ಉಳ್ಳಾಲ: ಮೂಲಭೂತ ಸಮಸ್ಯೆಗಳಿಗೆ ಶೀಘ್ರ ಪರಿಹಾರ : ಯು.ಟಿ ಖಾದರ್

ಉಳ್ಳಾಲ: ಚುನಾವಣಾ ಸಂದರ್ಭದಲ್ಲಿ ಅಭಿವೃದ್ಧಿ ಗೆ ಸಂಬಂಧಿಸಿದಂತೆ ಯಾವುದೆಲ್ಲ ಭರವಸೆ ನೀಡಿದ್ದೇನೆ ಯೊ ಅದನ್ನು ಮುಂದಿನ ವರ್ಷದಲ್ಲಿ ಕಾರ್ಯಗತ ಗೊಳಿಸಲಾಗುವುದು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.
ಅವರು ಕೋಟೆಕಾರ್ ಪ.ಪಂ‌ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆಗಳ ಅಭಿವೃದ್ಧಿ ಆಗಿದೆ.ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಗೆ 70 ಕೋಟಿ ರೂ. ಮಂಜೂರು ಮಾಡಲಾಗಿದೆ.ಈ ಪೈಕಿ 25 ಕೋಟಿ ರೂ ಮೊತ್ತದ ಅಭಿವೃದ್ಧಿ ಕಾಮಗಾರಿ ನಡೆದಿದೆ. ಇದರ ಬಿಲ್ ನೀಡಲು ಬಾಕಿ ಇದೆ.ಉಳಿದ ಮೊತ್ತದ ಅಭಿವೃದ್ಧಿ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ,ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಪರಿಹಾರ ನೀಡುವ ಪ್ರಯುಕ್ತ ಪ್ರತ್ಯೇಕ ಸಬ್ ಡಿವಿಷನ್ ನಿರ್ಮಾಣ ಮಾಡಲಾಗಿದೆ.ಕೊಣಾಜೆಯಲ್ಲಿ ಈಗಾಗಲೇ ಮೆಸ್ಕಾಂ ಸಬ್ ಡಿವಿಷನ್ ಆರಂಭಿಸಲಾಗಿದ್ದು, ಕೋಟೆಕಾರ್ ನಲ್ಲಿ ಮೆಸ್ಕಾಂ ಸಬ್ ಡಿವಿಷನ್ ಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಸೆಕ್ಷನ್ ಆಫೀಸ್ ಬರುವುದರಿಂದ ಹೆಚ್ಚುವರಿ ಲೈನ್ ಮ್ಯಾನ್, ಅಧಿಕಾರಿಗಳ ನೇಮಕ ಆಗುತ್ತದೆ.ಇದರಿಂದ ವಿದ್ಯುತ್ ಸಮಸ್ಯೆಗೆಶೀಘ್ರ ಪರಿಹಾರ ಸಿಗಲು ಸಾಧ್ಯ ಆಗುತ್ತದೆ ಎಂದು ಹೇಳಿದರು.
ಜನರ ಬದುಕಿಗೆ ನೀರು, ರಸ್ತೆ, ವಿದ್ಯುತ್ ಮುಖ್ಯವಾಗಿದ್ದು, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಈಗಾಗಲೇ ತುಂಬೆ ಡ್ಯಾಂ ನಿಂದ ಸಜಿಪ , ಕೊಣಾಜೆ ಮೂಲಕ ಉಳ್ಳಾಲ, ಸೋಮೇಶ್ವರ, ಕೋಟೆಕಾರ್ ಪರಿಸರಕ್ಕೆ ನೀರು ಸರಬರಾಜು ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದ್ದು 80 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಅಲ್ಲದೆ ಉಳ್ಳಾಲ ಸೋಮೇಶ್ವರ, ದಲ್ಲಿ ನೀರು ಸರಬರಾಜು ವ್ಯವಸ್ಥೆ ಗೆ ಕಾಮಗಾರಿ ಮಾಡುವ ಜೊತೆಗೆ ಪ್ರತಿ ಗ್ರಾಮ ಪ್ರದೇಶಗಳಿಗೂ ಪೈಪ್ ಲೈನ್ ಕಾಮಗಾರಿಗೆ ವ್ಯವಸ್ಥೆ ಮಾಡಲಾಗಿದ್ದು,360 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ . ಉಳ್ಳಾಲ ಕ್ಕೆ ಎಡಿಬಿ ಮೂಲಕ ನೀರಿನ ಸಂಪರ್ಕ ಇರುವುದರಿಂದ ಇದರಿಂದ ಪ್ರತ್ಯೇಕ ಸಂಪರ್ಕ ಪಡೆದು ಗ್ರಾಮ ಮಟ್ಟಕ್ಕೆ ವಿಸ್ತರಣೆ ಮಾಡಲಾಗುವುದು.