ಮಂಗಳೂರನ್ನು ಕಂಗೆಡಿಸಿದ ಬೆಂಗಳೂರು ಕಾಲರಾ

ಬೆಂಗಳೂರಿನಲ್ಲಿ ಕೆಲವು ಕಾಲೆರಾ ಪ್ರಕರಣಗಳು ವರದಿಯಾಗಿದ್ದು ರಾಜ್ಯವು ಕೊರೋನಾದ ಬಳಿಕ ಕಾಲೆರಾ ಕಟಕಟೆಯೊಳಕ್ಕೆ ಬಿತ್ತೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಹಾಗೆ ನೋಡಿದರೆ ಕಾಲರಾವು ವಯಸ್ಸಿನಲ್ಲಿ ಕೊರೋನಾಕ್ಕಿಂತ ತುಂಬ ಹಿರಿಯ. ಬೆಂಗಳೂರು ವೈದ್ಯಕೀಯ ಕಾಲೇಜಿನ 47 ವಿದ್ಯಾರ್ಥಿಗಳನ್ನು ಒಟ್ಟಿಗೆ ಕಾಡಿದ್ದರಿಂದ ಕಾಲರಾದ ಕಿತಾಪತಿ ಪಕ್ಕಾ ಬೆಳಕಿಗೆ ಬಂದಿದೆ. ಮಂಗಳೂರನ್ನೂ ಸಹ ಕಲಕಿದೆ.
ಕಾಲರಾ ಎನ್ನುವುದು ಒಂದು ತೀವ್ರ ಕರುಳು ಕಾಯಿಲೆಯಾಗಿದೆ. ಇದರಲ್ಲಿ ವಾಂತಿ ಭೇದಿಗಳು ಇಲ್ಲವೇ ಸತತ ಭೇದಿ ಕಾಣಿಸಿಕೊಂಡು ದೇಹದ ನೀರಿನ ಮಟ್ಟ ಕುಂದಿ ಬೇಸಿಗೆಯಲ್ಲಿ ಒಣಗಿದ ಕೆರೆಯಂತೆ ಆಗುತ್ತದೆ. ದೇಹದ ಅಂಗಾಗಗಳಲ್ಲಿ ನಿಶ್ಚಿತ ಪ್ರಮಾಣದಲ್ಲಿ ನೀರು ಇಲ್ಲ ಎಂದಾದಾಗ ದಾಹದಿಂದ ಜೀವರಾಶಿಗಳು ಸಾಯುವಂತೆ ನಮ್ಮ ದೇಹವು ನೀರು ಕಾಣದೆ ಇಹ ಲೋಕ ತ್ಯಜಿಸುತ್ತದೆ.
ಬೇಸಿಗೆಯು ಲೋಕಕ್ಕೆ ಬೇಸಿಗೆ ಕಾಲದಲ್ಲಿ ಮಾತ್ರ ಬಂದರೆ ದೇಹದ ನಿರ್ಜಲೀಕರಣ ಎನ್ನುವ ನೀರೊಣಗುವಿಕೆ ಕೆಲವು ತೊಂದರೆಗಳಿಂದ ಯಾವಾಗ ಬೇಕಾದರೂ ಬರಬಹುದು. ಹಾಗೆ ನಮ್ಮ ದೇಹವನ್ನು ನೀರಿಲ್ಲದ ಊರಿಗೆ ವರ್ಗಾಯಿಸುವ ಸಾಮಥ್ರ್ಯವು ಕಾಲರಾ ಕಾಯಿಲೆಗೆ ಇದೆ. ಆ ವಿಷಯದಲ್ಲಿ ಇದು ಚಾಂಪಿಯನ್ ಕಾಯಿಲೆ. ವೈಬ್ರಿಯೋ ಕಾಲರೇ ಬ್ಯಾಕ್ಟೀರಿಯಾ ಕಾರಣಕ್ಕೆ ಈ ಕಾಯಿಲೆ ಬರುತ್ತದೆ. ಈ ಬ್ಯಾಕ್ಟೀರಿಯಾವು ಮುಖ್ಯವಾಗಿ ನೀರಿನಿಂದ ಹರಡುತ್ತದೆ.
