ನೆಯ್ಪಿಲಿಯ ನರಳಾಟ

ಭಾರತದಲ್ಲಿ ಚಿರತೆಗಳ ಸಂಖ್ಯೆ ವಾರ್ಷಿಕ 1.08 ಶೇಕಡಾ ಏರಿಕೆ ಕಾಣುತ್ತಿದೆ. ಸದ್ಯ ಭಾರತದಲ್ಲಿ 13,874 ಚಿರತೆಗಳು ಇರುವುದಾಗಿ ಒಕ್ಕೂಟ ಸರಕಾರದ ಪರಿಸರ ಮಂತ್ರಿ ಭೂಪೇಂದ್ರ ಯಾದವ್ ಬಿಡುಗಡೆ ಮಾಡಿರುವ ಚಿರತೆ ಸ್ಥಿತಿಗತಿ ವರದಿಯಲ್ಲಿ ಇದೆ.

ಈ ಚಿರತೆ ಎನ್ನುವುದು ಲೆಪರ್ಡ್. ಇದನ್ನು ತುಳುವಿನಲ್ಲಿ ಚಿಟ್ಟೆ ಪಿಲಿ, ನೆಯ್ಪಿಲಿ ಎಂದೆಲ್ಲ ಕರೆಯುತ್ತಾರೆ. ಇದಕ್ಕೆ ನೆಯ್ಪಿಲಿ ಹೆಸರು ಬಂದುದು ಅದರ ಬೇಟೆಯಿಂದ. ಲೆಪರ್ಡ್ ಚಿರತೆಯು ನಾಯಿ ಹಿಡಿಯುವುದರಲ್ಲಿ ಎಕ್ಸ್‍ಪರ್ಟ್. ತುಳುವರು ಅದನ್ನು ನಾಯಿಪಿಲಿ ಎಂದು ಕರೆದರು. ಅದೇ ನೆಯ್ಪಿಲಿ ಆಗಿದೆ. ಕನ್ನಡದಲ್ಲಿ ಇದನ್ನು ಕೆಲವೆಡೆ ಚಿಟ್ಟೆ ಹುಲಿ ಎನ್ನುತ್ತಾರೆ. ಚೀತಾ ಎನ್ನುವ ಚಿರತೆ ಭಾರತದಲ್ಲಿ 70 ವರುಷ ಹಿಂದೆಯೇ ಅಳಿದು ಹೋಗಿದೆ. ಸದ್ಯ ತೆಂಕಣ ಆಫ್ರಿಕಾ ಹಾಗೂ ನಮೀಬಿಯಾದಿಂದ ಚೀತಾ ತಂದು ಮಧ್ಯ ಪ್ರದೇಶದ ಕುನೋ ರಕ್ಷಿತಾರಣ್ಯದಲ್ಲಿ ಬಿಡಲಾಗಿದೆ. ಹಲವು ಅಳಿದರೂ ಒಂದಷ್ಟು ಉಳಿದಿವೆ.

ಭಾರತದಲ್ಲಿ ಅತಿ ಹೆಚ್ಚು ಚಿರತೆಗಳು ಇಲ್ಲವೇ ಚಿಟ್ಟೆ ಹುಲಿಗಳು ಮಧ್ಯ ಪ್ರದೇಶದಲ್ಲಿ ಇವೆ. ಅಲ್ಲಿ 2018ರಲ್ಲಿ ಇದ್ದ 3,401 ಚಿರತೆಗಳ ಸಂಖ್ಯೆಯು 2022ರಲ್ಲಿ 3,907ಕ್ಕೆ ಏರಿಕೆಯಾಗಿದೆ. ಎರಡನೆಯ ಸ್ಥಾನದಲ್ಲಿದೆ ಮಹಾರಾಷ್ಟ್ರ. 2018ರಲ್ಲಿ 1,690 ಇದ್ದ ಚಿರತೆಗಳ ಒಟ್ಟು ಸಂಖ್ಯೆಯು 2022ರಲ್ಲಿ 1,985ಕ್ಕೆ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ 2018ರಲ್ಲಿ 1,783 ಇದ್ದ ಚಿಟ್ಟೆ ಹುಲಿಗಳ ಸಂಖ್ಯೆಯು 2022ರಲ್ಲಿ 1879ಕ್ಕೆ ಹೆಚ್ಚಿದೆ. ಸದ್ಯದ ಪ್ರಮಾಣ ರೀತ್ಯಾ ಚಿಟ್ಟೆ ಹುಲಿಗಳ ಏರಿಕೆ ಪ್ರಮಾಣವು ತಮಿಳುನಾಡಿನಲ್ಲಿ ವಾರ್ಷಿಕವಾಗಿ ಅಧಿಕ. 2018ರಲ್ಲಿ 865 ಇದ್ದ ಅಲ್ಲಿನ ಚಿರತೆಗಳ ಸಂಖ್ಯೆ 1,070ಕ್ಕೆ ಅಧಿಕಗೊಂಡಿದೆ. ಭಾರತದ ಚಿಟ್ಟೆ ಹುಲಿಗಳ ಒಟ್ಟು ಸಂಖ್ಯೆ 2018ರಲ್ಲಿ12,852 ಇತ್ತು. 2022ರಲ್ಲಿ ಆ ಸಂಖ್ಯೆ ಆಗಿದೆ 13,874.

