.