ಮೀನುಗಾರ ಮುಂದಾಳು – ಹಿರಿಯ ಸಾಮಾಜಿಕ ಕಾರ್ಯಕರ್ತ ವಾಸುದೇವ ಬೋಳೂರು ನಿಧನ
ಮಂಗಳೂರು:- ಮೀನುಗಾರ ಸಮಾಜದ ಹಿರಿಯ ಮುಖಂಡ ಹಾಗೂ ನಾಡಿನ ವಿವಿಧ ಸಾಮಾಜಿಕ ಸಂಘಟನೆಗಳ ಮುಂದಾಳು ವಾಸುದೇವ ಬೋಳೂರು (87) ಅವರು ಮಂಗಳವಾರ ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಅವಿಭಜಿತ ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ, ಅಖಿಲ ಕರ್ನಾಟಕ ಮೀನುಗಾರ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕರಾವಳಿ ಮೀನುಗಾರ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅನೇಕ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ವಾಸುದೇವ ಬೋಳೂರು ಅವರು ಮೊಗವೀರ ವ್ಯವಸ್ಥಾಪಕ ಮಂಡಳಿಯ ಜಿಲ್ಲಾ ಶಾಖೆ, ಅಮೃತ ಆಶ್ರಮ ಸಮಿತಿ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಮಿತಿ, ಅಹಿಂದಾ ಸಮಿತಿ, ವಿದ್ಯಾರ್ಥಿ-ಯುವಕ ಫೆಡರೇಶನ್, ಬೋಳೂರು ನಾಗರಿಕ ಸಮಿತಿ, ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಮುಂತಾದ ಅನೇಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ದಿವಂಗತರು ಮೂವರು ಸಹೋದರಿಯರು, ಓರ್ವ ಸಹೋದರ, ಬಂಧು ಮಿತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುತ್ತಾರೆ.