ಚಿರತೆ ಅತಿ ವೇಗದ ಪ್ರಾಣಿ ಎಂದು ನಾವೆಲ್ಲರೂ ಪಾಠದಲ್ಲಿ ಓದಿದ್ದೇವೆ. ಮಾಧ್ಯಮಗಳಲ್ಲೂ ಕೇಳಿದ್ದೇವೆ. ಆದರೆ ಇದು ನಮ್ಮ ಚಿಟ್ಟೆ ಹುಲಿ ಅಲ್ಲ. ಅದು ಸದ್ಯ ಆಫ್ರಿಕಾ ಖಂಡಕ್ಕೆ ಸೀಮಿತ ಆಗಿರುವ ಚೀತಾ. ಅದು ಗಂಟೆಗೆ 120 ಕಿಲೋಮೀಟರ್ ವೇಗವಾಗಿ ಓಡಿ ಬೇಟೆಯಾಡಬಲ್ಲುದು. ಆದರೆ ಆ ವೇಗದಿಂದಾಗಿ ಅದು ಬೇಗನೆ ದಣಿಯುತ್ತದೆ ಮತ್ತು ಬೇಟೆಯಾಡಲು ಹೆಚ್ಚು ಜಾಗ ಬಯಸುತ್ತದೆ. ಹಾಗಾಗಿ ಅದು ಹುಲ್ಲುಗಾವಲು, ಕುರುಚಲು ಕಾಡು ವಾಸಿ. ಚಿಟ್ಟೆ ಹುಲಿ ಇಂತಾ ಪ್ರದೇಶವಲ್ಲದೆ ಕಾಡುಗಳಲ್ಲಿಯೂ ಇರುತ್ತದೆ.

ಭಾರತದ ಎಲ್ಲ ಕಡೆ ಚಿಟ್ಟೆ ಹುಲಿಗಳ ಸಂಖ್ಯೆಯು ಸ್ಥಿರ ಏರಿಕೆಯನ್ನು ಕಂಡಿದೆ. ಆದರೆ ಸಿಂಧು ಗಂಗಾ ಬಯಲು ಮತ್ತು ಇಲ್ಲಿನ ಶಿವಾಲಿಕ್ ಪರ್ವತ ತಪ್ಪಲಿನಲ್ಲಿ ಚಿರತೆಗಳ ಸಂಖ್ಯೆ ಇಳಿವಣಿಗೆ ಕಂಡಿದೆ. ಈ ಪ್ರದೇಶದಲ್ಲಿ ಲೆಪರ್ಡ್‍ಗಳ ಪ್ರಮಾಣವು 3.4 ಶೇಕಡಾ ಇಳಿಕೆ ಇದೆ. 2018ರಲ್ಲಿ ಈ ಪ್ರದೇಶದಲ್ಲಿ ಇದ್ದ 1,256 ಚಿರತೆಗಳ ಸಂಖ್ಯೆಯ 2022ಕ್ಕೆ 1,109ಕ್ಕೆ ಇಳಿಕೆ ಕಂಡಿದೆ. ದೇಶದ ಮಧ್ಯ ಭಾಗದಲ್ಲಿ ಚಿರತೆಗಳ ಸಂಖ್ಯೆ ಬಹುತೇಕ ಸ್ಥಿರವಾಗಿದೆ. 2018ರಲ್ಲಿ 8,071 ಇದ್ದುದು 2022ರಲ್ಲಿ 8,820ಕ್ಕೆ ಏರಿಕೆಯಾಗಿದೆ. ಇದು ಏರಿಕೆ ಪ್ರಮಾಣದಲ್ಲಿ ಕಡಿಮೆಯದಾಗಿದೆ. ಚಿಟ್ಟೆ ಹುಲಿಗಳು ಹೆಚ್ಚು ದಟ್ಟಣೆಯಲ್ಲಿರುವ ಪ್ರದೇಶ ಮಧ್ಯ ಪ್ರದೇಶದ ಪನ್ನಾ ಮತ್ತು ಸಾತ್ಪುರ ಹುಲಿ ರಕ್ಷಿತಾರಣ್ಯ ಮತ್ತು ಆಂಧ್ರ ಪ್ರದೇಶದ ನಾಗಾರ್ಜುನ ಕೊಂಡ.

