ಬಂಟ್ವಾಳ: ಮನೆಯೊಂದಕ್ಕೆ ನುಗ್ಗಿ ನಗ, ನಗದು ದರೋಡೆ
ಬಂಟ್ವಾಳ: ನಾಲ್ವರು ಮುಸುಕುಧಾರಿಗಳು ಮನೆಯೊಂದಕ್ಕೆ ನುಗ್ಗಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಗೈದ ಘಟನೆ ಶುಕ್ರವಾರ ಮುಂಜಾನೆ ವಗ್ಗದಲ್ಲಿ ನಡೆದಿದೆ.
ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಪ್ಲೋರಿನ್ ಪಿಂಟೋ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಮಗಳು ಮರಿನಾ ಪಿಂಟೋ ಮಾತ್ರ ಇದ್ದು ಇದ್ದು, ಕಪಾಟಿನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂ.ಮೌಲ್ಯದ ಚಿನ್ನಾಭರಣ 30 ಸಾವಿರ ರೂಪಾಯಿ ನಗದು ಹಾಗೂ ಒಂದು ಮೊಬೈಲ್ ಪೋನ್ ಸೇರಿ ಅಂದಾಜು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ದರೋಡೆಯಾಗಿರುವುದಾಗಿ ತಿಳಿದು ಬಂದಿದೆ. ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ಮನೆಯ ಕಾಲಿಂಗ್ ಬೆಲ್ ಸದ್ದು ಕೇಳಿ ಬಾಗಿಲು ತೆಗೆದಾಗ ನಾಲ್ವರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ಹಣ, ಚಿನ್ನವನ್ನು ಕೊಡುವಂತೆ ಬೆದರಿಸಿದ್ದಾರೆ. ಬೆದರಿಕೆಗೆ ಜಗ್ಗದಿದ್ದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆಯೊಡ್ಡಿದ್ದಿ ಕಪಾಟಿನ ಬೀಗದ ಕೀ ನೀಡಿರುವುದಾಗಿ ಮನೆಮಂದಿ ತಿಳಿಸಿದ್ದಾರೆ. ಕಳ್ಳರು ಚಿನ್ನಾಭರಣ ದೋಚುವ ವೇಳೆ ಅಡ್ಡ ಬಂದ ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ
ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್, ಎಸೈ ಹರೀಶ್ ಭೇಟಿ ನೀಡಿದ್ದಾರೆ. ಶ್ವಾನದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.