ರಾಜ್ಯೋತ್ಸವದ ತಿಂಗಳಿನ ಕನ್ನಡ ಕೂಗುಗಳು

ನವೆಂಬರ್ ತಿಂಗಳನ್ನು ರಾಜ್ಯೋತ್ಸವ ಆಚರಣೆಯ ತಿಂಗಳು ಎಂದೇ ತಿಳಿಯಲಾಗಿದೆ. ಹುಟ್ಟಿದ ದಿನ ನವೆಂಬರ್ ಒಂದು ಆದರೂ ಇಡೀ ತಿಂಗಳು ಏನು ಆಚರಣೆ ಎಂಬುದನ್ನೆಲ್ಲ ಕೇಳಬಹುದು. ಉತ್ತರಿಸುವವರು ಯಾರೂ ಇರುವುದಿಲ್ಲ. ನಿಂದನೆ ಬೇಕಾದರೆ ಸಿಗಬಹುದು. ಆದರೆ ಇಲ್ಲಿ ಕನ್ನಡ ಹೇಗಿದೆ?

ನವೆಂಬರ್ ಒಂದು ಕನ್ನಡ ನಾಡು ಹುಟ್ಟಿದ ದಿನ ಸಂತೋಷ. ಆದರೆ ಅಂದು ತುಳುನಾಡು, ಕೊಡವನಾಡು ಸತ್ತ ದಿನ ಎನ್ನುವುದೂ ಅಷ್ಟೇ ಸತ್ಯ. ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಚೆಪ್ಪುಡಿರ ಮುತ್ತಣ ಪೂಣಚ್ಚ ಅದರ ಮುಖ್ಯಮಂತ್ರಿ ಆಗಿದ್ದರು.ಅವರು ಮಾತ್ರ ಕೊಡವರಲ್ಲಿ ಸಂಸದರಾದ, ಕೇಂದ್ರ ಮಂತ್ರಿ ಆದ ಒಬ್ಬರೇ ಒಬ್ಬರು. ಈಗ ಆ ಅವಕಾಶ ಇಲ್ಲ. ಕೊಡಗಿಗೆ ಪ್ರತ್ಯೇಕ ಸಂಸತ್ ಸ್ಥಾನ ಇಲ್ಲ. ರಾಜ್ಯ ಸಭೆಗೆ ಅವಕಾಶ ಇದೆ.

ಭಾರತದಲ್ಲಿ ಮೊದಲ ಭಾಷಾವಾರು ರಾಜ್ಯ ಹುಟ್ಟಿದ್ದು ಆಂಧ್ರಪ್ರದೇಶ. 1952ರ ನವೆಂಬರ್‍ನಲ್ಲಿ ಆಂಧ್ರಕ್ಕಾಗಿ ಉಪವಾಸ ಕುಳಿತ ಗಾಂಧೀವಾದಿ ಸ್ವಾತಂತ್ರ್ಯ ಹೋರಾಟಗಾರ ಪೊಟ್ಟಿ ಶ್ರೀರಾಮುಲು ಡಿಸೆಂಬರ್‍ನಲ್ಲಿ ಸಾಯುತ್ತಾರೆ. ಆಗ ಪ್ರಧಾನಿ ನೆಹರು ಅನಿವಾರ್ಯವಾಗಿ ಭಾಷಾವಾರು ಪ್ರಾಂತ್ಯ ರಚನೆಗೆ ಒಪ್ಪುತ್ತಾರೆ. ಮೊದಲ ರಾಜ್ಯವಾಗಿ 1953ರಲ್ಲಿ ಆಂಧ್ರಪ್ರದೇಶ ಹುಟ್ಟಿತು.

ಆಂಧ್ರಪ್ರದೇಶ ಬೇರಾದ ಮದರಾಸು ಪ್ರಾಂತ್ಯದಲ್ಲಿ ತುಳು ಪ್ರದೇಶಕ್ಕೆ ಅಲ್ಪಸಂಖ್ಯಾತ ಭಾಷಾ ವಲಯದ ಹಲವು ವಿಶೇಷ ಅನುಕೂಲಗಳು ಇದ್ದವು. ಈಗ ಇಲ್ಲ.ಪೈ ಸಂಸ್ಥೆಗಳು ಹುಟ್ಟಿದ್ದೆ ಈ ಭಾಷಾ ಅಲ್ಪಸಂಖ್ಯಾತ ನೆರವಿನಿಂದ. ಮುಖ್ಯವಾಗಿ ತುಳು ಇಲ್ಲಿನ ಎಲ್ಲರಿಗೂ ಸಾಮಾನ್ಯ ಭಾಷೆಯಾಗಿದ್ದುದು ಕನ್ನಡ ಜಾರಿಯಿಂದ ಮಾರುಕಟ್ಟೆಯ ಭಾಷಾ ಸ್ಥಾನ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ.

