ವರ್ಲ್ಡ್ ಹ್ಯಾಪಿನೆಸ್ ಸೂಚ್ಯಂಕ ಭಾರತಕ್ಕೆ 126ನೇ ಸ್ಥಾನ

ಯಥಾ ರಾಜ ತಥಾ ಪ್ರಜಾ ಎನ್ನುವಂತೆ ವಿಶ್ವ ಸಂಸ್ಥೆಯು ಬಿಡುಗಡೆ ಮಾಡಿರುವ ವರ್ಲ್ಡ್ ಹ್ಯಾಪಿನೆಸ್ ಸೂಚ್ಯಂಕದಲ್ಲಿ ಭಾರತವು 126ನೇ ಸ್ಥಾನದಲ್ಲಿದೆ. ನೆರೆಹೊರೆಯ ದೇಶಗಳಾದ ಪಾಕಿಸ್ತಾನ, ನೇಪಾಳ, ಚೀನಾ, ಬಾಂಗ್ಲಾದೇಶ ಮೊದಲಾದವುಗಳಿಗಿಂತ ಭಾರತವು ಕೆಳಗಿನ ಹಂತದಲ್ಲಿ ಇದೆ. ಸತತ 6ನೆಯ ಬಾರಿ ಫಿನ್ಲೆಂಡ್ ಜಗತ್ತಿನ ಅತಿ ಸಂತೋಷದ ಜನರ ದೇಶವಾಗಿ ಮೊದಲ ಸ್ಥಾನದಲ್ಲಿದೆ. ಡೆನ್ಮಾರ್ಕ್, ಐಸ್‍ಲ್ಯಾಂಡ್‍ಗಳು ಎರಡು ಮೂರನೆಯ ಸ್ಥಾನಗಳಲ್ಲಿ ಇವೆ. ತಲಾದಾಯ, ಸಮಾಜಮುಖಿ ಬೆಂಬಲ, ಜನರ ಆರೋಗ್ಯ ಮತ್ತು ವ್ಯವಸ್ಥೆ, ಸ್ವಾತಂತ್ರ್ಯ, ಔದಾರ್ಯ, ಕಡಿಮೆ ಭ್ರಷ್ಟಾಚಾರ ಇವುಗಳನ್ನೆಲ್ಲ ವಿಶ್ಲೇಷಣೆ ಮಾಡಿ ಸಂತೋಷಾನಂದದ ದೇಶದ ಸೂಚ್ಯಂಕ ನಿರ್ಣಯಿಸಲಾಗುತ್ತದೆ. 150 ಪ್ಲಸ್ ದೇಶಗಳಲ್ಲಿ ಭಾರತದ ಸ್ಥಾನ 126 ಎಂದರೆ ಭಾರತ ಎಷ್ಟು ಕುಲಗೆಟ್ಟು ಹೋಗಿದೆ ಎಂದು ಯೋಚಿಸಬಹುದು.

ಸದಾ ಬೇರೆಯವರ ಶೋಕ ಬಯಸುವ ಜನರ ದೇಶ ಭಾರತ. ಜಾಗತಿಕವಾಗಿ ಸಂತೋಷ ಬಿಡಿ ಇಂತಾ ಮನೋಭಾವದವರು ಸ್ವ ಸಂತೋಷದಿಂದ ಕೂಡ ಇರುವುದು ಸಾಧ್ಯವಿಲ್ಲ. ಸಂತೋಷದಲ್ಲಿ ನಮ್ಮ ಸಮಾಜದ ಪಾಲು ಮುಖ್ಯ. ಇಂದು ಬಹುತೇಕರು ಸಮಾಜ ಒಡೆಯುವುದರಲ್ಲೇ ಸಂತೋಷ ಕಾಣುವವರಾಗಿದ್ದಾರೆ. ಫಿನ್ಲೆಂಡ್, ಡೆನ್ಮಾರ್ಕ್, ನಾರ್ವೆ, ಐಸ್‍ಲ್ಯಾಂಡ್ ಮೊದಲಾದ ನಾರ್ಡಿಕ್ ದೇಶಗಳು ಯಾವಾಗಲೂ ಸಂತೋಷದಲ್ಲಿ ಮುಂದು ಏಕೆ? ಅವರಲ್ಲಿ ಪ್ರಸ್ತುತ ಏನು ಎನ್ನುವುದಕ್ಕೆ ಮೊದಲ ಮಣೆ ಮತ್ತು ಭ್ರಷ್ಟ ದಾರಿಗೆ ಬೇಲಿ ಮುಖ್ಯ ಕಾರಣ ಎನ್ನಲಾಗಿದೆ. ಪ್ರಸ್ತುತಕ್ಕೆ ಮೊದಲ ಮಣೆ ಎಂದರೆ ನಿನ್ನೆಯದರ ಬಗೆಗೆ ಮತ್ತು ನಾಳೆಯದರ ಬಗೆಗೆ ಚಿಂತಿಸದಿರುವುದು. ಇಲ್ಲವೇ ನಿನ್ನೆಯ ನೆನಪು ಗೌಣ ಮತ್ತು ನಾಳಿನ ಬದುಕು ಇಂದಿನಂತೆಯೇ ಇರುತ್ತದೆ ಎಂದು ಭಾವಿಸುವುದು.

