ಪಡುಬಿದ್ರಿ: ಮರವಂತೆಯ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಬಣ್ಣ ಹಚ್ಚಿದ ಯುವಕರು..!!

ಪರರ ನೋವಿಗೆ ಸ್ಪಂದಿಸುವ ಮನಸ್ಸು ನಮ್ಮಲ್ಲಿದ್ದರೆ ಜಾತಿ ಮತ ಭೇದಕ್ಕೆ ಜಾಗವೇ ಇಲ್ಲ ಎಂಬುದನ್ನು ಪಡುಬಿದ್ರಿಯ ಯುವಕರ ತಂಡವೊಂದು ತೋರಿಸಿಕೊಟ್ಟಿದ್ದಾರೆ. ಪುಟ್ಟ ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗಾಗಿ ಬಣ್ಣ ಹಚ್ಚಿ ಅದರಿಂದ ಸಂಗ್ರಹಗೊಂಡ ಹಣನ್ನು ಆ ಮಗುವಿನ ಕುಟುಂಬಕ್ಕೆ ಹಸ್ತಾಂತರ ಮಾಡುವ ಮೂಲಕ ಸಾಭೀತು ಪಡಿಸಿದ್ದಾರೆ.

ಮರವಂತೆಯ ಬಡ ಕುಟುಂಬದ ಶಂಕರ ಪೂಜಾರಿ ಎಂಬವರ ಏಳರ ಹರೆಯದ ಪುಟ್ಟ ಬಾಲೆ ವೈಷ್ಣವಿಗೆ ಕಾಲು ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರಲ್ಲಿ ಪರೀಕ್ಷಿಸಿದಾಗ “ಎಲುಬು ಕ್ಯಾನ್ಸರ್” ಎಂದು ತಿಳಿದುಬಂದಿದೆ. ಹೋಟೆಲೊಂದರಲ್ಲಿ ದುಡಿದು ಪತ್ನಿ ಸಹಿತ ಎರಡು ಹೆಣ್ಣು ಮಕ್ಕಳಿರುವ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಶಂಕರ ಪೂಜಾರಿಗೆ ಬರ ಸಿಡಿಲು ಬಡಿದ ಅನುಭವ. ಇಂಥಹ ಕುಟುಂಬದ ನೆರವಿಗೆ ಬಂದವರು ಪಡುಬಿದ್ರಿಯಲ್ಲಿ ಮೀನುಗಾರಿಕಾ ವೃತ್ತಿ ನಡೆಸಿಕೊಂಡು ಜೀವನದ ಕಷ್ಟ ಏನು ಎಂಬುದನ್ನು ತಿಳಿದುಕೊಂಡಿರುವ ಯುವಕರ ತಂಡ. ಈ ಬಡ ಕುಟುಂಬಕ್ಕೆ ಕೊಂಚವಾದರೂ ಆಧಾರವಾಗಬೇಕೆಂಬ ನಿಟ್ಟಿನಲ್ಲಿ ಕುಟುಂಬದ ಒಪ್ಪಿಗೆ ಪಡೆದು, ನವರಾತ್ರಿ ಸಂದರ್ಭದ ಎರಡು ದಿನಗಳ ಕಾಲ ವೇಷಧರಿಸಿ ದುಂದು ವೆಚ್ಚಗಳಿಗೆ ಅವಕಾಶ ನೀಡದೆ ಹಣ ಸಂಗ್ರಹಿಸಿದ್ದಾರೆ.

ಅದರಲ್ಲಿ ಸಂಗ್ರಹಗೊಂಡ ಮೊತ್ತ ಒಂದು ಲಕ್ಷ ಅರವತ್ತೇಳು ಸಾವಿರ ರೂಪಾಯಲ್ಲಿ ಅರತವತ್ತೈದು ಸಾವಿರ ವೇಷ ಭೂಷಣದ ವೆಚ್ಚ ತೆಗೆದು ಉಳಿದ ಒಂದು ಲಕ್ಷ ಎರಡು ಸಾವಿರ ರೂಪಾಯಿ ಮೊತ್ತವನ್ನು ಯುಕರ ತಂಡದ ಇಪ್ಪತ್ತು ಮಂದಿಯೂ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ತೆರಳಿ ಮಗುವಿನ ತಾಯಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭ ಮಾತನಾಡಿದ ಪಡುಬಿದ್ರಿ ಯುವಕರ ತಂಡದ ಸದಸ್ಯ ರಾಕೇಶ್ ಕಲ್ಲಟ್ಟೆ, ನಮ್ಮ ತಂಡದಲ್ಲಿ ಬೇರೆ ಬೇರೆ ಸಮಾಜದ ಇಪ್ಪತ್ತು ಮಂದಿ ಇದ್ದು, ಎಲ್ಲರೂ ಒಂದೇ ಎಂಬ ಭಾವನೆಯಿಂದ ಕೂಡಿರುವವರಾಗಿದ್ದಾರೆ. ಶಂಕರ ಪೂಜಾರಿಯವರ ಕುಟುಂಬದ ಕಷ್ಟಕ್ಕೆ ಸ್ಪಂದಿಸುವ ಬಗ್ಗೆ ನಮ್ಮ ತಂಡದ ಎಲ್ಲಾ ಸದಸ್ಯರ ನಿರ್ಣಯದಂತೆ ನವರಾತ್ರಿ ಅಂತಿಮ ಒಂದುವರೆ ದಿನದಲ್ಲಿ ವೇಷ ಹಾಕಿ ಅದರಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನರು ನಮಗೆ ಸಹಕಾರ ನೀಡಿದ್ದಾರೆ.

ಪ್ರಾಮಾಣಿಕವಾಗಿ ದುಂದು ವೆಚ್ಚ ಮಾಡದೆ ಕೇವಲ ವೇಷ ಭೂಷಣಗಳ 65 ಸಾವಿರ ರೂಪಾಯಿ ತೆಗೆದು ಉಳಿದ ಒಂದು ಲಕ್ಷ ಎರಡು ಸಾವಿರ ರೂಪಾಯಿ ಆಸ್ಪತ್ರೆಗೆ ತೆರಳಿ ಮಗುವಿಯ ತಾಯಿಗೆ ನೀಡಿದ್ದೇವೆ. ಜನರ ಸಹಕಾರ ದಿಂದ ಈ ಸೇವೆಯನ್ನು ನಾವು ಮಾಡಲು ಸಾಧ್ಯವಾಯಿತು, ಅಗತ್ಯ ಬಿದ್ದರೆ ಮುಂದಿನ ದಿನದಲ್ಲೂ ಬಡವರ ಕಷ್ಟಗಳಿಗೆ ಸ್ಪಂದಿಸಲು ನಮ್ಮ ತಂಡ ಸಿದ್ಧವಿದೆ ಎಂದರು.

ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಯಾವುದೇ ರಕ್ತ ಸಂಬಂದಿಗಳಲ್ಲವಾದರೂ..ಸ್ಪಂದಿಸಿದ ಯುವಕ ತಂಡಕ್ಕೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published.