ಕೆಲವೊಮ್ಮೆ ಈ ಕಾಲರಾ ಬ್ಯಾಕ್ಟೀರಿಯಾವು ಸಾಮಾನ್ಯ ಚಿಹ್ನೆಗಳೊಡನೆ ಯಾವುದೇ ರೀತಿಯ ತೊಂದರೆ ಕೊಡದೆ ಒಳ್ಳೆಯ ಮಗುವಿನಂತೆ ಬಂದು ಹೊರಟು ಹೋಗಬಹುದು. ಆದರೆ ಕೆಲವೊಮ್ಮೆ ಇದು ತೀವ್ರ ಕಾಯಿಲೆಯಾಗಿ ಕಾಡಿ ನಮ್ಮ ಜೀವಕ್ಕೇ ಗಾಳ ಹಾಕಬಹುದು. ಸಾವು ನಮ್ಮನ್ನು ಕೇಳದೆಯೇ ಸಮೀಪಿಸಬಹುದು. ನಾವು ಹುಟ್ಟಲು ಹೇಗೆ ಅರ್ಜಿ ಹಾಕಿಲ್ಲವೋ ಹಾಗೆಯೇ ಸಾವಿಗೆ ಕೂಡ ನಾವು ಅರ್ಜಿ ಹಾಕಬೇಕೆಂದೇನೂ ಇಲ್ಲ. ಅದು ಹಣಕಿ ನೋಡಿ ಹೋಗಬಹುದು. ಒಮ್ಮೆಗೇ ಗುಳಕ್ಕ ಮಾಡಿಕೊಳ್ಳಲೂ ಬಹುದು.
ಇಂತಾ ಸುದ್ದಿ ಇರುವಾಗ ನೀರಿನ ವಿಷಯದಲ್ಲಿ ತುಂಬ ಎಚ್ಚರ ಅತ್ಯಗತ್ಯ. ಬೇಸಿಗೆಯಲ್ಲಿ ಕುಡಿಯಲಾರೆ ಈ ಕೊಳಕು ನೀರು ಕುಡಿಯದುಳಿಯಲಾರೆ ಎಂಬ ಸ್ಥಿತಿ ಇದ್ದಾಗ ಕಟ್ಟೆಚ್ಚರ ತುಂಬ ಅಗತ್ಯ. ತುಂಬ ಆರೋಗ್ಯಕರರಾಗಿರುವವರು ಕೂಡ ಒಂದೇ ಕ್ಷಣದಲ್ಲಿ ಕಾಲರಾ ಬ್ಯಾಕ್ಟೀರಿಯಾ ಸೋಂಕಿದಾಗ ಬುಡ ಕಡಿದ ಬಾಳೆಯಂತೆ ಹಾಸಿಗೆಗೆ ಬೀಳುತ್ತಾರೆ. ಅಡಿಗಡಿಗೆ ಶೌಚಾಲಯಕ್ಕೆ ಓಡಲಾಗದೆ ಬಳಲುತ್ತಾರೆ. ಆಗ ಸಾವು ಕರೆಯುತ್ತದೆ ಎಂದು ಕೂಡ ಅವರು ಹತ್ತಿರ ಇರುವವರಿಗೆ ಹೇಳಬಹುದು. ವೈದ್ಯರನ್ನು ಕರೆದರೆ, ಕೆಲವು ಎಚ್ಚರಿಕೆಗಳನ್ನು ಅನುಸರಿಸಿದರೆ ಕರೆಯುವ ಸಾವಿಗೆ ನಾಳೆ ಬಾರಯ್ಯ ಎಂದು ಬರೆದು ತೋರಿಸಬಹುದು. ನಾಳೆ ಬಾ ಬೋರ್ಡು ನಿರಂತರ ಇಡಬೇಕಾದುದು ಮುಖ್ಯ.
ಅಶುದ್ಧವಾದ ನೀರು ಅಲ್ಲದೆ ಅಶುದ್ಧವಾದ ಆಹಾರದ ಮೂಲಕವೂ ಕಾಲರಾ ಹರಡುತ್ತದೆ. ಇದು ಸಾಂಕ್ರಾಮಿಕವಾಗಿ ಕೂಡ ಹರಡುವ ಗುಣ ಹೊಂದಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಹಾಸ್ಟೆಲಿನ 47 ಬಾಧಿತ ತರುಣಿಯರ ವಿಷಯದಲ್ಲಿ ಇದು ಸಾಂಕ್ರಾಮಿಕವಾಗಿ ಕಾಡಿದ್ದು ಕಂಡಿದೆ. ಆದರೆ ಕೂಡಲೆ ಔಷಧೀಯ ಪ್ರತಿ ಬಾಣ ಹೂಡಿದ್ದರಿಂದ ಅವರೆಲ್ಲ ಬೇಗನೆ ಗುಣಮುಖರಾಗಿ ಕಾಲರಾ ಕಳೆದುಕೊಂಡು ಬಯ್ದ್ಯ ಬಿಡದಿಗೆ ವಾಪಾಸಾಗಿದ್ದಾರೆ.