ಚೀನಾ ದೇಶವು ಸದ್ಯ ಭಾರತಕ್ಕಿಂತ ತುಂಬ ಮುಂದುವರಿದಿರುವುದರಿಂದ ಅದು ಸಂತೋಷದಲ್ಲಿ ಭಾರತಕ್ಕಿಂತ ಮುಂದಿದ್ದರೆ ಅಚ್ಚರಿ ಅಲ್ಲ. ಆದರೆ ಜಾಗತಿಕ ಸಂತೋಷ ಸೂಚ್ಯಂಕದಲ್ಲಿ ಭಾರತವು ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶಕ್ಕಿಂತಲೂ ಏಕೆ ಕೆಳಗಿದೆ ಎನ್ನುವುದರ ಬಗೆಗೆ ಖಂಡಿತವಾಗಿ ನಾವು ತಲೆ ಕೆಡಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಆತ್ಮವಂಚನೆ ಮಾಡಿಕೊಂಡಂತೆ ಆಗುತ್ತದೆ. ಭಾರತದ ಅತಿ ಮುಖ್ಯ ದೌರ್ಬಲ್ಯ, ಸಮಾಜಮುಖಿ ಚಿಂತನೆ ಇಲ್ಲದಿರುವುದು. ತಾನು ಬದುಕಿದರೆ ಆಯಿತು ಎನ್ನುವವರು ಸಮಾಜವನ್ನು ಒಡೆಯುತ್ತ ನಡೆಯುತ್ತಾರೆ. ನೇಪಾಳದಲ್ಲಿ ಹಿಂದೂಗಳು ಬಹುಸಂಖ್ಯಾತರಾದರೂ ಅಲ್ಲಿ ಬೌದ್ಧ ಧರ್ಮ ಮತ್ತು ಕಮ್ಯೂನಿಸ್ಟ್ ಚಿಂತನೆ ಧಾರಾಳ. ಅವೆರಡೂ ಸಮಾಜದ ಬಗೆಗೆ ಸ್ವಲ್ಪಮಟ್ಟಿಗಾದರೂ ಚಿಂತಿಸಲೇಬೇಕಾದ ಮನೋಭಾವ ಮೂಡಿಸುತ್ತವೆ. ಬಾಂಗ್ಲಾದೇಶ, ಪಾಕಿಸ್ತಾನಗಳು ಭಾರತಕ್ಕಿಂತ ಹೆಚ್ಚು ಸಂತೋಷಿ ಆಗಿರಲು ಕಾರಣ ಏನು? ಧರ್ಮದ ಸಾವಿರಾರು ಹೊರೆ ಅಲ್ಲಿ ಇದ್ದಂತಿಲ್ಲ. ಅದು ಸಮಾಜಕಾರಕ ಹಾಗೂ ಸಕಾರಾತ್ಮಕ.

