ನರಿಂಗಾನ ಗ್ರಾ.ಪಂ.ನ ದ್ವಿತೀಯ ಹಂತದ ಗ್ರಾಮಸಭೆ
ನರಿಂಗಾನ ಗ್ರಾಮದಲ್ಲಿ ರೈತರು ಹಿಂದಿನಿಂದಲೂ ಹೈನುಗಾರಿಕೆ ಬಗ್ಗೆ ಒಲವು ಹೊಂದಿದ್ದು ಅತಿ ಹೆಚ್ಚು ದನಗಳನ್ನು ಸಾಕುತ್ತಿದ್ದಾರೆ. ಆದರೆ ಗೋವುಗಳಿಗೆ ಆರೋಗ್ಯದಲ್ಲಿ ಏರುಪೇರಾದಾಗ ಸ್ವತಃ ದನದ ಮಾಲೀಕರೇ ಪಶು ವೈದ್ಯರ ಬಳಿಗೆ ಹೋದರೂ ಚಿಕಿತ್ಸೆಗೆ ಬರುತ್ತಿಲ್ಲ. ವೈದ್ಯರು ಈ ರೀತಿ ವರ್ತಿಸಿದರೆ ಹೈನುಗಾರಿಕೆ ಹೇಗೆ ಅಭಿವೃದ್ಧಿ ಸಾಧ್ಯ ಎಂದು ನರಿಂಗಾನ ಗ್ರಾಮಸ್ಥರೊಬ್ಬರು ನರಿಂಗಾನಗ್ರಾಮ ಪಂಚಾಯ್ ಸಭಾಭವನದಲ್ಲಿ ನಡೆದ ದ್ವಿತೀಹ ಹಂತದ ಗ್ರಾಮಸಭೆಯಲ್ಲಿ ವೈದ್ಯರನ್ನು ನೇರವಾಗಿ ಆರೋಪಿಸಿದರು.
ದನದ ಕಂಡಿಶನ್ ಕ್ರಿಟಿಕಲ್ ಆಗಿದ್ದರೆ ನೀವು ಭೇಟಿ ನೀಡಿ ಚಿಕಿತ್ಸೆ ಕೊಡಲೇಬೇಕಿತ್ತು ಎಂದು ಮೋರ್ಲ ಇಸ್ಮಾಯಿಲ್ ಧ್ವನಿಗೂಡಿಸಿದರು. ಮಾಣಿ ಕೇಂದ್ರ ಸೇರಿದಂತೆ ಮೂರು ಕೇಂದ್ರದಲ್ಲಿ ನನ್ನ ಕಾರ್ಯಕ್ಷೇತ್ರವಿದ್ದು ಮುಡಿಪು ಸೇರಿದಂತೆ ಮೂರು ಕ್ಷೇತ್ರದಲ್ಲಿ ಎಲ್ಲ ಮನೆಗೆ ಭೇಟಿ ನೀಡಲು ಸಾಧ್ಯವಿಲ್ಲ. ಪಶು ವೈದ್ಯಕೀಯ ಸೇವೆಗೆ ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆ ತಕ್ಷಣಕ್ಕೆ ಸಿಗುತ್ತಿಲ್ಲ ಎಂಬುದು ಸರಿ, ಹಾಗಾಗಿ ಇಲಾಖೆಗೆ ಪತ್ರ ಬರೆಯಿರಿ ಎಂದು ಪಶು ವೈದ್ಯಾಧಿಕಾರಿ ಡಾ. ಲಿಖಿತ್ ರಾಜ್ ಉತ್ತರಿಸಿದರು.
ನರಿಂಗಾನದಲ್ಲಿ ಹತ್ತು ಅಂಗನವಾಡಿ ಕೇಂದ್ರಗಳಿದ್ದು ಒಂದು ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಅದಕ್ಕೆ ವ್ಯವಸ್ಥೆ ಆಗಬೇಕಿದೆ ಎಂದು ಅಂಗನವಾಡಿ ಮೇಲ್ವಿಚಾರಕಿ ಹೇಳಿದರು. ಕೃಷಿ ಇಲಾಖೆಯಿಂದ ನರಿಂಗಾನ ಗ್ರಾಮದ ಬೆಳೆ ಸಮೀಕ್ಷೆ ನರಿಂಗಾನ ಗ್ರಾಮದಲ್ಲಿ ಆಪ್ ಯಾಕೆ ಸ್ಪಂದಿಸುತ್ತಿಲ್ಲ, ಆ ಕಾರ್ಯ ಯಾಕೆ ನಡೆಯುತ್ತಿಲ್ಲ ಎಂದು ಜಗದೀಶ್ ಶೆಟ್ಟಿ ಮೋರ್ಲ ಪ್ರಶ್ನಿಸಿದರು.
ಕುರ್ನಾಡು ಪಶು ವೈದ್ಯಾಧಿಕಾರಿ ಡಾ. ನಿಖಿಲ್ ರಾಜ್ , ನರಿಂಗಾನ ಗ್ರಾಮ ಆಡಳಿತ ಅಧಿಕಾರಿ ನಿಂಗಪ್ಪ ಜಜ್ವಾರಿ, ಬಿ.ಸಿ.ರೋಡ್ ಆರ್ಥಿಕ ಸಾಕ್ಷರತಾ ಕೇಂದ್ರದ ಸೀನಿಯರ್ ಕೌನ್ಸಿಲರ್ ಅನುಷಾ ಎಸ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶೋಭಾ ಎಂ, ಇಂದಿರಾ, ಇಂಜಿನಿಯರ್ ರವಿಚಂದ್ರ ಟಿ ಸೇರಿದಂತೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಪಂಚಾಯಿತಿ ಸರ್ವ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.