ಉಡುಪಿಯಲ್ಲಿ ಗೃಹ ಸಚಿವರೊಂದಿಗೆ ಸಭೆ : ‘ಬೆನಿಫಿಟ್ ಆಫ್ ಡೌಟ್ ನ ಲಾಭ ಬಾಡಿಗೆದಾರರಿಗೆ ಸಿಗಬೇಕು’

ಉಡುಪಿ : ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಗೃಹ ಸಚಿವ ಜಿ. ಪರಮೇಶ್ವರ್, ಇಂದು ಸಂಜೆ ಉಡುಪಿ ಎಸ್ಪಿ ಕಚೇರಿಯಲ್ಲಿ ಉಡುಪಿ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಚಂದ್ರಗುಪ್ತ, ಉಡುಪಿ ಎಸ್ಪಿ ಅಕ್ಷಯ್, ಎಎನ್ ಎಫ್ ಎಸ್ ಪಿ ಪ್ರಕಾಶ್ ನಿಕ್ಕಂ ನೇತೃತ್ವದದಲ್ಲಿ ಪರಿಶೀಲನಾ ಸಭೆ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳ ಮಾಹಿತಿ ಪಡೆದಿದ್ದೇನೆ. ನೈತಿಕ ಪೊಲೀಸ್ ಗಿರಿ ಹತ್ತಿಕ್ಕುವ ಕ್ರಮದ ಬಗ್ಗೆ ಚರ್ಚೆಯಾಗಿದೆ. ಸಮಾಜದ ಸ್ವಾಸ್ತ್ಯ ಹಾಳು ಮಾಡಿ ಕೋಮುವಾದ ಪ್ರಚೋದನೆ ಮಾಡುವ ಕೆಲಸ ಸಹಿಸಲು ಸಾಧ್ಯವಿಲ್ಲ. ಮಾದಕ ವಸ್ತುಗಳ ದಂದೆ ಕರಾವಳಿ ಪ್ರದೇಶದಲ್ಲಿ ನಡೆಯುತ್ತಿದೆ. ಸೂಕ್ಷ್ಮಗ್ರಾಹಿಗಳನ್ನು ಗುರಿ ಮಾಡಿಕೊಂಡು ಮಾದಕ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ. ಡ್ರಗ್ ಪೆಡ್ಲರ್ಸ್ ಕಂಟ್ರೋಲ್ ಮಾಡಿ, ಮಟ್ಕಾ, ದರೋಡೆ ಕ್ರಿಮಿನಲ್ ಚಟುವಟಿಕೆ ಹತ್ತಿಕ್ಕುತ್ತೇವೆ. ನಕ್ಸಲ್ ಪಡೆ ಬರ್ಕಾಸ್ತು ಬಗ್ಗೆ ಯೋಚನೆ ಮಾಡಿಲ್ಲ ಎಂದು ತಿಳಿಸಿದರು.
ಇನ್ನು ಬಾಡಿಗೆ ಮನೆಯಲ್ಲಿ ವಾಸಿಸುವವರು ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ಅರ್ಹರೆ ಇಲ್ಲವೇ ಎಂಬ ಬಾಡಿಗೆದಾರರ ಗೊಂದಲದ ವಿಚಾರದ ಕುರಿತು ಮಾತನಾಡಿದ ಅವರು, ಸರ್ಕಾರ ಎಲ್ಲವನ್ನು ಸ್ಪಷ್ಟವಾಗಿ ಹೇಳಿದೆ. ಗೊಂದಲ ಉಂಟು ಮಾಡುತ್ತಿರುವುದು ಬಿಜೆಪಿಯವರು. ಇಷ್ಟೇ ಹಣ ಖರ್ಚಾಗುತ್ತೆ ಎಂಬುದನ್ನು ಗಮನಿಸಿ ಸ್ಪಷ್ಟ ತೀರ್ಮಾನ ಕೈಗೊಂಡಿದ್ದೇವೆ. ಈ ಯೋಜನೆ ಪಡೆಯಲು ಬಿಪಿಎಲ್ ಎಪಿಎಲ್ ಯಾವುದೇ ವರ್ಗೀಕರಣ ಮಾಡಿಲ್ಲ. ಮುಖ್ಯಮಂತ್ರಿಗಳು ಎಲ್ಲ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ. 12 ತಿಂಗಳು ಸರಾಸರಿ ತೆಗೆದುಕೊಳ್ಳುತ್ತೇವೆ, ಶೇಕಡ 10 ಸೇರ್ಪಡೆ ಮಾಡುತ್ತವೆ. ಶೇಕಡ 10 ‘ಬೆನಿಫಿಟ್ ಆಫ್ ಡೌಟ್’ ನೀಡಿದ್ದೇವೆ. ಬೆನಿಫಿಟ್ ಆಫ್ ಡೌಟ್ ನ ಲಾಭ ಬಾಡಿಗೆದಾರರಿಗೆ ಸಿಗಬೇಕು. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ಕೆಲವೊಂದು ಕಂಡೀಶನ್ ಹಾಕಲೇಬೇಕಾಗುತ್ತದೆ. ಒಂದು ಹಂತದ ಮಾರ್ಜಿನಲ್ ಕಂಡೀಶನ್ ಇರುತ್ತೆ. ಬಡಜನರನ್ನು ಸಬಲೀಕರಣ ಗೊಳಿಸಬೇಕು ಎಂಬ ಉದ್ದೇಶದಿಂದ ಯೋಜನೆ ಜಾರಿ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ನಂತರ, ಅದರಲ್ಲಿ ಒಂದಿಷ್ಟು ಆಚೀಚೆ ಆದಾಗ ಬೊಬ್ಬೆ ಹೊಡೆದರೆ ನಾವೇನು ಮಾಡೋದು. ಬಿಜೆಪಿಯವರಿಗೆ ಈ ಯೋಜನೆ ಮಾಡುವುದು ಬೇಡ ಎಂದು ಯಾರಾದ್ರೂ ಹೇಳಿದ್ದಾರಾ! ಸುಳ್ಳು ಹೇಳಿಕೊಂಡು ಬಂದವರು ಈಗ ಅನುಭವಿಸುತ್ತಿದ್ದಾರೆ ಎಂದು ಬಿಜೆಪಿಯನ್ನು ಟೀಕಿಸಿದರು.