ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ನವೆಂಬರ್ 7
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ಪ್ರತಿ ವರ್ಷ ಭಾರತದಾದ್ಯಂತ ನವಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ, ಆರಂಭಿಕ ಹಂತದಲ್ಲಿ ಗುರುತಿಸುವುದರ ಮಹತ್ವ ಮತ್ತು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ.
ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ ಭಾರತದಲ್ಲಿ 1975 ರಲ್ಲಿ ಆರಂಭವಾಯಿತು. ಆದರೆ ವಿಪರ್ಯಾಸವೆಂದರೆ ವರ್ಷವೊಂದರಲ್ಲಿ ಸುಮಾರು 10 ಲಕ್ಷ ಮಂದಿ ಈ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ ಮತ್ತು ಇದರಲ್ಲಿ ಮೂರನೇ ಎರಡರಷ್ಟು ಮಂದಿ ಮುಂದುವರಿಕೆ ಹಂತದಲ್ಲಿ ಕ್ಯಾನ್ಸರ್ ಗುರುತಿಸಲ್ಪಟ್ಟು ಸಾವಿನಲ್ಲಿ ಪರ್ಯವಸಾನವಾಗುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ಕ್ಯಾನ್ಸರ್ ಬಗ್ಗೆ ವಿಶೇಷ ಜಾಗೃತಿ ಮೂಡಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2014ರಲ್ಲಿ ಪ್ರತಿವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಎಂಬ ಆಚರಣೆಯನ್ನು ಜಾರಿಗೆ ತಂದು ಜನರನ್ನು ಎಚ್ಚರಿಸುವ ಕಾರ್ಯವನ್ನು ಆರಂಭಿಸಲಾಯಿತು.
ಕ್ಯಾನ್ಸರ್ ಎನ್ನುವುದು ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ 2ನೆ ಅಗ್ರಸ್ಥಾನವನ್ನು (ಮೊದಲಸ್ಥಾನ ಹೃದಯಾಘಾತ) ಅಲಂಕರಿಸಿದೆ. ಕನ್ನಡದಲ್ಲಿ ಕ್ಯಾನ್ಸರ್ ರೋಗವನ್ನು ಅರ್ಬುದ ರೋಗ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ಕೊಟ್ಯಾಂತರ ಮಂದಿ ಕ್ಯಾನ್ಸರ್‍ನಿಂದಾಗಿ ಸಾಯುತ್ತಿದ್ದಾರೆ. ಸರಿಸುಮಾರು ವರ್ಷದಲ್ಲಿ 15 ಮಿಲಿಯನ್ ಮಂದಿ ಕ್ಯಾನ್ಸರ್‍ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ,ಗಂಟಲು, ಶ್ವಾಸಕೋಸ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಟೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗ (ಸರ್ವಿಕ್ಸ್ ಅಂದರೆ ಗರ್ಭಕೋಶದ ಕುತ್ತಿಗೆ)ದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.
ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಮುಂದುವರಿದ ರಾಷ್ಟ್ರಗಳಲ್ಲಿ ಒಂದು ಅಥವಾ 2ನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಬಡತನ ಮೂಢನಂಬಿಕೆ ಅನಕ್ಷರತೆ ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ನವಂಬರ್ 7ನ್ನು ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕಿ ಹೆಚ್ಚಿನ ತಿಳುವಳಿಕೆ ಮತ್ತು ಅರಿವು ನೀಡುವ ಕಾರ್ಯ ನಡೆಸಲಾಗುತ್ತದೆ.
