ಕರಾವಳಿಯ ಸೊಬಗಿನಲ್ಲಿ ರಂಗೇರಿತು “ಕೆಸರ್ಡ್ ಒಂಜಿ ದಿನ”

ಉಡುಪಿ : ಕರಾವಳಿಯ ಮಣ್ಣಿನ ಸೊಬಗು, ಆಚರಣೆಯ ಸೊಗಡು ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಕರಾವಳಿಯಲ್ಲಿ ಮಳೆ ಬಂದರೆ ಸಾಕು ಅನೇಕ ಪದ್ಧತಿಗಳು, ಆಟೋಟ ಸ್ಪರ್ದೆಗಳು ಆರಂಭವಾಗುತ್ತವೆ. ಮಳೆಗಾಲ ಬಂದಾಗ ಕರಾವಾಳಿಯ ಗದ್ದೆಗಳು ತುಂಬಿ ತುಳುಕುತ್ತವೆ, ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಆದರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಪಾರಂಪರಿಕವಾಗಿ ಬೆಳೆದು ಬಂದ ಹಳ್ಳಿ ಜನಪದ ಕ್ರೀಡೆಗಳು ಮೂಲೆ ಗುಂಪಾಗುತ್ತಿರುವುದರಿಂದ, ಕೆಸರುಗದ್ದೆ ಜನಪದ ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳಿಗೆ ಕೆಸರು ಗದ್ದೆ, ಕೃಷಿಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ, ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ವತಿಯಿಂದ ಪೆರಂಪಳ್ಳಿಯ ಗದ್ದೆಯಲ್ಲಿ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಟ್ರಿನಿಟಿ ಸೆಂಟ್ರಲ್ ಸ್ಕೂಲ್ ನಿಂದ ಕಾರ್ಯಕ್ರಮದ ಸ್ಥಳದ ವರೆಗೆ ಮೆರವಣಿಗೆ ನಡೆಯಿತು. ನಂತರ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಮಾಜಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಜನರು ಕೃಷಿಯಲ್ಲಿ ತೊಡಗಿಸಿಕೊಂಡ ಕಾರಣ ಕೆಸರಿನಲ್ಲಿ ಬೆರೆತು ಆರೋಗ್ಯದಿಂದ ಇದ್ದರು. ಆದರೆ ಈಗ ಅದೇ ಕೆಸರನ್ನು ಮಡ್ ಬಾತ್ ಅಂತ ಹೇಳಿ ಚಿಕಿತ್ಸೆಗೆ ಬಳಸುತ್ತಾರೆ. ಮಕ್ಕಳಿಗೆ ಕೃಷಿಯ ಮಹತ್ವ, ಕೆಸರಿನ ಗುಣದ ಬಗ್ಗೆ ತಿಳಿಯಬೇಕಾದರೆ ಇಂತಹ ಕಾರ್ಯಕ್ರಮ ಅಗತ್ಯ. ಟ್ರಿನಿಟಿ ವಿದ್ಯಾಸಂಸ್ಥೆ ಮೊದಲನೆಯದಾಗಿ ಇಂತಹ ಕಾರ್ಯಕ್ರಮ ಮಾಡಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಟ್ರಿನಿಟಿ ಶಾಲಾ ಪ್ರಾಂಶುಪಾಲರಾದ ಫಾ. ಡೋಮೆನಿಕ್ ಸುನಿಲ್ ಲೋಬೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹರಿಕೃಷ್ಣ ಶಿವತ್ತಾಯ, ಉಪ ಪ್ರಾಂಶುಪಾಲ ಮತ್ತು ಆಡಳಿತಾಧಿಕಾರಿ ಫಾ. ರವಿ ರಾಜೇಶ್ ಸೆರಾವೋ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಶ್ರೀಧರನ್ ಉಪಸ್ಥಿತರಿದ್ದರು.
ನಂತರ ಮಕ್ಕಳಿಗೆ ಮತ್ತು ಹೆತ್ತವರಿಗೆ ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ದೆಗಳು ನಡೆದವು. ನಿಧಿ ಶೋಧ, 100 ಮೀಟರ್ ಓಟ, ಹಗ್ಗಜಗ್ಗಾಟ, ವಾಲಿಬಾಲ್, ಸಂಗೀತ ಕುರ್ಚಿ ಹೀಗೆ ಅನೇಕ ಕ್ರೀಡೆಯಲ್ಲಿ ಎಲ್ಲರೂ ಉತ್ಸಾಹದಲ್ಲಿ ಪಾಲ್ಗೊಂಡರು ಹಾಗೂ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು. ಒಟ್ಟಿನಲ್ಲಿ ಈ ಕೆಸರು ಗದ್ದೆ ಕ್ರೀಡಾಕೂಟದಿಂದಾಗಿ ಯುವಜನತೆಗೆ ಗ್ರಾಮೀಣ ಕ್ರೀಡೆಯನ್ನು ತಿಳಿದುಕೊಳ್ಳಲು ಉತ್ತಮ ಅವಕಾಶವಾಗಿತ್ತು. ಅಷ್ಟೇ ಅಲ್ಲದೆ ಈ ಕ್ರೀಡೆಯ ನೆಪದಿಂದ ಎಲ್ಲರೂ ಗದ್ದೆಗೆ ಇಳಿಯುವಂತಾಯಿತು.