ಮಂಗಳೂರಿನಲ್ಲಿ ಅಂತರ್ ರಾಷ್ಟ್ರೀಯ ಈಜುಕೊಳ ಲೋಕಾರ್ಪಣೆ

19ನೇ ರಾಷ್ಟ್ರೀಯ ಹಿರಿಯರ ಈಜುಸ್ಪರ್ಧೆಯ ಆರಂಭದೊಂದಿಗೆ ನಗರದ ಎಮ್ಮೆಕೆರೆ ಪ್ರದೇಶದಲ್ಲಿ ಒಲಂಪಿಕ್ಸ್ ಮಾನದಂಡದ ಪ್ರಕಾರ ನಿರ್ಮಿಸಿರುವ ಅತ್ಯಾಧುನಿಕ ಈಜುಕೊಳ ಉದ್ಘಾಟನೆಗೊಂಡಿದೆ.
ಈಜುಕೊಳ ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್ ಮಾತನಾಡಿ, ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಆದಾಯ ಸೃಷ್ಟಿಸುವ ಯೋಜನೆಗಿಂತ ಹೆಚ್ಚಾಗಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಇನ್ನು ಮುಂದೆಯಾದರೂ ಮಹಾನಗರ ಪಾಲಿಕೆಯ ಯಾವುದಾದರೂ ಯೋಜನೆಯಡಿ ಆದಾಯ ವೃದ್ಧಿಸುವ ಕಾಮಗಾರಿ ಕೈಗೆತ್ತಿಕೊಳ್ಳೋಣ ಎಂದರು.

ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ನಿರ್ದಿಷ್ಟ ಯೋಜನೆ ರೂಪಿಸಿದರೆ ನಗರಾಭಿವೃದ್ಧಿ ಇಲಾಖೆಯಿಂದ 50 ಕೋಟಿ ಅನುದಾನವನ್ನು ಒದಗಿಸಲಾಗುವುದು. ರಾಜಕೀಯವನ್ನು ಚುನಾವಣೆಗೆ ಸೀಮಿತವಾಗಿಟ್ಟು ಎಲ್ಲರೂ ಸೇರಿ ಮಂಗಳೂರ ನಗರವನ್ನು ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಮಂಗಳೂರು ನಗರದಲ್ಲಿ ಮಾರುಕಟ್ಟೆ ಸೇರಿ ಹಲವು ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದೆ. ಅಭಿವೃದ್ಧಿಯ ಜೊತೆಗೆ ನೀವು ಹೇಳಿದ ಆದಾಯ ತರುವ ಯೋಜನೆಗಳೂ ಇದೆ. ಅಭಿವೃದ್ಧಿ ಕಾರ್ಯದಲ್ಲಿ ನಮ್ಮಲ್ಲಿ ಯಾವುದೇ ರಾಜಕೀಯ ಇಲ್ಲ.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಅಭಿವೃದ್ಧಿ ಅಗಿದೆ. ಮಾರ್ಕೆಟ್, ಪಾರ್ಕಿಂಗ್ ಜಾಗ ಸೇರಿ ಹಲವು ಕೆಲಸ ಆಗ್ತಿದೆ. ಒಮ್ಮೆ ಮಾನ್ಯ ಭೈರತಿ ಸುರೇಶ್ ರವರು ಇದರ ಸಭೆ ನಡೆಸಬೇಕು. ವಾಟರ್ ಫ್ರಂಟ್ ಕಾಮಗಾರಿಗೆ ಕೆಲ ಖಾಸಗಿ ವ್ಯಕ್ತಿಗಳ ತಡೆ ಇದೆ. ಅದನ್ನು ಸಚಿವರು ಸಭೆ ನಡೆಸಿ ಸರಿ ಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು. ವಿವಿಧ ರಾಜ್ಯಗಳ ಈಜುಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
