ಹಬ್ಬಗಳಿಗೂ ಹಬ್ಬದೂಟಕ್ಕೂ ಇರುವ ಸಂಬಂಧ

ಸೂರ್ಯ ಗ್ರಹಣವನ್ನು ಆಚೆಗಿಟ್ಟು ಈಚೆಗೆ ಬಂದಿವೆ ಹಬ್ಬಗಳು. ಶುಭ ಶುಕ್ರವಾರ ಹೋಗಿ ಬಿಡ್ತು. ಈದ್ ಉಲ್ ಪಿತ್ರ್ ಉಪವಾಸದ ಕೊನೆಯ ಶುಕ್ರವಾರವೂ ಕಳೆದು ಹೋಯಿತು. ಮಂಗಳಕರ ದಿನದ ಯುಗಾದಿಯೂ ಬಂತು. ಹಬ್ಬಗಳು ಎಲ್ಲ ಜನಪದಗಳಲ್ಲೂ ಬರುತ್ತಿರುತ್ತವೆ; ಎಲ್ಲ ಧರ್ಮಗಳಲ್ಲೂ ಬರುತ್ತಿರುತ್ತವೆ. ನಾಸ್ತಿಕರು ಹೆಚ್ಚುತ್ತಲಿದ್ದರೂ ನಂಬಿದವರಿಗೆ ಇಂಬು ಸಿಗುತ್ತದೆ ಎಂದು ಹಬ್ಬಗಳನ್ನು ಒಪ್ಪಿ ಅಪ್ಪಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ.


ಪರ ಆಪು ಎಂದರೆ ಹಳೆಯ ಆಚರಣೆ. ಹಳೆಯ ಆಚರಣೆಗಳ ಕೊಂಡಿ ಇರುವುದು ಪರಬು ಕಯ್ಯಲ್ಲಿ. ಈ ಪರ ಆಪು ಪರ್ಬ ಮತ್ತು ಪರ್ವ ಎರಡಕ್ಕೂ ಮೂಲವಾದ ನುಡಿಯಾಗಿದೆ. ಈ ಪರ್ಬದಿಂದಲೇ ಪರ್ವ ಮತ್ತು ಹಬ್ಬ ನುಡಿಗಳು ಹುಟ್ಟಿವೆ. ಹಬ್ಬಗಳು ಪರ್ವ ಕಾಲಗಳೂ ಆಗಿವೆ. ಸರ್ವ ಕಾಲದಲ್ಲಿ ಬರುವವುಗಳಲ್ಲ. ಸುಗ್ಗಿ ಋತುಗಳನ್ನು ಮುಂದಿಟ್ಟು ಈ ಹಬ್ಬಗಳು ಬರುತ್ತವೆ. ಮರಾಠಿಗರ ಮತ್ತು ಗೋವಾದವರ ಗುಡಿ ಪಡ್ವಾ ಎಂಬುದು ಸುಗ್ಗಿ ಸೂಚಕವಾಗಿಯೇ ಇದೆ. ಇವೆಲ್ಲ ವಸಂತ ಕಾಲದ ಬೆಳೆ ಉರ್ಬಿನ ಹಬ್ಬಗಳಾಗಿವೆ.


ಈದ್ ಉಲ್ ಪಿತ್ರ್ ಇಸ್ಲಾಂ ಕ್ಯಾಲೆಂಡರಿನ ಹೊಸ ವರುಷದ ದಿನವಲ್ಲ. ಇಸ್ಲಾಮಿಯರ ವರುಷದ ಒಂಬತ್ತನೆಯ ತಿಂಗಳು ಮುಗಿದು ಹತ್ತನೆಯ ತಿಂಗಳಿಗೆ ಕಾಲಿಡುವ ಮೊದಲ ದಿನವಾಗಿದೆ. ಜಗತ್ತಿನ ಉದ್ದಗಲಕ್ಕೂ 200 ಕೋಟಿ ಮುಸ್ಲಿಮರು ಈದ್ ಉಲ್ ಪಿತ್ರ್ ಆಚರಿಸುತ್ತಾರಾದ್ದರಿಂದ ಕ್ರಿಶ್ಚಿಯನರ ಹಬ್ಬದಂತೆಯೇ ಅದಕ್ಕೆ ವ್ಯಾಪಕತೆ ಇದೆ. ಪರಸ್ಪರ ಅಪ್ಪಿಕೊಳ್ಳುವುದು, ಆದಾಯದಲ್ಲಿ ನಿಶ್ಚಿತ ಪಾಲು ದಾನ ಮಾಡುವುದು, ಬಿರಿಯಾನಿ ಊಟ ಇವೆಲ್ಲ ಈ ಮುಸ್ಲಿಮರ ಹಬ್ಬದ ವಿಶೇಷತೆಗಳಾಗಿವೆ.


