ವಿಟ್ಲ: ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸದಸ್ಯರ ಕಡೆಗಣನೆ-ಧರಣಿ
ವಿಟ್ಲ: ನಗರೋತ್ಥಾನ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಬೆಂಬಲಿತ 12 ಮಂದಿ ಸದಸ್ಯರನ್ನು ಕಡೆಗಣಿಸಲಾಗಿದೆ. ಶಾಸಕರು ಅನುದಾನವನ್ನು ಎಲ್ಲರಿಗೂ ಸಮನಾಗಿ ಹಂಚಬೇಕು ಎಂದು ಆಗ್ರಹಿಸಿ ಸೆ.7ರಂದು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಧರಣಿಯನ್ನು ನಡೆಸುವ ಮೂಲಕ ನ್ಯಾಯವನ್ನು ಯಾಚಿಸಲಿದ್ದೇವೆ. ಸ್ಥಳಕ್ಕೆ ಯೋಜನಾ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳು ಆಗಮಿಸಿ ಮನವಿಯನ್ನು ಸ್ವೀಕಾರ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಅರುಣ್ ಎಂ. ವಿಟ್ಲ ಹೇಳಿದರು. ಅವರು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
ಹಿಂದಿನ ಶಾಸಕರ ಅವಧಿಯಲ್ಲಿ ನಗರೋತ್ಥಾನದ 74.01ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಿ 20ಲಕ್ಷ ವೆಚ್ಚದಲ್ಲಿ 4 ಕಡೆಗಳಲ್ಲಿ ಸ್ವಾಗತ ಕಮಾನು ಹಾಗೂ 54.01ಲಕ್ಷದಲ್ಲಿ ನೂತನ ವಾಣಿಜ್ಯ ಕಟ್ಟಡ ರಚನೆಗೆ ವಿಂಗಡಿಸಲಾಗಿತ್ತು. ಚುನಾವಣೆಯ ಬಳಿಕ ಹೊಸದಾಗಿ ಆಯ್ಕೆಯಾದ ಶಾಸಕರು ಇದನ್ನು ಸದಸ್ಯರ ಗಮನಕ್ಕೆ ತಾರದೇ ಬದಲಾವಣೆ ಮಾಡುವ ಮೂಲಕ ಬೇರೆ ಕಾಮಗಾರಿಗಳಿಗೆ ಮೀಸಲಿಡಲಾಗಿದೆ.
ಕಾಮಗಾರಿಗಳನ್ನು ಬದಲಾವಣೆ ಮಾಡದಂತೆ ಮುಖ್ಯಾಧಿಕಾರಿಗಳಿಗೆ ಆಕ್ಷೇಪಣೆಯನ್ನು ಸಲ್ಲಿಸುವ ಕಾರ್ಯ ಮಾಡಲಾಗಿತ್ತು. 15ನೇ ಹಣಕಾಸು ಯೋಜನೆಯಲ್ಲಿ ಸುಮಾರು 42.48ಲಕ್ಷ ಉಳಿಕೆ ಹಣದ ಕ್ರೀಯಾ ಯೋಜನೆಯನ್ನೂ ಸದಸ್ಯರ ಗಮನಕ್ಕೆ ತಾರದೆ ಮಾಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಸದಸ್ಯ ಮೋಹನದಾಸ ಉಕ್ಕುಡ, ವಿಟ್ಲ ಮಹಾ ಶಕ್ತಿ ಕೇಂದ್ರದ ಸದಸ್ಯ ರಾಮದಾಸ ಶೆಣೈ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಶೋಕ್ ಕುಮಾರ್ ರೈ, ಹರೀಶ್ ಸಿ. ಎಚ್., ವಿಜಯಲಕ್ಷ್ಮೀ, ಸುನಿತಾ ಪೂಜಾರಿ, ರಕ್ಷಿತಾ ಸನತ್, ಸಂಗೀತ, ಜಯಂತ್ ಚಂದಪ್ಪಾಡಿ, ಕರುಣಾಕರ ನಾಯ್ತೊಟ್ಟು, ಎನ್. ಕೃಷ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.