ಕಾಲುಸಂಕದಿಂದ ಬಿದ್ದ ಬಾಲಕಿಯ ಮೃತದೇಹ ಪತ್ತೆ
ಕುಂದಾಪುರ: ಕಳೆದ ಎರಡು ದಿನಗಳ ಹಿಂದೆ ಶಾಲೆಯಿಂದ ಮನೆಗೆ ವಾಪಾಸಾಗುವ ವೇಳೆ ಕಾಲುಸಂಕ ದಾಟುತ್ತಿದ್ದ ಸಂದರ್ಭ ಆಯತಪ್ಪಿ ಹರಿಯುವ ನದಿಗೆ ಬಿದ್ದು ನೀರುಪಾಲಾದ ಕಾಲ್ತೋಡು ಗ್ರಾಮದ ಮಕ್ಕಿಮನೆ ನಿವಾಸಿ ಪ್ರದೀಪ್ ಪೂಜಾರಿಯವರ ಪುತ್ರಿ, 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ (7) ಮೃತದೇಹ ಕೊನೆಗೂ 48 ಗಂಟೆಯ ಸತತ ಕಾರ್ಯಾಚರಣೆಯ ಬಳಿಕ ಪತ್ತೆಯಾಗಿದೆ.
ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು ನಿರಂತರವಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಕೊನೆಗೂ ಬುಧವಾರ ಸಂಜೆ ಆಕೆಯ ಮೃತದೇಹ ಕಾಲುಸಂಕದ ಸಮೀಪದ ಸುಮಾರು 400 ಮೀಟರ್ ದೂರದಲ್ಲಿ ಪತ್ತೆಯಾಗಿದೆ.
ಬುಧವಾರವೂ ಬೆಳಿಗ್ಗೆಯಿಂದ ಅಗ್ನಿಶಾಮಕ ದಳ ಸಿಬ್ಬಂದಿಗಳು, ಈಜುಪಟುಗಳಾದ ಮೀನುಗಾರ ನರೇಶ್ ಕೊಡೇರಿಯವರ ಮುಂದಾಳತ್ವದ 22 ಜನರ ತಂಡ, ಸಾರ್ವಜನಿಕರೂ ಸೇರಿ ನೂರಕ್ಕೂ ಅಧಿಕ ಮಂದಿ ಶೋಧ ಕಾರ್ಯ ಮುಂದುವರೆಸಿದ್ದರು. ಕಾರ್ಯಾಚರಣೆಗಾಗಿ ಎರಡು ಮೀನುಗಾರಿಕಾ ದೋಣಿಗಳನ್ನು ತರಿಸಿಕೊಳ್ಳಲಾಗಿತ್ತು. ಮೀನುಗಾರರು ಹಾಗೂ ಈಜು ಪಟುಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳದಲ್ಲಿದ್ದ ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ ನೀಡಿದರು.
ಬುಧವಾರ ಹನ್ನೊಂದು ಗಂಟೆಯ ಬಳಿಕ ಸ್ಥಳಕ್ಕಾಗಮಿಸಿದ ಕಾಳಾವರದ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ವಿಪತ್ತು ನಿರ್ವಹಣಾ ಘಟಕದ ತಂಡವು ಸತತ ಏಳು ಗಂಟೆಗಳ ಕಾಲ ಕಾರ್ಯಾರಣೆಯಲ್ಲಿ ನಡೆಸಿದರು. ಕೊನೆಗೆ ಬಾಲಕಿ ಬಿದ್ದ ಸ್ಥಳದಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆಯಲ್ಲಿ ಕಾಲುಸಂಕದಿಂದ 400 ಮೀಟರ್ ದೂರದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಬುಧವಾರ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಉಡುಪಿ ಎಸ್ಪಿ ವಿಷ್ಣುವರ್ಧನ್ ಎನ್, ತಹಸೀಲ್ದಾರ್ ಕಿರಣ್ ಗೌರಯ್ಯ, ಡಿವೈಎಸ್‍ಪಿ ಶ್ರೀಕಾಂತ್, ಸರ್ಕಲ್ ಇನ್ಸ್‍ಪೆಕ್ಟರ್ ಸಂತೋಷ್ ಕಾಯ್ಕಿಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.