ಚಾಂದ್ರಮಾನ ಲೆಕ್ಕಾಚಾರ ಆಗಿರುವುದರಿಂದ ಇದು ಇಡೀ ವರುಷಕ್ಕೆ ಆವರ್ತನಗೊಳ್ಳಲು ಸುಮಾರು 52 ವರುಷ ದಾಟುತ್ತದೆ. ಹಾಗಾಗಿ ಇದು ಒಂದು ಪರ್ವಕ್ಕೆ ಸೀಮಿತವಾದ ಹಬ್ಬವಲ್ಲ. ಒಂದು ಧರ್ಮದವರ ನಂಬಿಕೆಗೆ ಸೀಮಿತವಾದ ಹಬ್ಬ. ಮುಸ್ಲಿಮರ ಚಾಂದ್ರಮಾನದಂತೆಯೇ ಭಾರತಕ್ಕೆ ಬಂದ ಜನ ವರ್ಗದಲ್ಲೂ ಚಾಂದ್ರಮಾನ ಲೆಕ್ಕಾಚಾರದ ಹೊಸ ವರುಷ ಬರುತ್ತದೆ. ಯುಗಾದಿ ಎಂದರೂ ಇದು ಉಗೋ ಆದಿ ಉಗಾದಿ ಎಂದೇ ತಿಳಿಯಲಾಗುತ್ತದೆ. ಬೇವು ಬೆಲ್ಲ, ಎಳ್ಳು ಹಂಚುವುದು, ಒಬ್ಬಟ್ಟು ಊಟ ಈ ಚಾಂದ್ರಮಾನಿಗರ ಯುಗಾದಿಯ ವಿಶೇಷ. ಆದರೆ ತುಳುನಾಡಿನಲ್ಲಿ ಅನಂತರ ಬಂದವರ ಹೊರತಾಗಿ ಇಲ್ಲೇ ಇರುವ ಮೂಲ ನಿವಾಸಿಗಳು ಯಾರೂ ಈ ಯುಗಾದಿಯನ್ನು ಆಚರಿಸುವುದಿಲ್ಲ.


ಆದರೆ ಹಬ್ಬವನ್ನು ಮೀರಿ ಪ್ರಕೃತಿಯು ಹೊಸ ವರುಷವನ್ನು ಆಚರಿಸಿಕೊಳ್ಳುತ್ತದೆ. ಬಿಸು ಬಸಂತ ವಸಂತ ಬರುವಾಗ ಹೊಸ ಚಿಗುರು, ಹೊಸ ಹೂವು, ಹೊಸ ಫಲ ಇವೆಲ್ಲವೂ ನೈಸರ್ಗಿಕವಾಗಿ ಈ ಭೂಮಿಯಲ್ಲಿ ಹೊಸ ಗಮಲನ್ನು ಹಬ್ಬುತ್ತದೆ. ಪ್ರಕೃತಿಗೆ ಇದು ಹೊಸ ವರುಷದ ಹೊಸ ಉಡುಗೆಯ ಹಬ್ಬ. ಚಿಗುರೆಲೆ, ಬಣ್ಣ ಬಣ್ಣದ ಹೂವು ಹಣ್ಣುಗಳ ಹೊಸ ಉಡುಗೆಯಲ್ಲಿ ಪ್ರಕೃತಿ ಮಾತೆಯು ಕಂಗೊಳಿಸುತ್ತಾಳೆ. ಹಾಗಾಗಿ ಅದು ಹೊಸ ಪರ್ವಕ್ಕೆ ಆದಿ, ಹಾಗೆಂದರೆ ನಿಸರ್ಗದ ಪರ್ಬ, ನಿಸರ್ಗದ ಹಬ್ಬವಿದು.


