ಫೆಬ್ರವರಿ 14: ಶಿವಪಾಡಿಯಲ್ಲಿ ಪುಂಗನೂರು ಗೋವುಗಳೊಂದಿಗೆ ಗೋವು ಆಲಿಂಗನ ದಿನಾಚರಣೆ

ಫೆಬ್ರವರಿ 14 ನ್ನು ಗೋವು ಆಲಿಂಗನ ದಿನವಾಗಿ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮವು ಬೆಳಿಗ್ಗೆ 9.30ರಿಂದ ವಿಶಿಷ್ಟ ಮತ್ತು ಧಾರ್ಮಿಕ ಮಹತ್ವದ ಪುಂಗನೂರು ಗೋವುಗಳ ಆಲಿಂಗನದ ಮೂಲಕ ಆರಂಭವಾಗುವುದು. ಗೋವು ಪ್ರಿಯರು ಮತ್ತು ಆಸ್ತಿಕ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋವು ಆಲಿಂಗನ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.
ಪುಂಗನೂರು ತಳಿಯ ಗೋವುಗಳು ಜಗತ್ತಿನಲ್ಲೇ ಅತಿ ಸುಂದರ, ಗಿಡ್ಡದಾದ ಮತ್ತು ಅತಿ ಹೆಚ್ಚು ಔಷಧೀಯ ಗುಣದ ಹಾಲು ನೀಡುತ್ತವೆ ಮತ್ತು ಧಾರ್ಮಿಕವಾಗಿಯೂ ಮಹತ್ವ ಹೊಂದಿವೆ. ಆಂಧ್ರಪ್ರದೇಶದ ಚಿತ್ತೂರು ಮೂಲದ ಈ ತಳಿ ಅಳಿವಿನಂಚಿನಲ್ಲಿದ್ದು, ಕೆಲವೇ ನೂರರಷ್ಟು ಹಸುಗಳು ಈಗ ಭಾರತದಲ್ಲಿ ಉಳಿದುಕೊಂಡಿವೆ. ತಿರುಪತಿಯ ಶ್ರೀನಿವಾಸನಿಗೆ ನಿತ್ಯ ಅಭಿಷೇಕ, ನೈವೇದ್ಯಕ್ಕೆ ಸಲ್ಲಿಕೆಯಾಗುವ ಹಾಲೂ ಇದೇ ತಳಿಯದ್ದು. ಇಂತಹ ಶ್ರೇಷ್ಠತೆಗಳನ್ನು ಹೊಂದಿದ ಅತ್ಯಪರೂಪದ ತಳಿಯ 4 ಗೋವುಗಳನ್ನು ಅತಿರುದ್ರಯಾಗ ಕ್ಕೆ ಪೂರ್ವಭಾವಿಯಾಗಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತರಿಸಲಾಗಿದೆ. ಅತಿರುದ್ರ ಮಹಾಯಾಗವು ಶ್ರೀ ಕ್ಷೇತ್ರ ಶಿವಪಾಡಿಯಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 5 ರವರೆಗೆ ಜರುಗಲಿದೆ.