ವಯ್ರಸ್‍ಗಳು, ಬ್ಯಾಕ್ಟೀರಿಯಾಗಳು, ಪರಾವಲಂಬಿಗಳು, ಶಿಲೀಂದ್ರಗಳ ಕಾರಣದಿಂದಲೂ ಕಾಲರಾ ಬರುತ್ತವೆ ಎಂದು ಹೇಳಲಾಗಿದೆ. ಇವು ಬೆರಕೆÀ ನೀರು ಮತ್ತು ಆಹಾರದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದೆ. ಈ ಕಾಲರಾ ಮತ್ತು ಕೆಲವು ಕಾಯಿಲೆಗಳ ವಿಶೇಷ ಗುಣವೆಂದರೆ ನೀವು ಅವನ್ನು ಖರೀದಿಸಿಲ್ಲವಾದರೂ ಅದು ನಿಮ್ಮಲ್ಲಿಗೆ ಬಂದಿರುತ್ತದೆ. ಬೇಡ ಮಾರಾಯ ಎಂದರೆ ಮಾರಾಟಗಾರ ಹೋಗಬಹುದು ಆದರೆ ಕಾಲರಾ ಮಾದರಿಯ ಕಾಯಿಲೆಗಳು ಬರುವಾಗ ಬೇಡ ಬರಬೇಡ ಎಂದರೂ ಕೇಳುವುದಿಲ್ಲ.
ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲವಾಗಿ ಇಟ್ಟುಕೊಂಡಿದ್ದರೆ ಇಲ್ಲವೇ ನಿಮ್ಮ ಬಿಳಿ ರಕ್ತ ಕಣಗಳು ಆರೋಗ್ಯಪೂರ್ಣವಾಗಿ ಸೂಕ್ತ ಸಂಖ್ಯೆಯಲ್ಲಿ ಇದ್ದರೆ, ನೀವು ಆದಷ್ಟು ಆರೋಗ್ಯಕರ ಪರಿಸರವನ್ನು ಉಳಿಸಿಕೊಂಡಲ್ಲಿ ಕಾಲರಾ ಬರಬೇಡ ಎಂದಾಗ ನಮ್ಮ ಮಾತು ಕೇಳುವ ಸಾಧ್ಯತೆ ಇದೆ. ಬಂದರೂ ಕಾಡದೆ ನಮ್ಮನ್ನು ಹೆದರಿಸದೆ ತಾನೇ ಹೆದರಿ ಓಡಿ ಹೋಗುವ ಸಾಧ್ಯತೆ ಇದೆ. ಒಬ್ಬ ತೀವ್ರ ರೋಗಿಯು ನಿಮ್ಮ ಮೂಗು ಬಾಯಿಗೆ ಎದುರಾಗಿ ತೀವ್ರವಾಗಿ ಸೀನಿದಾಗ ಕೂಡ ಕಾಲರಾ ಲಬಕ್ಕಂತ ಆ ಕಡೆಯಿಂದ ಬಂದು ಈ ಕಡೆ ಕಚ್ಚಿಕೊಳ್ಳಬಹುದು.
