ಯೋಧ ಮುರಳೀಧರ್ ರೈ ಹೃದಯಾಘಾತದಿಂದ ನಿಧನ

ಸಶಸ್ತ್ರ ಸೀಮಾಬಲ್‍ನಲ್ಲಿ ಭೋಪಾಲ್‍ನಲ್ಲಿ ಸೇವಾ ನಿರತರಾಗಿದ್ದ ಮಂಗಳೂರು ಶಕ್ತಿನಗರದ ನಿವಾಸಿ ಹವಾಲ್ದಾರ್ ಮುರಳೀಧರ್ ರೈ (37) ಅವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರವಿವಾರ ಭೋಪಾಲ್‍ನಲ್ಲಿ ಮಲಗಿದಲ್ಲೇ ಅವರಿಗೆ ಹೃದಯಾಘಾತವಾಗಿದ್ದು, ಸೋಮವಾರ ಬೆಳಗ್ಗೆ ಜತೆಗಿದ್ದವರು ಕರೆದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.

ಊರಿಗೆ ಬರುವವರಿದ್ದರು ಮುರಳೀಧರ್ ರೈ ಅವರು 2007ರಲ್ಲಿ ಕಾನ್‍ಸ್ಟೆಬಲ್ ಆಗಿ ಸಶಸ್ತ್ರ ಸೀಮಾ ಬಲ್‍ಗೆ ಸೇರಿದ್ದರು. ರವಿವಾರ ರಾತ್ರಿ ವೀಡಿಯೋ ಕಾಲ್ ಮೂಲಕ ಪತ್ನಿ ಜತೆ ಮಾತನಾಡಿದ್ದರು. ಫೆ. 5ರಂದು ನಡೆಯಲಿದ್ದ ತಾಯಿಯ ನಿಧನದ ಮೊದಲ ವರ್ಷದ ಕಾರ್ಯಕ್ರಮಕ್ಕಾಗಿ ಎರಡು ವಾರದ ರಜೆಯಲ್ಲಿ ಮಂಗಳವಾರ ಹೊರಟು ಬುಧವಾರ ಊರಿಗೆ ಬರುವವರಿದ್ದರು. ಅವರು ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಅಗಲಿದ್ದಾರೆ.

ಭೋಪಾಲ್‍ನಿಂದ ವಿಮಾನದ ಮೂಲಕ ಮುರಳೀಧರ ಅವರ ಮೃತದೇಹವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. ಡಿಸಿ ರವಿ ಕುಮಾರ್ ಎಂ.ಆರ್., ಜಿ.ಪಂ. ಸಿಇಒ ಡಾ| ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರವನ್ನು ಶಕ್ತಿನಗರದ ಮುಗ್ರೋಡಿ ಸಂಜಯನಗರದ ಅವರ ಮನೆಯಿಂದ ಮೆರವಣಿಗೆ ಮೂಲಕ ಆಂಜನೇಯ ಸಭಾಭವನ ಮೈದಾನಕ್ಕೆ ತಂದು ಅಲ್ಲಿ ಸರಕಾರಿ ಗೌರವ ಸಲ್ಲಿಸಲಾಯಿತು. ಅನಂತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Related Posts

Leave a Reply

Your email address will not be published.