ದೇಹಾಂತ್ಯ ಆಗುವವರೆಗೆ ಬಿಜೆಪಿ ಕಾರ್ಯಕರ್ತನಾಗಿರುತ್ತೇನೆ : ಪ್ರಮೋದ್ ಮಧ್ವರಾಜ್ ಹೇಳಿಕೆ
ಉಡುಪಿ: ಮುಂಬರುವ ಲೋಕಸಭಾ ಚುನಾವಣೆಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಬಿಜೆಪಿಯ ಅಭ್ಯರ್ಥಿ ಆಗಲು ಪ್ರಬಲ ಆಕಾಂಕ್ಷಿ ಆಗಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಕೆಲ ಜನರ ಬಾಯಿಯಲ್ಲಿ ನಾನು ಬಿಜೆಪಿಯನ್ನು ತ್ಯಜಿಸುವ ಸಾಧ್ಯತೆ ಇದೆ ಎಂಬ ಅಪಪ್ರಚಾರ ನಡೆಯುತ್ತಿದೆ. ಮುಂದೊಂದು ದಿನ ರಾಜಕೀಯ ನಿವೃತ್ತಿ -ದೇಹಾಂತ್ಯ ಆಗುವವರೆಗೆ ನಾನು ಬಿಜೆಪಿಯಲ್ಲಿ ಕಾರ್ಯಕರ್ತನಾಗಿರುತ್ತೇನೆ.
ಇಹಲೋಕ ತ್ಯಾಗ ಮಾಡುವ ತನಕ ಬಿಜೆಪಿಯಲ್ಲಿ ಮುಂದುವರೆಯುತ್ತೇನೆ ಎಂದು ಅಪಪ್ರಚಾರಕ್ಕೆ ತೆರೆ ಎಳೆದರು.
ನನ್ನನ್ನೇ ಆಯ್ಕೆ ಮಾಡುತ್ತಾರೆ ಎಂಬ ಪೂರ್ಣ ವಿಶ್ವಾಸ ಇಲ್ಲ. ಯಾರೂ ಸ್ಪಷ್ಟ ಭರವಸೆ ಕೊಟ್ಟಿಲ್ಲ. ಅವಕಾಶ ಕೊಟ್ಟರೆ ಸಂತೋಷದಿಂದ ಎಲ್ಲರ ಆಶೀರ್ವಾದ ಪಡೆದು ಸ್ಪರ್ಧೆ ಮಾಡುತ್ತೇನೆ. ಬೇರೆಯವರಿಗೆ ಟಿಕೆಟ್ ಕೊಟ್ಟರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಮುಂದಿನ ಇಪ್ಪತ್ತು ವರ್ಷಗಳ ಕಾಲ ಉಡುಪಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಿಲ್ಲ. ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದ್ದೇನೆ ಎಂದು ನನಗೆ ಯಾವತ್ತೂ ಅನಿಸಿಲ್ಲ ಎಂದರು.