ಚಿರತೆ ಇಲ್ಲವೇ ಲೆಪರ್ಡ್‍ಗಳಲ್ಲಿ ಹಾಗೂ ಚೀತಾ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಚಿರತೆಯ ಮುಂಗಾಲು ಎತ್ತರವಿದ್ದರೆ, ಚೀತಾದ ಹಿಂಗಾಲು ಎತ್ತರ ಇರುತ್ತವೆ. ಮೊದಲ ನೋಟಕ್ಕೆ ನೋಡಲು ಒಂದೇ ರೀತಿ ಕಾಣಿಸುತ್ತವೆ. ಆದರೆ ಚೀತಾದ ಚಿಟ್ಟೆ ಮೊಟ್ಟೆ ಆಕಾರದ್ದು ಹಾಗೂ ಚಿರತೆಯದು ಗುಲಾಬಿ ಹೂವಿನ ಆಕಾರದ್ದು. ಅಲ್ಲದೆ ಚೀತಾ ಕಣ್ಣಿನಿಂದ ನೀರು ಇಳಿಯುವಂತೆ ವಿಶೇಷ ಗುರುತು ಹೊಂದಿದೆ. ಚೀತಾ 70 ಕಿಲೋದಷ್ಟು ತೂಗಿದರೆ ಚಿರತೆ 100 ಕಿಲೋದಷ್ಟು ತೂಗುತ್ತದೆ. ಚೀತಾವು ಚಿರತೆಗಿಂತ ಎತ್ತರವಿದ್ದರೂ ತೀರಾ ಸಪೂರ ದೇಹ ಹೊಂದಿದೆ.

ಕರ್ನಾಟಕದಲ್ಲಿ ಈಗ ಚಿರತೆಗಳ ದಾಳಿ ವರದಿಯಾಗುತ್ತಲೆ ಇರುತ್ತದೆ. ಜನಸಂಖ್ಯೆ ಏರಿಕೆಯೊಡನೆ ಹೋಲಿಸಿದರೆ ಚಿಟ್ಟೆ ಹುಲಿಗಳ ಸಂಖ್ಯೆ ಆ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಚಿರತೆಗಳ ಕುರುಚಲು ಕಾಡುಗಳು ಇಂದು ಮಾನವ ವಸಾಹತು ಆಗಿರುವುದರಿಂದ ಚಿರತೆಗಳು ಊರು ಆಹಾರವನ್ನೇ ಹೆಚ್ಚು ನಂಬುವ ಸ್ಥಿತಿ ಬಂದಿದೆ. ಬೇಟೆಯನ್ನು ಅರ್ಧ ತಿಂದು, ಉಳಿದರ್ಧ ಮರದಲ್ಲಿ ನೇತು ಬಿಟ್ಟು ಆಮೇಲೆ ತಿನ್ನುವುದು ಚಿಟ್ಟೆ ಹುಲಿಗಳ ಮರ್ಜಿ. ಮಾನವರ ಆಪಾದನೆ ಏನು ಗೊತ್ತೆ? ಕೃಷಿಗೆ ಕಾಡಿನ ಸೊಪ್ಪು, ಒಣ ಎಲೆ ಮತ್ತು ಮಾಡಿಗೆ ಮುಳಿ ಹುಲ್ಲು ಇತ್ಯಾದಿ ಬಳಸದಿರುವುದರಿಂದ ಚಿರತೆಗಳು ಹೆಚ್ಚಾಗಿವೆಯಂತೆ.

Related Posts

Leave a Reply

Your email address will not be published.