ಪ್ರತ್ಯೇಕ ಟ್ಯಾಂಕ್ ನಿರ್ಮಿಸಿಕೊಂಡು ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಅಬ್ಬಕ್ಕ ಭವನ ನಿರ್ಮಾಣಕ್ಕೆ ಎಂಟು ಕೋಟಿ ರು ಹಾಗೂ ಬ್ಯಾರಿ ಭವನ ನಿರ್ಮಾಣಕ್ಕೆ ಆರು ಕೋಟಿ ಮಂಜೂರು ಮಾಡಲಾಗಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಉಳ್ಳಾಲ ತಾಲೂಕು ನಲ್ಲಿ ಪುರಭವನ ಇಲ್ಲದ ಕಾರಣ ಅಬ್ಬಕ್ಕ ಭವನದಲ್ಲಿ ಕಾರ್ಯಕ್ರಮ ಮಾಡಬಹುದು.ಇದಕ್ಕೆ ತೊಕ್ಕೊಟ್ಟು ವಿನಲ್ಲಿ ಜಾಗ ಮೀಸಲಿಡಲಾಗಿದೆ.ಇದೇ ಜಾಗದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಆಕ್ಷೇಪ ಇದ್ದ ಕಾರಣ ಬ್ಯಾರಿ ಭವನವನ್ನು ಆರು ಕೋಟಿ ವೆಚ್ಚದಲ್ಲಿ ನಾಟೆಕಲ್ – ಅಸೈಗೋಳಿ ಮಧ್ಯಭಾಗದಲ್ಲಿ ಇರುವ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.
ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಶಾಲೆಗಳ ಅಭಿವೃದ್ಧಿಗೆ ಈಗಾಗಲೇ 1.80 ಕೋಟಿ ಬಿಡುಗಡೆ ಮಾಡಲಾಗಿದೆ.ತೋಕ್ಕೋಟು ಚಂಬುಗುಡ್ಡೆ ರಸ್ತೆ ಅಭಿವೃದ್ಧಿ ಗೆ 25 ಕೋಟಿ ಮೀಸಲಿಟ್ಟಿದ್ದು, ತೊಕ್ಕೊಟ್ಟು, ತಲಪಾಡಿ,ಕೆಸಿರೋಡ್, ನಾಟೆಕಲ್,ಮುಡಿಪು ರಸ್ತೆ ಅಭಿವೃದ್ಧಿ ಗೆ ಸಿಆರ್ ಝಡ್ ಮೂಲಕ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಉಚಿತ ಡಯಾಲಿಸಿಸ್ ಕೇಂದ್ರ ತೆರೆಯಲಾಗಿದೆ.10 ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಡಯಾಲಿಸಿಸ್ ಬೇಕಾದವರು ಆರೋಗ್ಯ ಕೇಂದ್ರ ದಲ್ಲಿ ಅರ್ಜಿ ಸಲ್ಲಿಸಬಹುದು. ಮಂಗಳೂರು ಕ್ಷೇತ್ರದ ಜನರಿಗೆ ಮೊದಲ ಆದ್ಯತೆ ನೀಡಲಾಗುವುದು.ಉಳಿದಂತೆ ಬಡವರಿಗೆ ಎರಡನೇ ಆದ್ಯತೆ, ಹಿರಿಯರಿಗೆ ಮೂರನೇ ಆದ್ಯತೆ ನೀಡಲಾಗುವುದು ಇದರ ಜೊತೆಗೆ ಕ್ಷೇತ್ರ ಕ್ಕೆ ಸಮೀಪ ಇರುವವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

Related Posts

Leave a Reply

Your email address will not be published.