ಭಾರತ ದೇಶವೊಂದರಲ್ಲಿ ವರ್ಷಕ್ಕೆ 10 ಲಕ್ಷ ಜನರು ಕ್ಯಾನ್ಸರ್‍ಗೆ ತುತ್ತಾಗುತ್ತಾರೆ. ಮತ್ತು ವಿಶ್ವದ ಕ್ಯಾನ್ಸರ್ ರ್ಯಾಂಕ್ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ ಲಭಿಸಿದೆ. ಈ ಪೈಕಿ ಶೇಕಡಾ 90ರಷ್ಟು ಕ್ಯಾನ್ಸರ್ ತಂಬಾಕಿನ ಸೇವನೆಯಿಂದ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ತಂಬಾಕಿನ ವಿವಿಧ ರೂಪಗಳಾದ ಗುಟ್ಕಾ, ಪಾನ್‍ಪರಾಗ್, ಮಾರುತಿ ಮತ್ತು ಮಾಣಿಕ್‍ಚಂದ್ ಮುಂತಾದುವುಗಳಿಂದ ಬಾಯಿ, ಗಂಟಲು ಮುಂತಾದ ಅಂಗಗಳು ಕ್ಯಾನ್ಸರ್‍ಗೆ ತುತ್ತಾಗುತ್ತದೆ. ಇದರ ಜೊತೆಗೆ ಧೂಮಪಾನ, ಮಧ್ಯಪಾನ ಸೇರಿಕೊಂಡು ಶ್ವಾಸಕೋಶ ಕರುಳು, ಅನ್ನನಾಳ. ಯಕೃತ್, ಮೂತ್ರಪಿಂಡ ಇತ್ಯಾದಿ ಅಂಗಗಳು ಕ್ಯಾನ್ಸರ್‍ಗೆ ತುತ್ತಾಗುತ್ತದೆ. ಸಮಾಧಾನಕರವಾದ ಅಂಶವೆಂದರೆ ಕ್ಯಾನ್ಸರ್‍ನ್ನು ಈ ದುಶ್ಚಟಗಳಿಂದ ನಿಯಂತ್ರಿಸಿ ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಮತ್ತು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರ್‍ನ್ನು ಗುಣಪಡಿಸಬಹುದು.
ಅರ್ಬುದ ರೋಗಕ್ಕೆ ಕಾರಣಗಳು
- ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ
- ಧೂಮಪಾನ ಮತ್ತು ಮಧ್ಯಪಾನ
- ಅನುವಂಶೀಯ ಕಾರಣಗಳು
- ಆರಾಮದಾಯಕ ಜೀವನ ಶೈಲಿ, ಅನಾರೋಗ್ಯಪೂರ್ಣ ಆಹಾರದ ಪದ್ಧತಿ ಮತ್ತು ಒತ್ತಡದ ಜೀವನ ಇತ್ಯಾದಿ
- ವಿಕಿರಣದ ಮುಖಾಂತರ
- ಅತಿಯಾದ ಗರ್ಭನಿರೋಧಕ ಮಾತ್ರೆಗಳು ಮತ್ತು ಕೃತಕ ರಸದೂತ ಮಾತ್ರೆಗಳ ಅನಿಯಂತ್ರಿತ ಬಳಕೆ
- ವಾತಾವರಣದ ವೈಪರೀತ್ಯ, ವಾಯು ಮಾಲಿನ್ಯ, ವೃತ್ತಿ ಸಂಬಂಧಿ ಕ್ಯಾನ್ಸರ್ ಕಾರಕ ವಸ್ತುಗಳ ದೇಹಕ್ಕೆ ಸೇರುವುದರಿಂದ
- ಅನಾರೋಗ್ಯಕರವಾದ ಲೈಗಿಂಕ ಜೀವನ ಮತ್ತು ಹತ್ತು ಹಲವಾರು ಲೈಗಿಂಕ ಸಂಬಂಧಗಳು, ಹಲವಾರು ಬಾರಿ ಗರ್ಭಧರಿಸುವುದು ಇತ್ಯಾದಿ.
- ಹೆಪಟೈಟಿಸ್ ಬಿ ಮತ್ತು ಸಿ ವೈರಸ್‍ನ ಸೋಂಕು, ಎಬ್‍ಸ್ಟೈನ್ ಬಾರ್ ವೈರಸ್, ಹ್ಯೂಮನ್ ಪಾಪಿಲೋಮ ವೈರಾಸ್ ಇತ್ಯಾದಿ ವೈರಸ್ ಸೋಂಕಿನಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ಬಾಯಿ ಅರ್ಬುದ ರೋಗದ ಚಿಹ್ನೆಗಳು - ಪ್ರಾರಂಭಿಕ ಹಂತದಲ್ಲಿ ಖಾರ ಆಹಾರ ಪದಾರ್ಥಗಳನ್ನು ತಿನ್ನುವಾಗ ಬಾಯಿ ಉರಿಯುತ್ತದೆ.