ತಲಾದಾಯ ಭಾರತದ್ದು ತೀರಾ ಕಡಿಮೆ. ಆದರೆ ಏಶಿಯಾದಲ್ಲೇ ಅತಿ ಹೆಚ್ಚು ಬಿಲಿಯನೇರ್‍ಗಳು ಇರುವ ದೇಶ ಭಾರತ. ಇದು ಸಂತೋಷದ ಮೊದಲ ಶತ್ರು. ಸಾಮಾಜಿಕವಾಗಿ ಬೆಂಬಲಿಸುವುದಕ್ಕೆ ಭಾರತದಲ್ಲಿ ಅತಿ ದೊಡ್ಡ ಅಡ್ಡಿ ಆಗಿರುವುದು ಜಾತಿ ಮತ್ತು ಧರ್ಮ. ಇದು ಆನಂದ ವಿರೋಧಿ. ಆರೋಗ್ಯ ಎನ್ನುವುದು ಪೌಷ್ಟಿಕಾಹಾರ ಮತ್ತು ಆರೋಗ್ಯ ಸೇವೆಗಳನ್ನು ಅವಲಂಬಿಸಿದೆ. ಭಾರತದಲ್ಲಿ ಇವೆರಡೂ ಕೆಲವೇ ಜನರ ಕಿಸೆಯಲ್ಲಿವೆ. ಇದು ಅಸಂತುಷ್ಟಿಗೆ ಹೆದ್ದಾರಿ. ಸ್ವಾತಂತ್ರ್ಯ ಹೊಂದಿರುವ ದೇಶ ಭಾರತ. ಆದರೆ ಈ ಸಮಾಜದ ನಾನಾ ಕಟ್ಟುಪಾಡು ಮತ್ತು ಕೊಕ್ಕೆಗಳಿಂದ ಜನರು ಸ್ವಾತಂತ್ರ್ಯ ಹೊಂದಿದವರಾಗಿ ಇಲ್ಲ. ಇನ್ನೆಲ್ಲಿಯ ತೋಷ. ಔದಾರ್ಯದ ಬಗೆಗೆ ಭಾರತದಲ್ಲಿ ಸಿಕ್ಕಷ್ಟು ಭಾಷಣ ಬೇರೆ ಯಾವ ದೇಶದಲ್ಲೂ ಸಿಗಲಾರದು. ಇದು ಪ್ರಚಾರ ದಾಟಿ ಸಮಾಜದ ಉನ್ನತಿಯತ್ತ ಮುಟ್ಟಿಲ್ಲವಾದ್ದರಿಂದ ಸಂತೋಷ ಎನ್ನುವುದು ಹೌದಾರಾಯ್ನ ವಾಲ್ಗವಾ ಆಗಿದೆ. ಕಡಿಮೆ ಭ್ರಷ್ಟಾಚಾರದ ಬಗೆಗೆ ಭಾರತದಲ್ಲಿ ಮಾತನಾಡದಿರುವುದೇ ಮೇಲು. ಭ್ರಷ್ಟಾಚಾರವು ಭಾರತದ ಅಭಿಧಮನಿಗಳ ಹರಿವು ತಗ್ಗಿಸಿ ಅಪಧಮನಿಗಳ ಹರಿವು ಹೆಚ್ಚಿಸಿದೆ. ಅದು ದೇಶದ ಆರೋಗ್ಯವನ್ನೇ ಕೆಡಿಸಿರುವುದರಿಂದ ಆನಂದ ಪ್ರಜೆಗಳಿಗೆ ದಕ್ಕುವುದು ಸಾಧ್ಯವಿಲ್ಲ.

ಬುದ್ಧ ಹೇಳಿದ್ದ. ತೊಂದರೆಗಳು ಅನಿವಾರ್ಯ. ನಾವು ಅವುಗಳನ್ನು ಹೇಗೆ ಎದುರಿಸುತ್ತೇವೆ ಮತ್ತು ಪರಿವರ್ತಿಸಿಕೊಳ್ಳುತ್ತೇವೆ ಎನ್ನುವುದು ಸಂತೋಷದ ತೊರೆ ಹರಿಸುತ್ತದೆ. ಭಾರತವು ಸಂಕಟ, ಕಷ್ಟ, ಕಿರುಕುಳಗಳನ್ನು ಹಂಚಿದಂತೆ ಸಂತೋಷ ಹಂಚುವ ಮನೋಭಾವ ಹೊಂದಿಲ್ಲ. ಪ್ರಪಂಚವು ನಂಬಿಕೆಯ ಮೇಲೆ ನಿಂತಿದೆ. ಅದು ಸಂತೋಷ ತರುತ್ತದೆ. ಭಾರತವು ನಂಬಿಕೆ ತಿರುಚುವ ದೇಶವಾಗಿದ್ದು ಅದು ಆನಂದ ತೊಲಗಿಸುವ ರಹದಾರಿ ಎನ್ನಬಹುದು. ಸಂತೋಷ ಎಲ್ಲರಿಗೂ ಬೇಕು. ಸಂತೋಷ ಬೇಡ ಎನ್ನುವವರು ಲೋಕದಲ್ಲಿ ಯಾರೂ ಇಲ್ಲ. ಆದರೆ ಒಬ್ಬರ ಸಂತಸ ಎಲ್ಲರ ಸಂತಸವಲ್ಲ ಎಂಬ ಅರಿವು ಮುಖ್ಯ. ಅಷ್ಟೇ ಅಲ್ಲ ಒಬ್ಬರ ಸಂತೋಷವು ಇನ್ನೊಬ್ಬರಿಗೆ ಕಿರಿಕಿರಿ, ಕರಕರೆ ಅಷ್ಟೇ ಏಕೆ ಕಿರುಕುಳ ಕೂಡ ತತ್ವ ಆಗಬಹುದು. ಭಾರತೀಯರು ತಮ್ಮ ಸಂತೋಷದ ನಿಗಾದಲ್ಲಿ ಇತರರ ಸಂತೋಷ ಕಸಿಯಲು ಹಿಂಜರಿಯುವವರಲ್ಲ.

