ಶ್ರವಣಬೆಳಗೊಳ – ಸುಮಾರು 1000 ಲೀಟರ್ ಹಾಲನ್ನು ನೆಲಕ್ಕೆ ಸುರಿದು ಪ್ರತಿಭಟನೆ
ಶ್ರವಣಬೆಳಗೊಳ ಹೋಬಳಿಯ ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹಾಲು ಉತ್ಪಾದಕರು ಸುಮಾರು 1000 ಲೀಟರ್ ಹಾಲನ್ನು ನೆಲಕ್ಕೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.
23 ವರ್ಷಗಳ ಹಿಂದೆ ಆರಂಭಗೊಂಡಿರುವ ಈ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಅಂದಿನಿಂದ ಇಂದಿನವರೆಗೂ ಇದೇ ಗ್ರಾಮದ ಜಯಂತಿ ಎಂಬುವವರು ಕಾರ್ಯದರ್ಶಿಯಾಗಿದ್ದಾರೆ. ಇತ್ತೀಚೆಗೆ ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಜಯಂತಿಯವರನ್ನು ಈವರೆಗಿನ ಖರ್ಚು ವೆಚ್ಚದ ವರದಿಯನ್ನು ಕೇಳಲಾಗಿದೆ.
ಆದರೆ ಇದಕ್ಕೆ ಕಾರ್ಯದರ್ಶಿ ಪ್ರತಿಕ್ರಿಯಿಸಲಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೂ ದೂರು ನೀಡಿ, ಲೆಕ್ಕ ಪತ್ರದಲ್ಲಿ ವ್ಯತ್ಯಾಸ ಮಾಡಿದ್ದಾರೆ ಎಂದು ಆರೋಪಿಸಿ ಆಡಳಿತ ಮಂಡಳಿಯಿಂದ ಅವರನ್ನು ಅಮಾನತು ಮಾಡಲು ಸಂಘದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ನಿರ್ದೇಶಕರು ಶಿಫಾರಸ್ಸು ಮಾಡಿದ್ದಾರೆ.
ಕಳೆದ ಇಪ್ಪತ್ತು ದಿನಗಳಿಂದ ಆರೋಪ ಪ್ರತ್ಯಾರೋಪ ನಡೆಯುತ್ತಿತ್ತು. ಆದರೆ ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಗೊಂದಲ ಬಗೆಹರಿಯುವವರೆಗೂ ಹಾಲು ಸ್ವೀಕರಿಸದಂತೆ ನೋಟೀಸ್ ನೀಡಿರುವುದರಿಂದ ಬೇಸತ್ತ ರೈತರು ಹಾಲಿನ ಡೇರಿ ಮುಂದೆ ಪ್ರತಿಭಟನೆ ನಡೆಸಿ ನೆಲಕ್ಕೆ ಹಾಲನ್ನು ಚೆಲ್ಲಿದರು. ಸ್ಥಳಕ್ಕೆ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಒಕ್ಕೂಟದ ಮೇಲ್ವಿಚಾರಕರು ಸಮಸ್ಯೆ ಬಗೆಹರಿಯುವವರೆಗೆ ಪಕ್ಕದ ಗ್ರಾಮಗಳಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲನ್ನು ಹಾಕುವಂತೆ ನೋಟಿಸ್ ನೀಡಿರುವುದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ನೂರಾರು ರೈತರು ಸ್ಥಳದಲ್ಲೇ ಕೂತು ಪ್ರತಿಭಟನೆ ನಡೆಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಬಂದು ಬಗೆಹರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.