- ಬಾಯಿಯಲ್ಲಿ ಹುಣ್ಣು ಅಥವಾ ಗಾಯ ಆಗುತ್ತದೆ ಮತ್ತು ಹುಣ್ಣು ಒಣಗುವುದೇ ಇಲ್ಲ
- ಬಾಯಿಯಲ್ಲಿ ಗಡ್ಡೆ ಬೆಳೆಯುತ್ತದೆ. ಮತ್ತು ಮುಟ್ಟಿದಾಗ ರಕ್ತ ಬರುತ್ತದೆ.
- ವಿಪರೀತ ನೋವು ಇರುತ್ತದೆ. ಮಾತ್ರೆ ತಿಂದರೂ ನೋವು ನಿವಾರಣೆಯಾಗುವುದಿಲ್ಲ
- ಬಾಯಿ ತೆರೆಯಲು ಕಷ್ಟವಾಗಬಹುದು. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ 50 ಮಿ.ಮಿ. ಬಾಯಿ ತೆರೆಯಬಹುದು. ಅರ್ಬುದ ರೋಗದಲ್ಲಿ 20 ಮಿ.ಮಿ. ಗಿಂತ ಜಾಸ್ತಿ ಬಾಯಿ ತೆರೆಯಲು ಕಷ್ಟವಾಗಬಹುದು.
- ಮಾತಾನಾಡುವಾಗ ಮತ್ತು ಆಹಾರ ಪದಾರ್ಥ ಸೇವಿಸುವಾಗ ತೊಂದರೆ ಮತ್ತು ನೋವು ಆಗಬಹುದು.
- ಬಾಯಿಯಲ್ಲಿ ಬಿಳಿ ಮತ್ತು ಕೆಂಪುಕಲೆಗಳು ಕಾಣಿಸಿಕೊಳ್ಳಬಹುದು.
- ನಾಲಗೆಯ ಮೇಲೆ ಗುಳ್ಳೆ ಅಥವಾ ಹುಣ್ಣು ಅಥವಾ ಗಡ್ಡೆಬೆಳೆದು ನಾಲಗೆಯ ಚಲನೆಯಲ್ಲಿ ಕಷ್ಟವಾಗಬಹುದು
- ಅತಿಯಾದ ಎಂಜಲು (ಜೊಲ್ಲುರಸ) ಬಂದಂತೆ ಅನಿಸುವುದು
- ಕುತ್ತಿಗೆಯ ಸುತ್ತ ಗಡ್ಡೆ ಅಥವಾ ಗುಳ್ಳೆ ಬೆಳೆದಂತೆ ಅನಿಸಬಹುದು. ಗಡ್ಡೆ ಸುಮಾರು 2ರಿಂದ 10ರ ವರೆಗೆ ಇದ್ದು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ಆದರೆ ನೋವಿರುವುದಿಲ್ಲ.
