ಮಂಗನಿಂದ ಸೇತುವೆ ಕಟ್ಟಲು ಕಲಿತ ಮಾನವ
ಮಹಾರಾಷ್ಟ್ರದ ಸಚಿವ ಸಂಪುಟ ಸಭೆ ಸೇರಿ ಹೊಸ ಉದ್ಘಾಟನೆ ಆಗಲಿರುವ ಸಮುದ್ರ ಸೇತುವೆಗೆ 250 ರೂಪಾಯಿ ಸುಂಕ ನಿರ್ಧಾರ ಮಾಡಿತು. ವಾಹನಗಳಿಗೆ 250 ರೂಪಾಯಿ ಸುಂಕವನ್ನು ಹಲವು ಸಮಾಜ ಸೇವಕರು ಖಂಡಿಸಿದರು. ಚುನಾವಣೆ ಬರುವಾಗ ಇಷ್ಟು ಸುಂಕವಾದರೆ ಚುನಾವಣೆ ಮುಗಿದ ಮೇಲೆ ಸುಂಕ ದುಪ್ಪಟ್ಟು ಮಾಡುವ ದುರಾಲೋಚನೆ ನಿಮ್ಮದು ಎಂದು ಕೆಲವರು ಕೀಟಲೆ ಮಾಡಿದ್ದೂ ಆಯಿತು. ಭಾರತದ ಅತಿ ಉದ್ದದ ಸೇತುವೆಯಾದ ಇದನ್ನು ಪ್ರಧಾನಿ ಮೋದಿಯವರು ಮುಂದಿನ ವಾರ ಉದ್ಘಾಟನೆ ಮಾಡಲಿರುವರು.
ಮುಂಬಯಿ ಟ್ರಾನ್ಸ್ ಹಾರ್ಬರ್ ಲಿಂಕ್ ಸೇತುವೆಯಾದ ಇದು ಮುಂಬಯಿಯ ಸೇವರಿ ಮತ್ತು ನವಿ ಮುಂಬಯಿಯ ನ್ಹಾವಾ ಶೇವಾಗಳನ್ನು ಸಂಪರ್ಕಿಸುತ್ತದೆ. ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ಸೇವರಿ ನ್ಹಾವಾ ಶೇವಾ ಸೇತುವೆ ಎಂಬ ಹೆಸರು ಆಯ್ಕೆ ಆಗಿದೆ. 21.8 ಕಿಲೋಮೀಟರ್ ಉದ್ದದ ಈ ಸೇತುವೆಯ 16.5 ಕಿಲೋಮೀಟರ್ ಅರಬ್ಬಿ ಸಮುದ್ರದ ಮೇಲೆ ಹಾದು ಹೋಗಿದೆ. ಸುಂಕ ಕೊಟ್ಟರೆ ಇದು ವಾಹನ ಇರುವವರ ದಾರಿಯನ್ನು ಮುಕ್ಕಾಲು ಗಂಟೆಯಿಂದ ಕಾಲು ಗಂಟೆಗೆ ಇಳಿಸುತ್ತದೆ. ಇದು ಭಾರತದ ಅತಿ ಉದ್ದದ ಸೇತುವೆ ಆಗಿದೆ.
ಏಪ್ ಎಂಬ ನರವಾನರರು ಮೊದಲು ಮರದ ಟೊಂಗೆಗಳನ್ನು ಬೆಸೆದು ಸೇತುವೆ ಮಾಡಿಕೊಂಡವರು. ಮಂಗಗಳು ಈಗಲೂ ಈ ವಿಧಾನದಲ್ಲಿ ಮರ ದಾಟುತ್ತವಾದರೂ ಕೊಂಬೆ ಕೂಡಿಕೆ ತಾತ್ಕಾಲಿಕ ಆಗಿರುತ್ತದೆ. ಮಾನವನ ಮೊದಲ ಸೇತುವೆ ಎಂದರೆ ತೊರೆ ತೋಡುಗಳಿಗೆ ಅಡ್ಡವಾಗಿ ಬಿದ್ದ ಮರಗಳಾಗಿವೆ. ಇದನ್ನು ಆದಿ ಮಾನವರದು ಎಂದು ಬಿಡಬೇಕಿಲ್ಲ. ತುಳು ನಾಡಿನಲ್ಲಿ ಇಂತಾ ಸೇತುವೆಗಳು ತುಂಬ ಇದ್ದವು. ಈಗಲೂ ಇರಬಹುದು. ಒಂದು ತೆಂಗಿನ ಮರ ಇಲ್ಲವೇ, ಎರಡು ಅಡಕೆ ಮರ ಅಡ್ಡ ಹಾಕಿದರೆ ಸೇತುವೆ ಸಿದ್ಧ. ಬಾರಕೂರಿನಿಂದ ಬೆಣ್ಣೆಕುದುರಿಗೆ ರಾಣಿ ಬಲ್ಲಮಾದೇವಿ 13ನೇ ಶತಮಾನದಲ್ಲಿ ಮರದ ಸೇತುವೆ ಕಟ್ಟಿಸಿದ್ದು ತಿಳಿದು ಬರುತ್ತದೆ. ಈಗಲೂ ಇರುವ ಭಾರತದ ಅತಿ ಹಳೆಯ ಸೇತುವೆ ಎಂದರೆ ಮೊಗಲರ ಕಾಲದ ಉತ್ತರ ಪ್ರದೇಶದ ಜಾನುಪುರದಲ್ಲಿನ ಸೇತುವೆಯಾಗಿದೆ.
ಜಗತ್ತಿನ ಅತಿ ಹಳೆಯ ಸೇತುವೆ ಟರ್ಕಿಯ ಮಾರ್ಡಿನ್ ಸೇತುವೆ. ರೋಮನರು ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ಕಟ್ಟಿದ ಈ ಕಮಾನು ಸೇತುವೆ ಈಗ ಬಳಕೆಯಲ್ಲಿ ಇಲ್ಲ. ಈಗಲೂ ಬಳಕೆಯಲ್ಲಿ ಇರುವ ಅತಿ ಹಳೆಯ ಕಮಾನು ಸೇತುವೆ ಗ್ರೀಸ್‍ನ ಪೆಲೋಪೆನಿಸ್ ಪ್ರದೇಶದ ಅರಡಿಕೊ ಸೇತುವೆ. ಕ್ರಿಸ್ತ ಪೂರ್ವ 1300 ರ ಇದು 72 ಅಡಿ ಉದ್ದ, 18.4 ಅಡಿ ಅಗಲವಿದೆ. ಮಿಲಿಟರಿ ಬಳಕೆಯ ಮೈಸಿನೇಯನ್ ಕಿರು ಸೇತುವೆಗಳು ಕೆಲವು ಈ ಸುತ್ತ ಇವೆ. ಜಗತ್ತಿನಲ್ಲಿ ಮೊದಲು ಸೇತುವೆ ಕಟ್ಟತೊಡಗಿದವರು ಬ್ಯಾಬಿಲೋನಿಯನರು. ಕ್ರಿಸ್ತ ಪೂರ್ವ 4000ದಲ್ಲೇ ಅವರು ಸೇತುವೆ ನಿರ್ಮಿಸಿದ್ದಾರೆ. ಜಗತ್ತಿನ ಅತಿ ಎತ್ತರದ ಸೇತುವೆ ಫ್ರಾನ್ಸ್‍ನಲ್ಲಿ ಇದೆ. ಅದು ನದಿಯ ನೀರಿನ ಮಟ್ಟದಿಂದ 1,125 ಅಡಿ ಎತ್ತರದಲ್ಲಿರುವ ಮಿಲಾವ್ ವಯಾಡಕ್ಟ್.
