ಮುದ್ದಣ ಸಾಹಿತ್ಯೋತ್ಸವ-2024: ಪ್ರಶಸ್ತಿ ಪ್ರದಾನ
ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವತಿಯಿಂದ ಕಾಂತಾವರ ಕನ್ನಡ ಭವನದಲ್ಲಿ ಮುದ್ದಣ ಸಾಹಿತೋತ್ಸವ ವಿವಿಧ ಸಾಹಿತ್ಯ ಚಟುವಟಿಕೆಗಳೊಂದಿಗೆ ನಡೆಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2023ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಕವಿ ಡಾ.ಲಕ್ಷ್ಮಣ. ವಿ.ಎ.ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಾಗೂ ಅವರ ಪ್ರಶಸ್ತಿ ಪುರಸ್ಕೃತ ಕೃತಿ “ಕಾಯಿನ್ ಬೂತ್” ನ್ನು ಬಿಡುಗಡೆಗೊಳಿಸಲಾಯಿತು. ಹಾಗೂ 2024 ರ ಸಾಲಿನ ದತ್ತಿನಿಧಿ ಪುರಸ್ಜಾರದಲ್ಲಿ ಮುನಿರಾಜ ರೆಂಜಾಳ ಅವರಿಗೆ ಗಮಕ ಕಲಾ ಪ್ರವಚನ ಪ್ರಶಸ್ತಿ, ಗಮಕಿ ಸುರೇಶ್ ರಾವ್ ಅತ್ತೂರು ಅವರಿಗೆ ಗಮಕ ಕಲಾ ವಾಚನ ಪ್ರಶಸ್ತಿ ಮತ್ತು ಕಾರ್ಕಳದ ಲೋಹ ಶಿಲ್ಪಿ ಪ್ರಕಾಶ್ ಆಚಾರ್ಯ ಅವರಿಗೆ ಶಿಲ್ಪಕಲಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ 7 ಹೊತ್ತಗೆಗಳನ್ನು ಉಪನ್ಯಾಸಕ ಟಿ.ಎ.ಎನ್.ಖಂಡಿಗೆ ಬಿಡುಗಡೆಗೊಳಿಸಿದರು. ಹಾಗೂ ಹರೀಶ್ ಆದೂರು ರಚಿಸಿದ ಸಾಕ್ಷ್ಯಚಿತ್ರ “ನುಡಿತೇರು” ನ್ನು ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ್ ರಾಜ್ ಅವರು ಮಾತನಾಡಿ, ಕಾಂತಾವರ ಕನ್ನಡ ಸಂಘಕ್ಕೂ ಅವಿನಾವಭಾವ ಸಂಬಂಧವಿದೆ. ಈ ಎರಡೂ ಸಂಘಗಳ ಧ್ಯೇಯೋದ್ದೇಶಗಳು ಒಂದೇ ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ಎರಡೂ ಸಂಘಗಳು ಕನ್ನಡದ ಪರವಾಗಿ ಅತ್ಯುತ್ತಮ ಕೆಲಸಗಳನ್ನು ಕೈಗೊಳ್ಳುತ್ತಿವೆ. ಕಾಂತಾವರ ಕನ್ನಡ ಸಂಘವು ಜನ್ಮತಾಳಿ ೫೦ ರ ಅಂಚಿಗೆ ತಲುಪುತ್ತಿದ್ದರೆ, ಶಿವಮೊಗ್ಗ ಕರ್ನಾಟಕ ಸಂಘವು ಶತಮಾನದಂಚಿಗೆ ಕಾಲಿಡುತ್ತಿದೆ ಎಂದ ಅವರು ಶಿವಮೊಗ್ಗ ಕರ್ನಾಟಕ ಸಂಘ ಮತ್ತು ಕನ್ನಡ ಸಂಘದ ಸಾಮ್ಯತೆಯನ್ನು ವಿವರಿಸಿದರು.
ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಅನಾವರಣಗೊಂಡ ಸಾಧಕರಾದ ಸಾಹಿತ್ಯ ಭಂಡಾರದ ಪರವಾಗಿ (ಎಂ.ಎ.ಸುಬ್ರಹ್ಮಣ್ಯ ಮತ್ತು ಅರುಣ), ಡಾ.ವಾರಿಜಾ ನೀರಬೈಲು, ಕೆ.ಎ.ರೋಹಿಣಿ, ಕೆ.ಹೆಚ್.ವಿಜಯಕುಮಾರ್, ಮುದ್ರಣ ವಿನ್ಯಾಸಕಾರ ಕಲ್ಲೂರು ನಾಗೇಶ್ ಅವರನ್ನು ಗೌರವಿಸಲಾಯಿತು. ಹಾಗೂ ಕೃತಿಕಾರರಾದ ಸುಮತಿ ನಿರಂಜನ, ವಿಜಯ ಬಿ.ಶೆಟ್ಟಿ., ಶ್ರೀಪತಿ ಮಂಜಣಬೈಲು, ಡಾ.ಮೀನಾಕ್ಷಿ ರಾಮಚಂದ್ರ, ಅಂಶುಮಾಲಿ, ಡಾ.ಸರ್ವಮಂಗಳ ಪಿ.ಆರ್ ಹಾಗೂ ಡಾ.ಸುಲತಾ ವಿದ್ಯಾಧರ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಪ್ರಾಯೋಜಕರನ್ನು ಗೌರವಿಸಲಾಯಿತು.
ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಠಲ ಬೇಲಾಡಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಕಾರ್ಯದರ್ಶಿ ಸದಾನಂದ ನಾರಾವಿ, ಸತೀಶ್ ಕುಮಾರ್ ಕೆಮ್ಮಣ್ಣು ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ರನ್ನನ ಗಧಾಯುದ್ಧದ ದುರ್ಯೋಧನ ವಿಲಾಪ ಗಮಕ ವಾಚನ ವ್ಯಾಖ್ಯಾನ ನಡೆಯಿತು.