ಸ್ತನದ ಕ್ಯಾನ್ಸರ್ ಚಿಹ್ನೆಗಳು
ಸ್ತನದಲ್ಲಿ ಗಡ್ಡೆಗಳು ಅಥವಾ ಸ್ತನಗಳ ಚರ್ಮ ದಪ್ಪಗಾದಂತೆ ಅಥವಾ ಬೆಳೆದಂತೆ ಭಾಸವಾಗುವುದು. ಮೊಲೆ ತೊಟ್ಟು ಮೊಲೆಯೊಳಗೆ ಹುದುಗಿಕೊಳ್ಳುವುದು. ಸ್ತನಗಳ ಗಾತ್ರದಲ್ಲಿ ವ್ಯತ್ಯಾಸವಾಗುವುದು. ಸ್ತನಗಳ ಚರ್ಮದಲ್ಲಿ ಡಿಂಪಲ್ ಅಥವಾ ಗುಳ್ಳೆ ಬೀಳುವುದು ಕಂಕುಳಗಳ ಕೆಳಗೆ ಗುಳ್ಳೆಗಳು ಅಥವಾ ಸಣ್ಣ ಗಡ್ಡೆ ಬೆಳೆದಂತೆ ಭಾಸವಾಗುವುದು. ಮೊಲೆತೊಟ್ಟುಗಳಲ್ಲಿ ತುರಿಕೆ ಅಥವಾ ಒಡೆಯುವುದು ಹಾಗೂ ಕೀವು ಸೋರುವುದು ರಕ್ತ ಸೂಸುವುದು ಇತ್ಯಾದಿ ಎರಡು ಸ್ತನಗಳು ಒಂದೇ ರೀತಿ ಆಗಿರದೇ ಗಾತ್ರ, ರಚನೆ ಮತ್ತು ಆಕಾರದಲ್ಲಿ ವ್ಯತ್ಯಾಸವಾಗುವುದು. ಇದರ ಜೊತೆಗೆ ನಿರಂತರವಾಗಿ ಸ್ತನಗಳಲ್ಲಿ ನೋವು ಇರಬಹುದು. ಕೆಲವೊಮ್ಮೆ ಬರೀ ಗೆಡ್ಡೆ ಬೆಳೆದು, ನೋವಿಲ್ಲದೇ ಇರಲೂ ಬಹುದು. ಮೇಲೆ ತಿಳಿಸಿದ ಯಾವುದೇ ಲಕ್ಷಣಗಳಿದ್ದಲ್ಲಿ ಕೂಡಲೇ ವೈದ್ಯರನ್ನು ಸಂದರ್ಶಿಸಿ ಸೂಕ್ತ ಸಲಹೆ ತೆಗೆದು ಕೊಳ್ಳಬೇಕು.
ನೆನಪಿರಲಿ ಪ್ರಾರಂಭಿಕ ಹಂತದಲ್ಲಿಯೇ ಸ್ತನದ ಕ್ಯಾನ್ಸರ್‍ನ್ನು ಗುರುತಿಸಿದ್ದಲ್ಲಿ ಗುಣಮುಖವಾಗಬಹುದು. ಕಡೇ ಹಂತದಲ್ಲಿ ಗುರುತಿಸಿದ್ದಲ್ಲಿ ಜೀವÀಕ್ಕೆ ಸಂಚಕಾರ ಬರಬಹುದು. ಆರೋಗ್ಯದ ವಿಚಾರದಲ್ಲಿ ಯಾವುದೇ ಮುಜುಗರ, ಸಂಕೋಚವಿಲ್ಲದೇ ವೈದ್ಯರ ಬಳಿ ನಿಮ್ಮ ಮನಸ್ಸಿನ ನೋವು, ಸಂಕಟ ಮತ್ತು ತೊಂದರೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. 40ವರುಷ ದಾಟಿದ ಎಲ್ಲಾ ಮಹಿಳೆಯರಿಗೂ ಪ್ರತೀ 6ತಿಂಗಳಿಗೊಮ್ಮೆ ಸ್ತನದ ಕ್ಯಾನ್ಸರ್ ಬಗ್ಗೆ ವೈದ್ಯರ ಬಳಿ ತೋರಿಸಿ ಮಾರ್ಗದರ್ಶನ ತೆಗೆದುಕೊಳ್ಳಬಹುದು.
