ಉಳ್ಳಾಲ: ಅಸೌಖ್ಯದಲ್ಲಿರುವ ಮಗುವಿಗೆ ಧನಸಹಾಯ ಹಸ್ತಾಂತರಿಸಿದ ಧರ್ಮನಗರ ಜ್ಯೂನಿಯರ್ ಬಾಯ್ಸ್
ಉಳ್ಳಾಲ : ಉಡುಪಿಯ ರವಿ ಕಟಪಾಡಿ ಮಾದರಿಯಲ್ಲಿ ಉಳ್ಳಾಲ ಧರ್ಮನಗರ ಜ್ಯೂನಿಯರ್ ಬಾಯ್ಸ್ ನ ಯುವಕರ ತಂಡ ಎರಡರ ಮಗುವಿನ ಚಿಕಿತ್ಸೆಗೆ ವಿಭಿನ್ನ ರೀತಿಯ ವೇಷತೊಟ್ಟು ಸಂಗ್ರಹಿಸಿದ ನಗದನ್ನು ಹೆತ್ತವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉಳ್ಳಾಲ ತೆಂಗಿನಹಿತ್ಲು ರಾಹುಗುಳಿಗ ಬನದ ಅರ್ಚಕ ಭಾಸ್ಕರ್ ತೆಂಗಿನಹಿತ್ಲು ಅವರು ಬಂಟ್ವಾಳ ತಾಲೂಕಿನ ಮಂಕುಡೆಕೋಡಿ ನಿವಾಸಿ ಎರಡರ ಹರೆಯದ ನ್ಯೂರೋಬ್ಲಾಸ್ಟೋಮಾ (ಕ್ಯಾನ್ಸರ್) ಕಾಯಿಲೆಯಿಂದ ಬಳಲುತ್ತಿರುವ ಹೇಮಂತ್ ಅನ್ನುವ ಮಗುವಿನ ಹೆತ್ತವರಿಗೆ ಹಸ್ತಾಂತರಿಸಿದ್ದಾರೆ. ಜನಾರ್ಧನ ನಾಯ್ಕ್ ಹಾಗೂ ಲೀಲಾವತಿ ದಂಪತಿ ಮಗುವಿಗೆ ಅಸೌಖ್ಯವಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ನ್ಯೂರೋಬ್ಲಾಸ್ಟೋಮಾ ಇರುವುದು ಬೆಳಕಿಗೆ ಬಂದಿದೆ.
ವೈದ್ಯರು ತಿಳಿಸಿದಂತೆ ಚಿಕಿತ್ಸೆಗೆ ರೂ.8 ಲಕ್ಷ ಮೌಲ್ಯವನ್ನು ಕೂಲಿಕೆಲಸ ನಿರ್ವಹಿಸುವ ಜನಾರ್ದನ ನಿಭಾಯಿಸಲು ಅಸಾಧ್ಯವಾಗಿದೆ. ಲೀಲಾವತಿ ಅವರು ಮನೆಯಲ್ಲಿ ಇದ್ದುಕೊಂಡು ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲದ ಧರ್ಮನಗರ ಜ್ಯೂನಿಯರ್ ಬಾಯ್ಸ್ ತಂಡ ಧರ್ಮನಗರ ಜೂನಿಯರ್ ಬಾಯ್ಸ್ ಉಳ್ಳಾಲ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ತೊಕ್ಕೊಟ್ಟು ನೇತೃತ್ವದಲ್ಲಿ ಧನಸಂಗ್ರಹದ ಸಂಕಲ್ಪ ಮಾಡಿಕೊಂಡು,
ತೊಕ್ಕೊಟ್ಟು ಹಾಗೂ ಕುಂಪಲದಲ್ಲಿ ಜರಗಿದ ಮೊಸರುಕುಡಿಕೆ ಉತ್ಸವದಲ್ಲಿ ತಂಡದ ಸದಾಶಿವ ತೆಂಗಿನಹಿತ್ಲು, ರೋಶನ್ ಸುಂದರಿಭಾಗ್, ನಿತಿನ್ ಸುಂದರಿಭಾಗ್, ಜೀವನ್ ಧರ್ಮನಗರ ವಿಶಿಷ್ಠ ವೇಷ ಧರಿಸಿ ನೆರೆದವರ ಗಮನ ಸೆಳೆದು ರೂ. 1,26,600 ಧನ ಸಂಗ್ರಹಿಸಿದ್ದಾರೆ. ಸಂಗ್ರಹಿಸಿದಷ್ಟೂ ಹಣವನ್ನು ಹೇಮಂತ್ ಪೋಷಕರಿಗೆ ಇದೀಗ ಹಸ್ತಾಂತರಿಸಿದ್ದಾರೆ.
ಈ ಸಂದರ್ಭ ಧರ್ಮನಗರ ಜೂನಿರ್ ಬಾಯ್ಸ್ ಉಳ್ಳಾಲ ಇದರ ಅಧ್ಯಕ್ಷ ವಿಧಿತ್, ಉಪಾಧ್ಯಕ್ಷ ಸೋನಿತ್, ಕಾರ್ಯದರ್ಶಿ ಹರ್ಷದೀಪ್, ಸದಸ್ಯ ಶೇಖರ್ ತೆಂಗಿನಹಿತ್ಲು, ರಮೇಶ್ ತೆಂಗಿನಹಿತ್ಲು ಉಪಸ್ಥಿತರಿದ್ದರು.