ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಅದನ್ನು ಉಳಿಸಲು ಹೋರಾಟ ಮಾಡಬೇಕಿದೆ : ಮಲ್ಲಿಕಾರ್ಜುನ ಖರ್ಗೆ
ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿ ಸಿಲುಕಿದೆ. ಇದನ್ನು ಉಳಿಸಲು ಎಲ್ಲರೂ ಹೋರಾಟ ಮಾಡಬೇಕಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಟಿಎಂಎ ಪೈ ಹಾಲ್‍ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.ಈಗ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಸಂವಿಧಾನ, ಪ್ರಜಾಪ್ರಭುತ್ವದ ಪ್ರಕಾರ ನಡೆದುಕೊಳ್ಳುತ್ತಿಲ್ಲ. ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಇನ್ನೊಂದು ಕಾನೂನು ಎಂಬಂತೆ ನಡೆದುಕೊಳ್ಳುತ್ತಿದೆ. ಇಂತಹ ತಾರತಮ್ಯ ಹೋಗಲಾಡಿಸಲು ನಾವು ಹೋರಾಟ ಮಾಡಬೇಕಾಗಿದೆ ಎಂದರು.
ನನಗೆ ಟಿಕೆಟ್ ಸಿಗಲಿಲ್ಲ, ಕುರ್ಚಿ ಸಿಗಲಿಲ್ಲ, ಅವರು ನನ್ನಲ್ಲಿ ಮಾತನಾಡಲಿಲ್ಲ. ಇವರು ಮಾತನಾಡಲಿಲ್ಲ ಎಂದು ಸಣ್ಣಪುಟ್ಟ ವಿಚಾರಗಳಿಗೆ ಬೇಸರ ಮಾಡಿಕೊಳ್ಳುವುದು ಬೇಡ. ಸಂವಿಧಾನ ಉಳಿದರೆ ಕುರ್ಚಿ ಸಿಗುತ್ತದೆ, ಮಾತನಾಡಲು ಶಕ್ತಿ ಬರುತ್ತದೆ ಹಾಗೆಯೇ ಮಾಧ್ಯಮ ರಂಗ ಉಳಿಯುತ್ತದೆ. ಸಂವಿಧಾನ ಉಳಿಯದಿದ್ದರೆ ಯಾವುದು ಉಳಿಯುವುದಿಲ್ಲ ಎಂದು ಕಿವಿಮಾತು ನುಡಿದರು.
ಕಾಂಗ್ರೆಸ್ ಪಕ್ಷದ ಧುರೀಣರಾದ ಬಿ.ಇಬ್ರಾಹಿಂ, ಅಭಯ ಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಡಾ.ಮಂಜುನಾಥ ಭಂಡಾರಿ, ಮುಹಮ್ಮದ್ ಬಡಗನ್ನೂರು, ಶಾಲೆಟ್ ಪಿಂಟೊ, ನವೀನ್ ಡಿ ಸೋಜ, ಪದ್ಮರಾಜ್ ಆರ್, ಮಮತಾ ಗಟ್ಟಿ, ನವೀನ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.