ಕೃತಜ್ಞತೆಯು ಸಂತೋಷಕ್ಕೆ ದಾರಿ. ಆದರೆ ಕೃತಘ್ನ ಮನೋಭಾವವನ್ನು ಗೆಲ್ಲಲು ಆಗದವರು ವಿಘ್ನ ಸಂತೋಷಿಗಳು ಆಗಬಹುದು ಅಷ್ಟೆ. ನಿಜ ಸಂತೋಷ ಇವರ ಹತ್ತಿರ ಕೂಡ ಸುಳಿಯುವುದಿಲ್ಲ. ಬದುಕಿನಲ್ಲಿ ಸಕಾರಾತ್ಮಕತೆ ಬಗೆಗೆ ಬಹಳ ಬರುತ್ತದೆ. ಆದರೆ ಒಬ್ಬರ ಸಕಾರಾತ್ಮಕತೆಯನ್ನು ಇನ್ನೊಬ್ಬರು ದುರುಪಯೋಗ ಮಾಡಿಕೊಳ್ಳುವ ಸಮಾಜವು ನಕಾರಾತ್ಮಕ ಸಮಾಜವಾಗಿ ಬಲಿಯುತ್ತದೆ. ಅದು ಸಂತೋಷದ ಕೊಲೆಗಾರ.

ದಯೆ, ಕರುಣೆ ಸಂತೋಷದಾಯಕ ಎನ್ನುತ್ತಾರೆ. ಭಾರತದ ದೇವರುಗಳಿಗೇ ದಯೆ, ಕರುಣೆ ಇಲ್ಲ. ಪೂಜಿಸಿದರೆ ಅಭಯ, ಇಲ್ಲದಿದ್ದರೆ ಹಿಡಿ ಶಾಪ ಎನ್ನುವುದು ಅವುಗಳ ಮರ್ಜಿ. ಚರಿತ್ರೆಯುದ್ದಕೂ ಧರ್ಮಗಳಿಗಾಗಿ ಬಲಿ, ಯುದ್ಧ, ಸಾವು ನೋವು ನಡೆದು ದಾಖಲಾಗಿವೆ. ಹಿಂದೂ, ಕ್ರಿಶ್ಚಿಯನ್, ಇಸ್ಲಾಂ, ಬೌದ್ಧ, ಜೈನ ಎಂದು ಎಲ್ಲ ಧರ್ಮಗಳೂ ದಯೆ, ಕರುಣೆಯನ್ನು ಧಾರಾಳವಾಗಿ ಹೇಳಿವೆ. ಹಾಗೆಯೇ ಚಾರಿತ್ರಿಕವಾಗಿ ಧಾರಾಳವಾಗಿ ನೆತ್ತರು ಹರಿಸಿವೆ. ಆ ಇತಿಹಾಸ ಈಗಲೂ ರಶಿಯಾ- ಉಕ್ರೇನ್, ಪ್ಯಾಲಿಸ್ತೀನ್- ಇಸ್ರೇಲ್, ಯುಎಸ್‍ಎ ಅಕಾರಣದ ದಾಳಿಗಳು ಎಂದು ಮುಂದುವರಿದಿವೆ.

ಸಕಾರಾತ್ಮಕ ಮನೋಭಾವ ಹೊಂದಿದವರೊಡನೆ ಇರುವುದು, ಸಖ್ಯ ಸಂತೋಷದಾಯಕ ಎನ್ನಲಾಗಿದೆ. ಆದರೆ ಅವರು ಎಲ್ಲಿ ಇದ್ದಾರೆ ಎಂದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಸಣ್ಣ ಪುಟ್ಟದಕ್ಕೆಲ್ಲ ಆನಂದ ಪಡುವುದು ಸಂತೋಷವಾಗಿರಲು ಇರುವ ಒಂದು ಹೆದ್ದಾರಿಯಾಗಿದೆ. ಆದರೆ ಹೆಚ್ಚಿನ ಭಾರತೀಯರು ಸಣ್ಣ ಪುಟ್ಟದಕ್ಕೆಲ್ಲ ಆನಂದ ಪಡುವವರಲ್ಲ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.