ನೆಲ್ಯಾಡಿ: ಶಿರಾಡಿ 108 ಆ್ಯಂಬುಲೆನ್ಸ್ ಸಿಬ್ಬಂದಿಗಳ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರಿಂದ ವ್ಯಾಪಕ ಶ್ಲಾಘನೆ

ನೆಲ್ಯಾಡಿ: ಅನಾರೋಗ್ಯ ಪೀಡಿತ ಮಹಿಳೆಯೋರ್ವರ ಮನೆ ತನಕ 108 ಅಂಬ್ಯುಲೆನ್ಸ್ ಸಂಚರಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ 108 ಸಿಬ್ಬಂದಿಗಳು ಸುಮಾರು 1 ಕಿ.ಮೀ.ದೂರದ ತನಕ ಮಹಿಳೆಯನ್ನು ಸ್ಟ್ರೇಚರ್ ನಲ್ಲಿ ಹೊತ್ತುಕೊಂಡೇ ಬಂದು ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿರುವ ಮಾನವೀಯ ಘಟನೆ ಶಿರಾಡಿ ಗ್ರಾಮದಲ್ಲಿ ನಡೆದಿದೆ.

ಶಿರಾಡಿ ಗ್ರಾಮದ ಪದಂಬಳ ಸಮೀಪದ ದೇವರಮಾರು ನಿವಾಸಿ ಕಮಲ(65) ಎಂಬವರ ಆರೋಗ್ಯದಲ್ಲಿ ಏರುಪೇರು ಆದ ಹಿನ್ನೆಲೆಯಲ್ಲಿ ಅವರ ಮಗ ಪ್ರವೀಣ್ ಶಿರಾಡಿಯ 108ಗೆ ಕರೆ ಮಾಡಿದ್ದರು. ಕಮಲ ಅವರ ಮನೆಗೆ ದುರ್ಗಮ ರಸ್ತೆ ಇದ್ದರೂ ವಾಹನ ಸಂಚರಿಸುವಂತೆ ಇಲ್ಲ. ಆದರೂ ಉದನೆ-ಕಳಪ್ಪಾರು ಮಾರ್ಗವಾಗಿ ದೇವರಮಾರುವಿಗೆ 108 ಆಂಬ್ಯುಲೆನ್ಸ್ ಸಿಬ್ಬಂದಿಗಳೂ ತೆರಳಿದರೂ ಕೆಸರುಮಯಗೊಂಡಿದ್ದ ರಸ್ತೆಯಲ್ಲಿ ರೋಗಿಯ ಮನೆ ತನಕ ವಾಹನ ಸಂಚರಿಸುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಕಮಲ ಅವರ ಮನೆಯಿಂದ ಸುಮಾರು 1 ಕಿ.ಮೀ.ದೂರದಲ್ಲಿ ಆಂಬುಲೆನ್ಸ್ ನಿಲ್ಲಿಸಿದ್ದ ಸಿಬ್ಬಂದಿ ಕಮಲ ಅವರ ಮನೆಗೆ ತೆರಳಿ ಅವರ ಆರೋಗ್ಯ ತಪಾಸಣೆ ನಡೆಸಿದರು.

ಬಳಿಕ ಕಮಲ ಅವರ ಮಗ ಪ್ರವೀಣ್ ಹಾಗೂ ಇತರರ ಸಹಾಯದಿಂದ ರೋಗಿಯನ್ನು ಸುಮಾರು 1ಕಿ.ಮೀ.ದೂರದ ತನಕ ಸ್ಟ್ರೇಚರ್ ನಲ್ಲೇ ಹೊತ್ತುಕೊಂಡು ಕರೆತಂದರು. ಆಂಬುಲೆನ್ಸ್ ನಲ್ಲಿ ಅವರಿಗೆ ತುರ್ತು ಚಿಕಿತ್ಸೆ ನೀಡಿ ನಂತರ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಶಿರಾಡಿ 108 ಆಂಬ್ಯುಲೆನ್ಸ್ ಸಿಬ್ಬಂದಿಗಳಾದ ಸಂತೋಷ್, ಗಣಪತಿ ಹಾಗೂ ರೂಪೇಶ್ ಅವರ ಈ ಸಾಮಾಜಿಕ ಕಳಕಳಿಗೆ ಗ್ರಾಮಸ್ಥರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಕಮಲ ಅವರನ್ನು ಸ್ಟ್ರೇಚರ್ ಸಹಾಯದಿಂದ 108 ಸಿಬ್ಬಂದಿಗಳು ಹೊತ್ತುಕೊಂಡು ಬರುವ ವಿಡಿಯೋ ಈಗ ವೈರಲ್ ಆಗಿದೆ. ಸದ್ರಿ ರಸ್ತೆ ದುರಸ್ತಿಗೆ ಸಂಬಂಧಪಟ್ಟವರು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಗ್ರಾಮಸ್ಥರಿಂದ ಕೇಳಿ ಬಂದಿದೆ.

Related Posts

Leave a Reply

Your email address will not be published.