ಮಂಗಳೂರು: ಪ್ರೆಸ್‍ಕ್ಲಬ್ ಅತಿಥಿಯಾಗಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಗೌರವ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 25 ಮತ್ತು 26ರಂದು ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಕಂಬಳ ಕರೆಗಳ ನಿರ್ಮಾಣವಾಗಿದ್ದು, ಅದನ್ನು ನೋಡಲೆಂದೇ ದಿನವೊಂದಕ್ಕೆ ಸಾವಿರಾರು ಜನ ಸೇರುತ್ತಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಮಂಗಳೂರು ಪ್ರೆಸ್‍ಕ್ಲಬ್ ನ ಗೌರವ ಅತಿಥಿಯಾಗಿ ಭಾಗವಹಿಸಿ ಗೌರವ ಸ್ವೀಕರಿಸಿದ ಅವರು ಬೆಂಗಳೂರು ಕಂಬಳದ ಬಗ್ಗೆ ಮಾಹಿತಿ ನೀಡಿದರು.
ದ.ಕ. ಮತ್ತು ಉಡುಪಿ ಜಿಲ್ಲೆಯ ತುಳು ಸಂಸ್ಕೃತಿ, ಇಲ್ಲಿನ ವೈಭವವನ್ನು ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ತೋರಿಸುವ ಜತೆಗೆ ಕಂಬಳದ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುವ ಉದ್ದೇಶವನ್ನು ಕೂಡಾ ಹೊಂದಲಾಗಿದೆ. ಅದಕ್ಕಾಗಿ ಕಂಬಳದ ಕರೆಯ ಉದ್ದವನ್ನು 155 ಮೀಟರ್‍ಗೆ ಏರಿಕೆ ಮಾಡಲಾಗಿದೆ. ಕಂಬಳದ ವಿವಿಧ ವಿಭಾಗಗಳಲ್ಲಿ ಜಯಗಳಿಸುವ ಕಂಬಳದ ಕೋಣಗಳಿಗೆ, ಓಡಿಸುವವರಿಗೆ ಬಹುಮಾನ ಮೊತ್ತ, ಭಾಗವಹಿಸುವ ಪ್ರತಿ ಕೋಣಗಳ ಯಜಮಾನರಿಗೆ ಗೌರವಧನ ನೀಡುವ ನಿಟ್ಟಿನಲ್ಲಿ ನಿರ್ಧಾರ ಮಾಡಲಾಗಿದೆ. ಈಗಾಗಲೇ 116 ಜೋಡಿ ಕೋಣಗಳ ನೋಂದಣಿಯಾಗಿದೆ. ಇನ್ನೂ ಹಲವು ಕೋಣಗಳ ಯಜಮಾನರು ಭಾಗವಹಿಸಲು ಆಸಕ್ತಿ ತೋರಿದ್ದಾರೆ ಎಂದು ಅಶೋಕ್ ರೈ ವಿವರ ನೀಡಿದರು.
ತುಳುವಿಗೆ ಅಧಿಕೃತ ಭಾಷೆಯಾಗಿ ಮಾನ್ಯತೆ ದೊರಕಿಸುವುದು ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸುವ ಕಾರ್ಯವೂ ನಡೆಯುತ್ತಿದೆ. ಇದೇ ವೇಳೆ 20 ಲಕ್ಷಕ್ಕೂ ಅಧಿಕ ತುಳುವವರು ಹೊಂದಿರುವ ಬೆಂಗಳೂರಿನಲ್ಲಿ ತುಳು ಭವನ ನಿರ್ಮಾಣಕ್ಕೆಪ್ರಯತ್ನ ನಡೆಯುತ್ತಿದೆ. ಈಗಾಗಲೇ ಉಪ ಮುಖ್ಯಮಂತ್ರಿಯಿಂದ ಒಪ್ಪಿಗೆಯೂ ದೊರಕಿದ್ದು, ಕಂಬಳದಲ್ಲಿ ಉಳಿಕೆಯಾಗುವ ಹಣವನ್ನು ತುಳು ಭವನಕ್ಕೆ ವಿನಿಯೋಗಿಸಲು ಚಿಂತಿಸಲಾಗಿದೆ. 40ರಿಂದ 50 ಕೊಠಡಿಗಳು, ರಿಕ್ರಿಯೇಶನ್ ಕ್ಲಬ್, ಸಭಾಂಗಣದೊಂದಿಗೆ ತುಳು ಭವನ ನಿರ್ಮಿಸುವ ಆಲೋಚನೆ ಇದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ದಾಯ್ಜಿವರ್ಲ್ಡ್ ಮೀಡಿಯಾ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‍ನ ರಾಮಕೃಷ್ಣ ಆರ್., ಕಾರ್ಯಕ್ರಮ ಸಂಯೋಜಕ ವಿದಯ ಕೋಟ್ಯಾನ್ ಉಪಸ್ಥಿತರಿದ್ದರು.
ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಪ್ರಧಾನಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.