ಶ್ವಾಸಕೋಶದ ಕ್ಯಾನ್ಸರ್‍ನ ಚಿಹ್ನೆಗಳು
ಧೂಮಪಾನ ಶ್ವಾಸಕೋಶಗಳ ಬಹುದೊಡ್ಡ ವೈರಿ. ಸಾಮಾನ್ಯವಾಗಿ 60-70ರ ಹರೆಯದಲ್ಲಿ ಕಾಣುವ ಈ ರೋಗ, ಬದಲಾದ ಜೀವನ ಶೈಲಿ ಮತ್ತು ಧೂಮಪಾನದಿಂದಾಗಿ ಈಗೀಗ 30-40ರ ಹರೆಯದಲ್ಲಿ ಕಾಣಸಿಗುತ್ತದೆ. ಶೇಕಡಾ 90ರಷ್ಟು ಮಂದಿ ಧೂಮಪಾನದಿಂದಾಗಿಯೇ ಎದೆಗೂಡಿನ ಕ್ಯಾನ್ಸರ್‍ಗೆ ತುತ್ತಾಗುತ್ತಾರೆ. ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣದೇ ಇರಬಹುದು. ಆದರೆ ಮುಂದುವರಿದ ಕ್ಯಾನ್ಸರ್‍ನಲ್ಲಿ ಈ ಕೆಳಗಿನ ಲಕ್ಷಣಗಳು ಹೆಚ್ಚಾಗಿ ಕಾಣಸಿಗುತ್ತದೆ.- ವಿಪರೀತ ಮತ್ತು ನಿರಂತರ ಕೆಮ್ಮು ಇದ್ದು ಯಾವುದೇ ರೀತಿಯ ಔಷಧಗಳಿಗೆ ಕಡಿಮೆಯಾಗದೆ, ನಿರಂತರ 4, 5 ವಾರ ಕೆಮ್ಮಿದ್ದಲ್ಲಿ ವೈದ್ಯರ ಸಲಹೆ ಅತೀ ಅಗತ್ಯ.
- ಕೆಮ್ಮುವಾಗ ರಕ್ತ ವಸರುವುದು, ಕಫದ ಜೊತೆ ರಕ್ತ ಸೂಸುವುದು
- ಆಹಾರ ಸೇರದಿರುವುದು ಮತ್ತು ಹಸಿವಿಲ್ಲದಿರುವುದು ಇದರಿಂದಾಗಿ ದೇಹದ ತೂಕ ಕಡಿಮೆಯಾಗಬಹುದು
- ಉಸಿರಾಡಲು ಕಷ್ಟವಾಗಬಹುದು. ಉಸಿರಾಡುವಾಗ ಜೋರಾಗಿ ಶಬ್ಧ ಬರಬಹುದು. ಉಸಿರಾಡುವಾಗ ಎದೆಭಾಗದಲ್ಲಿ ನೋವಾಗಬಹುದು. ದೀರ್ಘವಾದ ಶ್ವಾಸ ತೆಗೆಯಲು ಸಾಧ್ಯವಾಗದೇ ಇರಬಹುದು
- ಪದೇ ಪದೇ ಆಯಾಸಗೊಳ್ಳುವುದು, ಜೀವನದಲ್ಲಿ ನಿರಾಸಕ್ತಿ ಶ್ವಾಸಕೋಶದಲ್ಲಿ ಆಮ್ಲಜನಕದ ಪೂರೈಕೆ ಮತ್ತು ವಿನಿಮಯವಾಗದಿದ್ದಲ್ಲಿ ಜೀವನದ ಉತ್ಸಹ ಬತ್ತಿಹೋಗಬಹುದು.
- ಧ್ವನಿಯಲ್ಲಿ ಬದಲಾವಣೆ, ಮುಖದಲ್ಲಿ ಊದಿಕೊಳ್ಳುವುದು ಮತ್ತು ಕರ್ಕಶವಾದ ಧ್ವನಿ ಇತ್ಯಾದಿ ಉಂಟಾಗಬಹುದು
- ಪದೇ ಪದೇ ಶ್ವಾಸನಾಳದ ಸೋಂಕಿಗೆ ತುತ್ತಾಗಿ ಜ್ವರ ಕಫ, ಕೆಮ್ಮು ಮತ್ತುಧಮ್ಮು ಕಟ್ಟುವುದು ಕೆಚ್ಚಾಗಿ ಕಾಡಬಹುದು.
- ಎದೆಗೂಡಿನ ಭಾಗದಲ್ಲಿ ನೋವು ಬರಬಹುದು. ಈ ನೋವು ತೋಳು, ಬೆನ್ನು ಮುಂತಾದ ಕಡೆಗೂ ಹರಡಬಹುದು. ಕೆಮ್ಮು ಇಲ್ಲದಿದ್ದರೂ ನಿರಂತರ ನೋವು ಇರಬಹುದು.