ಭಾಷೆಗಳ ಹೇರಿಕೆಯಲ್ಲಿ ಅತಿಯಾದುದು ಹಿಂದಿ. 500 ವರುಷ ಹಿಂದಿನ ಹಿಂದಿ ಪರಪುಟ್ಟ. ಬಿಜಿಲಿ, ಚಿಂಗಾರ ಮೊದಲಾದ ತುಳು ಶಬ್ದಗಳನ್ನೂ ಹೊಂದಿದೆ. ಇಂಗ್ಲಿಷ್ ಭಾಷೆಯು ಕಂಪ್ಯೂಟರ್ ಜಾಗತಿಕ ಮಹತ್ವದಿಂದಾಗಿ ಅನಿವಾರ್ಯ ಎಂಬಂತಾಗಿದೆ ಇಲ್ಲಿ.

ಬೆಂಗಳೂರಿನ ಅಲಸೂರು ಎಂದರೆ ನೀರಿನ ಹೆಜ್ಜೆಯ ಸೂರು ಎಂಬ ಅಚ್ಚ ಕನ್ನಡ ನುಡಿಯನ್ನು ಹಲಸೂರು ಎಂದೂ, ಆನೆಪಾಳ್ಯವನ್ನು ಗಜನಗರ ಎಂದೂ ಬದಲಿಸುವ ಕನ್ನಡಿಗರಿಗೆ ಕನ್ನಡ ನಾಡಿನ ಬಗೆಗೆ ದಿಟ ಜ್ಞಾನ ಇಲ್ಲ. ಪೇರೂರು ಎಂಬ ಹಳೆಯ ಊರು ಎಂಬುದನ್ನು ಹೇರೂರು ಎಂದೂ, ಬಗ್ಗೆಡಿಕಲ್ ಸಹಿತ ಹಲವು ಮಣ್ಣಿನ ಮೂಲದ ಹೆಸರುಗಳನ್ನು ನಾನಾ ನಗರವಾಗಿಸುವ ಜನರಿಗೆ ನೆಲದ ಬನಿ ತಿಳಿವರಿವು ಇದೆಯೆ?

ನಾಡಹಬ್ಬವನ್ನು ಪರಭಾಷೆಯ ರಾಜ್ಯೋತ್ಸವ ಶಬ್ದದಿಂದ, ಒಂದು ಧಾರ್ಮಿಕ ವಿಧಿಯನ್ನು ನಾಡಹಬ್ಬವೆಂದೂ ಕರೆಯುವವರಿಗೆ ಎಲ್ಲಿಯ ಚೆಲುವ ಕನ್ನಡ ನಾಡು?ಕಾವೇರಿಯಿಂದ ಗೋದಾವರಿವರೆಗೆ ಎಂದ ನೃಪತುಂಗ ಅದರೊಳಗೆ ಅಚ್ಚ ಕನ್ನಡ ಪ್ರದೇಶವನ್ನೂ ಹೇಳಿದ್ದಾನಲ್ಲ? ಅರ್ಧ ಮಾತ್ರ ಹೇಳುವುದೇಕೆ? ಎಲ್ಲ ಹೇಳಿದರೆ ಉಸಿರು ಬಿಗಿಯುತ್ತದೆ.ಕನ್ನಡಿಗರ ಉತ್ಸಾಹ ಸರಿ. ಆದರೆ ನಿಜಗನ್ನಡ ಅರಿಯದಿದ್ದರೆ ಉಳಿಯುವುದು ಕನ್ನಡದ ಹೆಸರಿನಲ್ಲಿ ಬೇರೆಯವರ ಬಸಿರು ಅಷ್ಟೆ. ಇಲ್ಲಿ ಏಳುವ ಇನ್ನೊಂದು ಪ್ರಶ್ನೆ ಕಾವೇರಿ ಆಚಿನ ಕನ್ನಾಡು ಯಾರದು? ಉತ್ತರ ಕಷ್ಟ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.