ಫೆಸ್ಟಿವಲ್ ಎಂದರೆ ನಿಶ್ಚಿತ ಆಚರಣೆಯೊಂದಕ್ಕೆ ಜನರು ಸೇರುವುದಾಗಿದೆ. ಆಲ್ಲಿ ಆಚರಣೆಯ ಜೊತೆಗ ಫೀಸ್ಟ್ ಕೂಡ ಇರುತ್ತದೆ. ಅದು ನಮ್ಮಲ್ಲಿ ಹಬ್ಬದೂಟ. ಯಾವುದೇ ಹಬ್ಬವೂ ಮಾಮೂಲಿಗಿಂತ ಬೇರೆಯದಾದ ಊಟ ಇಲ್ಲದೆ ಮುಗಿಯುವುದಿಲ್ಲ. ಆಗ ಚಾಕೊಲೆಟ್ ಈಸ್ಟರ್ ಮೊಟ್ಟೆ, ಈಗ ಹೋಳಿಗೆ. ಮತ್ತೆ ಬಿರಿಯಾನಿ ಹೀಗೆ ಹಬ್ಬದೂಟಗಳು ಬೇರೆ ಬೇರೆ ರೂಪದಲ್ಲಿ ನಮ್ಮ ಮುಂದೆ ಪ್ರತ್ಯಕ್ಷವಾಗುತ್ತವೆ.


ಪ್ರಕೃತಿಯು ತನಗೆ ತಾನೇ ಹೊಸ ಎಲೆ ಹೂವು ಹಣ್ಣುಗಳ ಬಟ್ಟೆ ಹೊಲಿಸಿಕೊಳ್ಳುತ್ತದೆ. ಆದರೆ ಹುಲು ಮಾನವನು ಹೊಸ ಬಟ್ಟೆಗಾಗಿ ಒದ್ದಾಡಬೇಕಾಗುತ್ತದೆ. ಕೆಲವರಿಗೆ ಸುಲಭ ಇರಬಹುದು. ಆದರೆ ಜಗತ್ತಿನ ಬಹತೇಕರು ಹಬ್ಬದ ಹೊಸ ಬಟ್ಟೆ ಎಂದರೆ ಬದುಕು ಸರಳ ಸುಲಭವಲ್ಲ ಎಂದುಕೊಳ್ಳುತ್ತಾರೆ. ಹೆತ್ತವರ ಪಡಿಪಾಟಲು ಕೆಲವೊಮ್ಮೆ ಹಬ್ಬದ ಕಾಲದಲ್ಲಿ ಕಣ್ಣನ್ನು ಕಾಡುತ್ತದೆ. ಆದರೂ ನಂಬಿಕೆಯ ಮಂದಿಯು ಸಾಲ ಮಾಡಿಯಾದರೂ ಹಬ್ಬ ಮಾಡದೆ ಬಿಡುವುದಿಲ್ಲ. ತಳಿರು ತೋರಣಗಳು ಹಿಂದೆ ಎಲೆಗಳದ್ದು ಈಗ ಪ್ಲಾಸ್ಟಿಕ್ಕಿನದು.