ಕ್ಯಾನ್ಸರ್ ರೋಗ ಅಂತಿಮ ಹಂತಕ್ಕೆ ತಲುಪಿದಾಗ, ದೇಹದ ಬೇರೆ ಭಾಗಗಳಿಗೂ ಹರಡಿ ಮೂಳೆಗಳಲ್ಲಿ ನೋವು ಮತ್ತು ಮೂಳೆ ಮುರಿತ ಉಂಟಾಗಬಹುದು ಅದೇ ರೀತಿ ಮೆದುಳಿಗೂ ಹರಡಿದಲ್ಲಿ ತಲೆನೋವು ಅಪಸ್ಮಾರ, ಕೈಕಾಲುಗಳು ಸಂವೇಧನೆ ಮತ್ತು ನಿಯಂತ್ರಣ ಕಳೆದು ಕೊಳ್ಳುವುದು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಇಲ್ಲಿ ಕೂಡಾ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಆದರೆ ಹೆಚ್ಚಿನ ಶ್ವಾಸಕೋಸ ಕ್ಯಾನ್ಸರ್ ಕಡೆ ಹಂತದಲ್ಲಿ ಗುರುತಿಸಲ್ಪಟ್ಟು ವೈದ್ಯರ ಬಳಿ ಬರುವಾಗಲೇ ಕಾಲ ಮಿಂಚಿ ಹೋಗಿರುತ್ತದೆ.
ಜನನಾಂಗದ ಕ್ಯಾನ್ಸರ್ (ಸರ್ವಿಕ್ಸ್ ಅರ್ಬುದ ರೋಗ)
ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್‍ನ ನಂತರದ ಸ್ಥಾನ ಜನನಾಂಗದ ಕ್ಯಾನ್ಸರ್‍ಗೆ ಸಲ್ಲುತ್ತದೆ. “ ಪಾಪ್ ಸ್ಮಿಯರ್” ಎಂಬ ಪರೀಕ್ಷೆಯ ಮುಖಾಂತರ ಆರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು ಪ್ರತೀ ಮಹಿಳೆ 40 ವರ್ಷ ದಾಟಿದ ಬಳಿಕ ಪ್ರತೀ ವರ್ಷಕೊಮ್ಮೆ ಸ್ತ್ರೀ ರೋಗದ ತಜ್ಞರ ಬಳಿ ತಪಾಸಣೆ ನಡೆಸಿದ್ದಲ್ಲಿ ಈ ರೋಗವನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಹ್ಯೂಮನ್ ಪ್ಯಾಪಿಲೋಮ ವೈರಸ್, ಅಪೌಷ್ಟಿಕತೆ, ಬೊಜ್ಜು, ಧೂಮಪಾನ, ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಫಂಗಲ್ ಸೋಂಕು, ಹಣ್ಣು ಸೊಪ್ಪು ತರಕಾರಿ ರಹಿತ ಆಹಾರ, ರಸದೂತಗಳು ಮತ್ತು ಕೃತಕ ಗರ್ಭನಿರೋಧಕ ಮಾತ್ರೆಗಳ ಅತಿಯಾದ ಸೇವನೆ, ಜಾಸ್ತಿ ಮಕ್ಕಳನ್ನು ಹೆರುವುದು ಇತ್ಯಾದಿ ಹಲವಾರು ಕಾರಣಗಳಿಂದ ಜನನಾಂಗದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಾರಂಭಿಕ ಹಂತದಲ್ಲಿ ಯಾವುದೇ ಸೂಚನೆ ಇರದಿರಬಹುದು. ತನ್ನಿಂತಾನೇ ರಕ್ತ ಜನನಾಂಗದಲ್ಲಿ ಒಸರುವುದು, ಲೈಗಿಂಕ ಕ್ರಿಯಾ ಸಮಯದಲ್ಲಿ ರಕ್ತ ಸೋರುವುದು, ಲೈಗಿಂಕ ಕ್ರಿಯಾ ಸಮಯದಲ್ಲಿ ವಿಪರೀತ ನೋವು, ಋತುಚಕ್ರದ ನಡುವೆ ಕೂಡ ನೋವು ಮತ್ತು ರಕ್ತಸ್ರಾವ ಮತ್ತು ಸ್ವಾಭಾವಿಕ ಋತುಚಕ್ರದಲ್ಲಿ ಹೆಚ್ಚಿನ ರಕ್ತಸ್ರಾವ ಉಂಟಾಗಬಹುದು. ಅದೇ ರೀತಿ ಜನನಾಂಗದಿಂದ ವಾಸನೆಯುಕ್ತ ಸೋರಿಕೆ ಉಂಟಾಗಬಹುದು. ಈ ರಕ್ತದ ಸೋರಿಕೆ ಋತುಚಕ್ರ ನಿಂತ ನಂತರವೂ ಉಂಟಾಗಬಹುದು ಮತ್ತು ಜನನಾಂಗದ ಒಳಗೆ ಗಡ್ಡೆ ಬೆಳೆದಂತೆ ಭಾಸವಾಗಬಹುದು. ಆರಂಭಿಕ ಹಂತದಲ್ಲಿಯೂ ಇವುಗಳನ್ನಲ್ಲಾ ಗುರುತಿಸಿ ಸೂಕ್ತ ಸ್ರ್ತೀ ರೋಗ ತಜ್ಞ ವೈದ್ಯರಲ್ಲಿ ಸಕಾಲದಲ್ಲಿ ತೋರಿಸಿ ಚಿಕಿತ್ಸೆ ಪಡೆದಲ್ಲಿ ಮುಂದೆ ಬರುವ ತೊಂದರೆಗಳನ್ನು ತಡೆಗಟ್ಟಬಹುದು.
ತಡೆಗಟ್ಟುವುದು ಹೇಗೆ?
ಧೂಮಪಾನ, ಮಧ್ಯಪಾನ ವರ್ಜಿಸಬೇಕು. ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಖಂಡಿತವಾಗಿಯೂ ಸೇವಿಸಬಾರದು. ಆರೋಗ್ಯಪೂರ್ಣ ಜೀವನ ಪದ್ಧತಿ, ಪರಿಪೂರ್ಣ ಸಮತೋಲಿತ ಆಹಾರ, ಶಿಸ್ತುಬದ್ಧ ಜೀವನ ಶೈಲಿ, ನಿರಂತರ ದೈಹಿಕ ವ್ಯಾಯಾಮ ಒತ್ತಡವಿಲ್ಲದ ಜೀವನ ಕ್ರಮ ರೂಡಿಸಿಕೊಳ್ಳಬೇಕು. ಕಲುಷಿತ ವಾತಾವರಣ, ವಿಕಿರಣ ಸೂಸುವ ವಾತಾವರಣವಿದ್ದಲ್ಲಿ ಅಥವಾ ವೃತ್ತಿ ಸಂಬಂಧಿ ಕ್ಯಾನ್ಸರ್‍ಕಾರಕ ವಸ್ತುಗಳಿಗೆ ತೆರೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇದ್ದಲ್ಲಿ ವೃತ್ತಿಯನ್ನು ಬದಲು ಮಾಡಿ. ಅನುವಂಶೀಯ ಕಾರಣವಿದ್ದಲ್ಲಿ ನಿರಂತರವಾಗಿ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಪಡೆಯಿರಿ. ಅತಿಯಾದ ಗರ್ಭನಿರೋಧಕ ಮಾತ್ರೆ ಮತ್ತು ರಸದೂತಗಳ ಅನಿಯಂತ್ರಿಕ ಬಳಕೆಗೆ ಕಡಿವಾಣ ಹಾಕಬೇಕು. ಆರೋಗ್ಯಪೂರ್ಣ ಲೈಗಿಂಕ ರೂಡಿಸಿಕೊಂಡು ವೈರಸ್ ಸೋಂಕು ತಗಲದಿದ್ದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ. ಕಾಲಕಾಲಕ್ಕೆ ನಿಯಮಿತವಾಗಿ ಮತ್ತು ನಿರಂತರವಾಗಿ ವೈದ್ಯರ ಮಾರ್ಗದರ್ಶನದಿಂದ ಅರ್ಬುದ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ನೂರು ಕಾಲ ಸುಖವಾಗಿ ಬದುಕಬಹುದು.