ತೂಗು ಸೇತುವೆಗಳು ಈಗ ಪೇರೂರು ಎಂದು ತುಳುನಾಡಿನ ಸಾಕಷ್ಟು ಕಡೆ ಇವೆ. ಟರ್ಕಿಯ ಕಾನ್ಕ್ಲೆ, ಜಪಾನಿನ ಕೈಕ್ಯೋ ಒಂದೂವರೆ ಕಿಲೋಮೀಟರ್ ಎಂಬಷ್ಟು ಉದ್ದ ಇರುವ ಅತಿ ಉದ್ದದ ತೂಗು ಸೇತುವೆಗಳಾಗಿವೆ. ಒಂದು ಕಿಲೋಮೀಟರ್‍ಗಿಂತ ಉದ್ದದ ಮೂರು ತೂಗು ಸೇತುವೆಗಳು ಚೀನಾದ ಯಾಂಗ್‍ಟ್ಶಿ, ನಾನ್ಶಾ, ಕ್ಸಿವೊಮ್‍ಗಳಲ್ಲಿ ಇವೆ. ನಾರ್ವೆಯಿಂದ ಚೀನಾದವರೆಗೆ ಹಲವು ತೇಲು ಸೇತುವೆಗಳು ಸಹ ಈಗ ಇವೆ. ನೀರಿನ ಮೇಲೆ ತೇಲುವ ಈ ಸೇತುವೆಗಳ ಮೇಲೆ ನೀರು ಬರುವುದು, ಕಂಬಳದ ಕೋಣಗಳಂತೆ ವಾಹನಗಳು ಓಡುವುದು ಗಮ್ಮತ್ತು, ಸಾಹಸಮಯ, ಅಪಾಯಕಾರಿ ಸಹ ಆಗಿದೆ. ಆಕಾಶ ದಾರಿ ಮಾದರಿಯ ಸ್ಕೈವೇ ಸೇತುವೆಗಳು ಈಗ ಎಲ್ಲ ದೊಡ್ಡ ನಗರಗಳಲ್ಲಿಯೂ ಕಂಡು ಬರುತ್ತವೆ.
ಜಗತ್ತಿನ ಅತಿ ಉದ್ದದ ಸೆತುವೆ ಚೀನಾದ ದನ್ಯಾಂಗ್ ಕುನ್ಶಾನ್ ಗ್ರ್ಯಾಂಡ್ ಸೇತುವೆ. ಇದು 164 ಕಿಲೋಮೀಟರ್ ಉದ್ದವಿದೆ. ತೈವಾನಿನ ಚಾಂಗ್ವಾ ಕಾಹ್ಸಿಯಾಂಗ್ ವಯಾಡಕ್ಟ್ 157 ಕಿಲೋಮೀಟರ್ ಉದ್ದದ ಸೇತುವೆಯಾಗಿದೆ. ಕ್ವಿಟಾ ಮಯ್ಟಾ ವಯಾಡಕ್ಟ್ 71.10 ಕಿಲೋಮೀಟರ್ ಉದ್ದವಿದ್ದು ಜಪಾನಿನಲ್ಲಿ ಇದೆ. ಚೀನಾದ ಟಿಯಾಂಜಿನ್, ಕ್ವಾಂಡ್ಲೆ ಗ್ರ್ಯಾಂಡ್, ವ್ಹೀ ಗ್ರ್ಯಾಂಡ್ ಸೇತುವೆಗಳು ಕ್ರಮವಾಗಿ 70.64, 65.79, 49.54 ಕಿಲೋಮೀಟರ್ ಉದ್ದ ಹೊಂದಿವೆ. ತಾಯ್‍ಲ್ಯಾಂಡಿನ ಬಾಂಗ್‍ನಾ ಎಕ್ಸ್‍ಪ್ರೆಸ್ ವೇ 54 ಕಿಲೋಮೀಟರ್ ಉದ್ದ ಇದೆ. ಬೀಜಿಂಗ್ ಗ್ರ್ಯಾಂಡ್, ಪೆÇೀರ್ಚುಗಲ್‍ನ ವಾಸ್ಕೋಡಾ ಗಾಮಾ, ಮನಿಲಾ ಸ್ಕೈವೇ, ವೂಹಾನ್ ಮೆಟ್ರೋ ಆಕಾಶ ಮಾರ್ಗ, ಲೇಕ್ ಪಾಂಟ್ ಗಗನ ದಾರಿ ಎಂದು ಹಲವು ಉದ್ದದ ಸೇತುವೆಗಳು ಜಗತ್ತಿನಲ್ಲಿ ಇವೆ.
ಯಾವ ಸೇತುವೆ ಬೇಕಾದರೂ ಕಟ್ಟಬಹುದು. ಆದರೆ ಧರ್ಮ ಧರ್ಮಗಳ ನಡುವೆ, ಮಾನವ ಜನಾಂಗಗಳ ನಡುವೆ, ಜಾತಿಗಳ ನಡುವೆ, ಬಣ್ಣ ತಾರತಮ್ಯಗಳ ನಡುವೆ, ಹೃದಯಗಳ ನಡುವೆ ಸೇತುವೆ ಕಟ್ಟುವುದು ಎಂದೂ ಮುಗಿಯದ ಕಾಮಗಾರಿ ಎನಿಸಿದೆ.
✍ ಬರಹ: ಪೇರೂರು ಜಾರು