ಅದು ಬಾಡುತ್ತದೆ, ಇದು ಬಾಡುವುದಿಲ್ಲ. ಮಾನಸಿಕವಾಗಿಯಾದರೂ ಬಾಡದಿರಲು ಮಾನವ ಕಂಡುಕೊಂಡಿರುವ ಉಪಾಯ ಬಿಡಿ. ಫೆಸ್ಟ್ ಎಂಬ ನುಡಿಯು ಜರ್ಮನ್ ಮೂಲದ್ದಾಗಿದ್ದು, ಇದು ಫೀಸ್ಟ್, ಫೆಸ್ಟಿವಲ್, ಪಾರ್ಟಿ ಎನ್ನುವವುಗಳಿಗೆ ಮೂಲವಾಗಿದೆ. ಅರಾಬಿಕ್‍ನಲ್ಲಿ ಈದ್ ಉಲ್ ಪಿತ್ರ್ ಎಂದರೆ ಉಪವಾಸ ಮುರಿಯುವುದರ ಹಬ್ಬ ಎಂದು ಅರ್ಥ. ತಿಂಗಳಿಡಿಯ ಉಪವಾಸಕ್ಕೆ ಹಬ್ಬದೂಟದ ಮೂಲಕ ಕೊನೆ ಹಾಡುವುದು. ಈದ್ ಎಂದರೆ ಹಬ್ಬ, ಫೀಸ್ಟ್, ವಿಶೇಷ ಊಟ ಎಂದೆಲ್ಲ ಅರ್ಥವಿದೆ. ಈದ್ ಎಂಬುದಕ್ಕೆ ರಜಾ ದಿನ ಎನ್ನುವ ಅರ್ಥವೂ ಇದೆ. ಹಬ್ಬ ಆಚರಿಸುವವರಿಗೆ ರಜೆ ಇಲ್ಲದಿದ್ದರೆ ಹೇಗೆ?


ಕೆಲವರು ಸಂಪಾದಿಸುವುದರಲ್ಲಿ ಹಬ್ಬಕ್ಕೆ ಎಂದೇ ಒಂದಷ್ಟು ಉಳಿಸುವವರೂ ಇದ್ದಾರೆ. ಆದ್ದರಿಂದ ಹಬ್ಬದಲ್ಲಿ ಆ ಉಳಿತಾಯ ಖರ್ಚು ಮಾಡಲು ರಜೆ ಬೇಕೇ ಬೇಕು ತಾನೆ. ತುಳುವರಿಗೆ ಇದು ವಿಶೇಷವಾದ ಹಬ್ಬವೇನೂ ಅಲ್ಲ. ಅವರು ಚಾಂದ್ರಮಾನ ಆಚರಿಸುವುದಿಲ್ಲ. ಸೌರಮಾನದ ಬಿಸು ಆಚರಿಸುತ್ತಾರಾದರೂ ಒಂದು ಪಾಯಸದ ಹೊರತು ಬೇರೇನೂ ವಿಶೇಷ ತುಳುವರಲ್ಲಿ ಈ ಹಬ್ಬಕ್ಕೆ ಇಲ್ಲ. ಅಲ್ಲದೆ ಹಿಂದೆಲ್ಲ ತುಳುವರಿಗೆ ದೀಪೊಲಿ, ಬಲಿಯಂದ್ರ ಪರ್ಬದ ಹೊರತಾಗಿ ಬೇರೆ ಯಾವುದೂ ಹಬ್ಬವಾಗಿ ಇರಲೇ ಇಲ್ಲ.


ಇಲ್ಲಿ ಸ್ಪಷ್ಟವಾಗುವುದೆಂದರೆ ಆಚರಣೆ ಮಾಡುವುದೆಲ್ಲ ಹಬ್ಬವಲ್ಲ ಎನ್ನುವ ಸತ್ಯವನ್ನು. ಹಿಂದೆ ತುಳುವರು ಬಲಿಯಂದ್ರ ಪರ್ಬವನ್ನು ಮಾತ್ರ ಹಬ್ಬವಾಗಿ ಆಚರಿಸಿದರೆ ಉಳಿದವನ್ನೆಲ್ಲ ಆಚರಣೆ ಮಾತ್ರಕ್ಕೆ ಇಟ್ಟುಕೊಂಡಿದ್ದರು. ಅವು ಕೆಲವೊಂದು ಸಂಪ್ರದಾಯಗಳಿಗೆ ಮಿತಿಗೊಂಡುದಾಗಿತ್ತು. ಮನಸ್ಸಿನಂತೆ ಮಾದೇವ ಎನ್ನುವರು ಹಾಗೆಯೇ ಮನಸ್ಸಿನಂತೆ ಹಬ್ಬ ಹುಟ್ಟಿದರೂ, ಅವರು ಮಾಡಿದರು ಎಂದು ಇವರು ಎನ್ನುತ್ತ ಊರೆಲ್ಲ ಹಬ್ಬಿ ಹರಡಿದೆ. ಹಬ್ಬಿದ ಆನಂದವೂ ಹಬ್ಬವೇ ಸರಿ.

ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.