ಚಿಕಿತ್ಸೆ ಹೇಗೆ?
ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಶೇಕಡಾ 90ರಷ್ಟು ಅರ್ಬುದ ರೋಗವನ್ನು ಸರ್ಜರಿ ಮುಖಾಂತರ ತೆಗೆಯಲಾಗುತ್ತದೆ. ಆದರೆ ಕೆಲವೊಂದು ಅರ್ಬುದ ರೋಗವನ್ನು ಕಿಮೋಥೆರಫಿಯಿಂದ ಗುಣಪಡಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಸರ್ಜರಿ ಖಂಡಿತವಾಗಿಯೂ ಉತ್ತಮ. ಆದರೆ ಮುಂದುವರಿದ ಹಂತದಲ್ಲಿ (3ನೆ ಮತ್ತು 4ನೆ ಹಂತದಲ್ಲಿ) ಸರ್ಜರಿಯ ಜೊತೆಗೆ ಕಿಮೋಥೆರಫಿ ಮತ್ತು ರೆಡೀಯೋಥೆರಫಿಯ ( ವಿಕಿರಣ ಚಿಕಿತ್ಸೆ) ಅವಶ್ಯಕತೆ ಇರುತ್ತದೆ. ಚಿಕಿತ್ಸೆಯ ಆಯ್ಕೆ ಮತ್ತು ನಿರ್ಧಾರವನ್ನು ವೈದ್ಯರು ನಿರ್ಧರಿಸುತ್ತಾರೆ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಗೆಲ್ಲಬಹುದು. - ಕೊನೆಮಾತು
ಅರ್ಬುದ ರೋಗ ಎನ್ನುವುದು ಗುಣಪಡಿಸಲಾಗುದ ರೋಗ ಎನ್ನುವುದು ಖಂಡಿತವಾಗಿಯೂ ನಿಜವಲ್ಲ. ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಸೂಕ್ತ ಚಿಕಿತ್ಸೆ ನೀಡಬಹುದು. ಮತ್ತು ನಿರಂತರವಾಗಿ ವೈದ್ಯರ ಸಲಹೆ ಮಾರ್ಗದರ್ಶನಗಳ ಮುಖಾಂತರ ನೆಮ್ಮದಿಯಿಂದ ಬದುಕಬಹುದು. ಬಾಯಿ, ಸ್ತನ, ಜನನಾಂಗ ಮುಂತಾದ ಎಲ್ಲಾ ಅರ್ಬುದ ರೋಗಗಳನ್ನು ಆರಂಭದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಆದರೆ ಮುಂದುವರಿದ ಹಂತದಲ್ಲಿ ಅರ್ಬುದ ರೋಗ ಚಿಕಿತ್ಸೆಗೆ ಖಂಡಿತ ಸ್ಪಂದಿಸಲಿಕ್ಕಿಲ್ಲ. ಮತ್ತು ಮಾರಣಾಂತಿಕವಾಗುವುದರಲ್ಲಿ ಸಂಶಯವೇ ಇಲ್ಲ. ಬಡತನ, ಅನಕ್ಷರತೆ ಅಜ್ಞಾನ, ಮೂಢನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್‍ನ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಪ್ರತಿಯೊಬ್ಬ ವಿದ್ಯಾವಂತ ಪ್ರಜೆ ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಅರ್ಬುದ ರೋಗವನ್ನು ಖಂಡಿತವಾಗಿಯೂ ಜಯಿಸಬಹುದು ಮತ್ತು ಅದರಲ್ಲಿಯೇ ನಮ್ಮೆಲ್ಲರ ಸುಖ ಶಾಂತಿ ನೆಮ್ಮದಿ ಮತ್ತು ಭವಿಷ್ಯ ಅಡಗಿದೆ.
-
ಡಾ|| ಮುರಲೀ ಮೋಹನ್‍ಚೂಂತಾರು BDS, MDS,DNB,MOSRCSEd(U.K), FPFA, M.B.A ಮೊ : 9845135787 [email protected]