ಅಕ್ರಮವಾಗಿ ಜಾನುವಾರುಗಳ ಸಾಗಾಟ: ಪಡುಬಿದ್ರಿ ಪೊಲೀಸರ ಕಾರ್ಯಾಚರಣೆ
ಎಚ್.ಆರ್.ನೋಂದಾಣಿ ಸಂಖ್ಯೆಯ ಲಾರಿಯೊಂದರಲ್ಲಿ ಹತ್ತಾರು ಕೋಣ, ಎತ್ತು, ಎಮ್ಮೆಗಳನ್ನು ಬೇಕಾಬಿಟ್ಟಿ ತುಂಬಿಸಿಕೊಂಡು ಬರುತ್ತಿದ್ದ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಹೆಜಮಾಡಿ ಟೋಲ್ ಪಕ್ಕ ಅಡ್ಡ ಹಾಕಿ ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯಿಂದ ಕೇರಳಕ್ಕೆ ಇದನ್ನು ಸಾಗಿಸಲಾಗುತ್ತಿದೆ ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಹುಬ್ಬಳ್ಳಿ ಮೂಲದ ಚಾಲಕ ಹಾಗೂ ಕೇರಳ ಮೂಲದ ಲಾರಿ ಕ್ಲಿನರ್ ಪೊಲೀಸ್ ವಶದಲ್ಲಿದ್ದಾರೆ. ಲಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಬಂಧಿಸಲ್ಪಟ್ಟ ಜಾನುವಾರುಗಳನ್ನು ಸ್ಥಳೀಯ ಹಿಂದೂ ಸಂಘಟನೆಯ ಸದಸ್ಯ ಮನೋಹರ್ ನೇತ್ರತ್ವದಲ್ಲಿ ರಕ್ಷಿಸುವ ಕಾರ್ಯ ನಡೆಯುತ್ತಿದೆ.
ಕೆಲವೊಂದು ಜಾನುವಾರುಗಳ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ. ರಕ್ಷಣಾ ಕಾರ್ಯದ ಸಂದರ್ಭ ಎಮ್ಮೆಯೊಂದು ಜಿಗಿದು ಓಡಲು ಯತ್ನಿಸಿದಾಗ ಕೆಲ ಕ್ಷಣ ಆತಂಕ ಸ್ಥಿತಿ ನಿರ್ಮಾಣವಾಗಿತ್ತು. ದಾರಿ ಹೋಕರಿಗೆ ತಿವಿಯಲು ಯತ್ನಿಸಿದ ಘಟನೆಯೂ ನಡೆದಿದೆ. ಇದೀಗ ಅದರ ಪತ್ತೆ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿಯಿಂದ ಅದೇಷ್ಟೋ ಪೊಲೀಸ್ ಚೆಕ್ ಪೋಸ್ಟ್, ಟೋಲ್ ಗೇಟ್ ಗಳನ್ನು ದಾಟಿ ಈ ಜಾನುವಾರು ಸಾಗಾಟ ವಾಹನ ಬಂದಿರುವುದು ಹೇಗೆ ಎಂಬುದು ಇಲಾಖೆಯನ್ನು ಸಂಶಯದಿಂದ ನೋಡುವಂತೆ ಮಾಡಿದೆ. ಅದಲ್ಲದೆ ಎರಡು ಲಾರಿಗಳಲ್ಲಿ ಬಂದುರುವ ಸಂಶಯ ವ್ಯಕ್ತವಾಗುತ್ತಿದ್ದು ಇದರ ಮುಂದಿನಿಂದ ಬಂದ ಲಾರಿ ಪಡುಬಿದ್ರಿ ಪೊಲೀಸರ ಕಣ್ಣು ತಪ್ಪಿಸಿ ಮುಂದೋಗಿದೆ ಎನ್ನಲಾಗಿದೆ. ಪಡುಬಿದ್ರಿ ಎಸ್ಸೈ ಅಶೋಕ್ ಕುಮಾರ್ ನೇತ್ರತ್ವದಲ್ಲಿ ನಡೆದ ಈ ಕಾರ್ಯಚರಣೆಯ ಬಗ್ಗೆ ಎಲ್ಲೆಡೆ ಬಾರೀ ಪ್ರಶಂಸೆ ವ್ಯಕ್ತವಾಗಿದೆ.