ಮೊದಲ ಹಂತದಲ್ಲಿ ಉರಿಯೂತ, ಎರಡನೆಯ ಹಂತದಲ್ಲಿ ರೋಗ ಬೆಸೆದುಕೊಳ್ಳುವಿಕೆ ಮತ್ತು ಮೂರನೆಯ ಹಂತದಲ್ಲಿ ನಿರ್ಧಾರಾತ್ಮಕವಾಗಿ ರೋಗ ಬಲಿತಿರುತ್ತದೆ. ಮುಖ್ಯವಾಗಿ ದೇಹದ ನೀರು ಬತ್ತದಂತೆ ಹೆಚ್ಚಿನ ದ್ರವಾಹಾರಗಳನ್ನು ಸೇವಿಸುತ್ತಲೇ ಇರಬೇಕು. ವಾಂತಿಯೂ ಇದ್ದಾಗ ಕುಡಿದ ಕೂಡಲೆ ವಾಂತಿಯಾಗುವ ಸಾಧ್ಯತೆ ಇರುತ್ತದೆ. ಅದರ ಸವಾಲನ್ನು ಸ್ವೀಕರಿಸಿ ಬಿಡದೆ ಕುಡಕರಾಗಬೇಕು. ಒಂದು ಕಾಲದಲ್ಲಿ ನೀರಿಗೆ ತುಸು ಸಕ್ಕರೆ ತುಸು ಉಪ್ಪು ಹಾಕಿ ಕುಡಿಯುವುದು ಕೂಡ ಇದಕ್ಕೆ ಪರಿಹಾರ ಎಂದು ತಿಳಿಯಲಾಗಿತ್ತು. ತುಂಬ ಒಳ್ಳೆಯದೆಂದರೆ ತುಸು ಉಪ್ಪು ಸೇರಿಸಿದ ನೀರು ಮಜ್ಜಿಗೆ ಕುಡಿಯುತ್ತಿರುವುದಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಡ್ಯೂಕೊರಾಲ್, ಶಾಂಕೋಲ್, ಏವಿಕೋಲ್ ಲಸಿಕೆಗಳನ್ನು ಕಾಲರಾ ತಡೆಯಲು ಕಾರ್ಯಕ್ರಮಗಳ ಮೂಲಕ ಹಂಚುತ್ತದೆ. ಸರಕಾರಗಳ ಕಾರ್ಯಕ್ರಮವಾಗಿಯೂ ಇದು ಇರುತ್ತದೆ. ಆಸ್ಪತ್ರೆಗಳಲ್ಲಿಯೂ ಇವು ಲಭ್ಯವಿರುತ್ತದೆ. ಸಂಪೂರ್ಣ ರಕ್ಷಣೆಗೆ ಎರಡು ಡೋಸ್‍ಗಳ ಲಸಿಕೆಯನ್ನು ಪಡೆಯುವಂತೆ ವೈದ್ಯರುಗಳು ಸೂಚಿಸುತ್ತಾರೆ. ಭಾರತದಲ್ಲಿ ಲಭ್ಯವಿರುವ ಕಾಲರಾ ತಡೆ ಲಸಿಕೆ ಡ್ಯೂಕೊರಾಲ್ ಆಗಿದೆ. ಈ ಲಸಿಕೆಯು ಕಾಲರಾ ಬಾಧಿತ ಜೀವಕಣಗಳನ್ನು ಕಳೆದು ಹೊಸ ಜೀವ ಕಣಗಳಿಗೆ ದಾರಿ ಮಾಡಿಕೊಡುತ್ತದೆ ಎನ್ನಲಾಗಿದೆ.
1885ರಲ್ಲಿ ಮೊದಲಿಗೆ ಸ್ಪೆಯಿನ್‍ನಲ್ಲಿ ಫೆರ್ರಾನ್ ಅವರು ಕಾಲರಾಕ್ಕೆ ತಡೆ ಲಸಿಕೆಗಳನ್ನು ನೀಡುವುದನ್ನು ಆರಂಭಿಸಿದರು. ಕಾಲರಾ ಬಾಧಿತ ಪ್ರದೇಶಕ್ಕೆ ಹೋಗುವವರು ಆರೋಗ್ಯ ಸೇವೆ ನೀಡುವವರೇ ಆದರೂ ಲಸಿಕೆ ಪಡೆದಿರುವುದು ಒಳ್ಳೆಯದು ಎನ್ನಲಾಗಿದೆ. ಬಾಯಿಯ ಮೂಲಕ ದ್ರವಾಹಾರ ಹೆಚ್ಚು ಕುಡಿಯುವುದು ಮತ್ತು ಸ್ನಾಯುಗಳ ಒಳಕ್ಕೆ ಲಸಿಕೆ, ಚುಚ್ಚುಮದ್ದು ನೀಡಬೇಕಾಗುತ್ತದೆ. ಸರಿಯಾಗಿ ನಡೆದುಕೊಂಡರೆ ಕಾಲರಾ ಕಾಡದಂತೆ ನಮ್ಮ ಕಾಲರ್ ಎತ್ತಿ ನಡೆಯುವುದು ಕಷ್ಟವೇನಲ್ಲ.