ಮೂಡುಬಿದಿರೆ: ಮೊಸರು ಕುಡಿಕೆ ಉತ್ಸವದಲ್ಲಿ ಗುಣಪಾಲ ಕಡಂಬರಿಗೆ “ಶ್ರೀ ಕೃಷ್ಣ ಪ್ರಶಸ್ತಿ” ಪ್ರದಾನ
ಮೂಡುಬಿದಿರೆ: ಮೂಡುಬಿದಿರೆಯಲ್ಲಿ ಕರ್ಮ ಜೀವನ ಆರಂಭಿಸಿ 50 ವರ್ಷ ತುಂಬಿರುವ ಈ ಸುಸಂದರ್ಭದಲ್ಲಿ ತನ್ನ ಅಧ್ಯಾಪನ, ಆಡಳಿತ, ಕಂಬಳ, ಕೃಷಿ, ಧಾರ್ಮಿಕ ಸೇವಾನುಭವವನ್ನು ಗುರುತಿಸಿ ನೀಡಿರುವ ಗೌರವವನ್ನು ಸಂತೃಪ್ತಿ, ಸಂತೋಷದಿಂದ ಸ್ವೀಕರಿಸಿದ್ದೇನೆ, ಎಲ್ಲ ರಂಗಗಳಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟವರೆಲ್ಲರನ್ನೂ ಕೃತಜ್ಞತಪೂರ್ವಕ ನೆನೆಯುತ್ತೇನೆ ಎಂದು ಜೈನ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾರ್ಯ, ಕಂಬಳ ವಿದ್ವಾಂಸ ಕೆ. ಗುಣಪಾಲ ಕಡಂಬ ಹೇಳಿದರು.
ಅವರು ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ ಕೃಷ್ಣ ಕಟ್ಟೆಯ ಎದುರು ನಡೆದ 37ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ `ಶ್ರೀ ಕೃಷ್ಣ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡಿದರು.
ಸಂಘಟನೆಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪ್ರ. ಕಾರ್ಯದರ್ಶಿ ಮಾತನಾಡಿ ಶ್ರೀ ಕೃಷ್ಣ ಕೃಷಿಕ, ಹೈನುಗಾರರ ಸ್ಪೂರ್ತಿಯ ಚಿಲುಮೆ, ಬಾಲ್ಯದಲ್ಲಿ ಕ್ರೀಡೆಗಳನ್ನು ವಿನೋದವಾಗಿ ತೋರಿದವಲ್ಲದೆ ಜಗತ್ತಿಗೆ ಗೀತೋಪದೇಶವನ್ನು ಬೋಧಿಸಿದವರು ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ರಾಜೇಂದ್ರಕುಮಾರ್ ಜೈನ್, ಐ. ರಾಘವೇಂದ್ರ ಪ್ರಭು,
ಸಂಘಟನೆಯ ಗೌರವಾಧ್ಯಕ್ಷ ಪ್ರಮಥ್ ಕುಮಾರ್, ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಗುರುಪ್ರಸಾದ ಹೊಳ್ಳ ಮೊದಲಾದವರು ಭಾಗವಹಿಸಿದ್ದರು.