ಕಡಿಮೆ ಅಂಕಕ್ಕೆ ಮನನೊಂದು ಸೇತುವೆಯಿಂದ ನದಿಗೆ ಜಿಗಿದ ವಿದ್ಯಾರ್ಥಿಯ ಮೃತದೇಹ ಪತ್ತೆ

ಕುಂದಾಪುರ : ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಕಾರಣಕ್ಕೆ ಮನನೊಂದು ಸೇತುವೆ ಮೇಲಿನಿಂದ ತುಂಬಿ ಹರಿಯುತ್ತಿರುವ ನದಿಗೆ ಹಾರಿಕೊಂಡ ನಗರದ ವಡೇರಹೋಬಳಿ ಜೆಎಲ್‍ಬಿ ರಸ್ತೆಯ ನಿವಾಸಿ ಸಾಯೀಶ್ ಶೆಟ್ಟಿ ಮೃತದೇಹ ಶುಕ್ರವಾರ ಬೆಳಿಗ್ಗೆ ನಾವುಂದದ ಸಮುದ್ರತೀರದಲ್ಲಿ ಪತ್ತೆಯಾಗಿದೆ. ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಸಾಯೀಶ್ ಶೆಟ್ಟಿ ಸೈಕಲ್‍ನಲ್ಲಿ ಹೇರಿಕುದ್ರು ಸೇತುವೆಯ ಮೇಲೆ ಬಂದು, ಬಳಿಕ ಸೈಕಲ್ ಹಾಗೂ ಮೊಬೈಲ್ ಅನ್ನು ಮೇಲೆ ಇಟ್ಟು ನದಿಗೆ ಹಾರಿದ್ದರು.

ಶಿವಮೊಗ್ಗದ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸದ ವೇಳೆ ಕಲಿಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದ ಸಾಯೀಶ್ ಶೆಟ್ಟಿ, ಈ ಬಾರಿಯ ನೀಟ್ ಪರೀಕ್ಷೆ ಬರೆದಿದ್ದರು. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಅವರು, ಗುರುವಾರ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಬೆಳಿಗ್ಗೆ ಸೈಬರ್ ಕೇಂದ್ರಕ್ಕೆ ತೆರಳಿ ಫಲಿತಾಂಶ ನೋಡಿದ್ದರು. ಪರೀಕ್ಷೆಯಲ್ಲಿ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎನ್ನುವ ಕಾರಣಕ್ಕಾಗಿ ಅವರು ನದಿಗೆ ಹಾರಿರಬಹುದು ಎನ್ನುವ ಶಂಕೆ ಇದೆ.
ಸೇತುವೆ ಮೇಲಿಂದ ಯುವಕನೊರ್ವ ನದಿಗೆ ಹಾರುತ್ತಿರುವುದನ್ನು ಗಮನಿಸಿದ ವಾಹನ ಸವಾರರು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಪೆÇಲೀಸರು, ಮುಳುಗು ತಜ್ಞರು ಹಾಗೂ ಸ್ಥಳೀಯರ ಸಹಾಯದಿಂದ ನಾಪತ್ತೆಯಾಗಿರುವ ವಿದ್ಯಾರ್ಥಿಯ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಬುಧವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದ ನದಿ ನೀರಿನ ಹರಿವು ಹೆಚ್ಚಿದ್ದು, ನೀರಿನ ಮಟ್ಟ ಜಾಸ್ತಿ ಇರುವುದರಿಂದ ಹಾಗೂ ಮಳೆ ಸುರಿಯುತ್ತಿರುವುದರಿಂದ ಶೋಧ ಕಾರ್ಯಾಚರಣೆಗೆ ತೊಡಕಾಗಿದ್ದು, ಶುಕ್ರವಾರ ಬೆಳಿಗ್ಗೆಯಿಂದ ಶೋಧ ಕಾರ್ಯಾಚರಣೆ ಮತ್ತೆ ಮುಂದುವರೆಸಲಾಗಿತ್ತು. ಕೊನೆಗೂ ನಾವುಂದದಲ್ಲಿ ಮೃತ ದೇಹ ಪತ್ತೆಯಾಗಿದೆ.