ಹೊಸ ವರ್ಷಾಚರಣೆ ಹಿನ್ನೆಲೆ, ಪೊಲೀಸರಿಂದ ರಾತ್ರಿ ವೇಳೆ ಕಟ್ಟುನಿಟ್ಟಿನ ಕಾರ್ಯಾಚರಣೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದು ರಾತ್ರಿ ವೇಳೆ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ರಾತ್ರಿ ವೇಳೆ ಹೊಟೇಲ್, ಪಬ್, ರೆಸ್ಟೋರೆಂಟ್ ಗಳಲ್ಲಿ 12.30ರ ವರೆಗೂ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ, ಡಿಜೆ ಇನ್ನಿತರ ಧ್ವನಿ ವರ್ಧಕ ಬಳಕೆಯನ್ನು ರಾತ್ರಿ 10 ಗಂಟೆಗೆ ಕೊನೆಗೊಳಿಸಬೇಕು ಎಂದು ಕಮಿಷನರ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದನ್ವಯ ರಾತ್ರಿ ಹತ್ತು ಗಂಟೆ ಬಳಿಕ ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ನಾವು ಅದನ್ನು ಪಾಲನೆ ಮಾಡಬೇಕಾಗುತ್ತದೆ. ರಾತ್ರಿ 10ರಿಂದ ಧ್ವನಿವರ್ಧಕ ಬಂದ್ ಮಾಡಿ, ಜಿಲ್ಲಾಡಳಿತದ ಜೊತೆಗೆ ಸಹಕರಿಸಬೇಕು ಎಂದು ಕಮಿಷನರ್ ಹೇಳಿದ್ದಾರೆ. ಅಲ್ಲದೆ, ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸಬಾರದು. ಇದಕ್ಕಾಗಿ ಮಂಗಳೂರು ನಗರ ಸೇರಿ ಕಮಿಷನರೇಟ್ ವ್ಯಾಪ್ತಿಯಲ್ಲಿ 32 ಕಡೆ ಚೆಕ್ ಪೋಸ್ಟ್ ಮಾಡಲಾಗುವುದು. ರಾತ್ರಿ ವೇಳೆ ಕುಡಿದು ಚಲಾಯಿಸುವುದು, ವಾಹನ ದಾಖಲಾತಿ ಪರಿಶೀಲನೆಯನ್ನೂ ಮಾಡಲಿದ್ದಾರೆ. ರಾತ್ರಿ 12.30ರ ವರೆಗೆ ಕಾರ್ಯಕ್ರಮಕ್ಕೆ ಅವಕಾಶ ಇದೆಯೆಂದು ಅಲ್ಲಿ ವರೆಗೂ ಲಿಕ್ಕರ್ ಪೂರೈಸಲು ಅವಕಾಶ ಇರುವುದಿಲ್ಲ. ಲಿಕ್ಕರ್ ಸರಬರಾಜು ರಾತ್ರಿ 11 ಗಂಟೆಗೆ ಎಂದಿನಂತೆ ಕ್ಲೋಸ್ ಆಗಬೇಕು ಎಂದಿದ್ದಾರೆ ಕಮಿಷನರ್.

ಬೀಚ್ ಗಳಲ್ಲಿ ಆಟವಾಡಲು ಸಂಜೆ ವರೆಗೆ ಮಾತ್ರ ಅವಕಾಶ ಇರುವುದು. ರಾತ್ರಿ ವೇಳೆ ಬೀಚ್ ಗಳಲ್ಲಿ ಉಳಿಯುವುದಕ್ಕೆ ಅವಕಾಶ ಇರಲ್ಲ. ಉಳಿದಂತೆ, ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮ ನಡೆಸುವುದಿದ್ದರೂ ಇಲಾಖೆಯ ಅನುಮತಿ ಪಡೆಯಬೇಕು. ಬಜರಂಗದಳ ಸಂಘಟನೆ ಹೊಸ ವರ್ಷಾಚರಣೆಗೆ ಅಡ್ಡಿ ಪಡಿಸುತ್ತದೆಯೇ ಎಂಬ ಪ್ರಶ್ನೆಗೆ, ಯಾವುದೇ ಸಂಘಟನೆಗಳಿಗೆ ನೇರವಾಗಿ ಎಚ್ಚರಿಕೆ ಕೊಡುವ ಅಧಿಕಾರ ಇಲ್ಲ. ಸಾರ್ವಜನಿಕ ಜಾಗದಲ್ಲಿ ಆಚರಣೆ ನಡೆಯುತ್ತಿದ್ದರೆ, ಅಲ್ಲಿಗೆ ಯಾರು ಕೂಡ ಹೋಗುವಂತಿಲ್ಲ ಎಂದು ತಡೆಯುವುದಕ್ಕೂ ಆಗುವುದಿಲ್ಲ. ಅಹಿತಕರ ಘಟನೆಗಳಾದಲ್ಲಿ ಅಥವಾ ಯಾರಾದ್ರೂ ತೊಂದರೆ ಕೊಟ್ಟರೆ ಕೂಡಲೇ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, 112 ಗೆ ಕರೆ ಮಾಡಿ ದೂರು ಕೊಡಬಹುದು ಎಂದು ಹೇಳಿದ್ದಾರೆ.

Related Posts

Leave a Reply

Your email address will not be published.