ಪುತ್ತೂರು: ಶ್ರೀರಾಮ ಪ್ರಾಣಪ್ರತಿಷ್ಠೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಬಿಜೆಪಿ: ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ
ಪುತ್ತೂರು: ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಯಾವುತ್ತೂ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಮಾಜಿ ಪ್ರಧಾನಿಗಳಾದ ನೆಹರು ಹಾಗೂ ರಾಜೀವ ಗಾಂಧಿ. ಆದರೆ ಶ್ರೀರಾಮ ಪ್ರಾಣಪ್ರತಿಷ್ಠಾಪನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ನಡೆಯ ಬಗ್ಗೆ ನಮ್ಮ ವಿರೋಧವಿದೆ. ಮಂತ್ರಾಕ್ಷತೆ ಹೆಸರಲ್ಲಿ ಜನತೆಯನ್ನು ಮರುಳು ಮಾಡುವ ಹಾಗೂ ಪ್ರಾಣಪ್ರತಿಷ್ಠಾಪನೆಯ ಸಮಯದಲ್ಲಿ ತಂತ್ರಿಗಳನ್ನು ಬದಿಗಿಟ್ಟು ರಾಜಕಾರಣಿಗಳು ಗರ್ಭ ಗುಡಿ ಪ್ರವೇಶಿಸುವ ಮೂಲಕ ಹಿಂದೂ ಸಂಪ್ರದಾಯಕ್ಕೆ ಅಪಚಾರ ಮಾಡುವ ಕೃತ್ಯದ ಬಗ್ಗೆ ನಮ್ಮ ವಿರೋಧವಿದೆ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಹೇಳಿದರು.
ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಮಂತ್ರಾಕ್ಷತೆ ಎಂಬುವುದು ಪ್ರಾಣಪ್ರತಿಷ್ಠೆಯಾದ ಬಳಿಕ ಪೂಜಾ ಕಾರ್ಯಗಳು ನಡೆದ ಬಳಿಕ ನೀಡುವುದು ಕ್ರಮ. ಆದರೆ ಯಾವ ಧಾರ್ಮಿಕ ಕಾರ್ಯಕ್ರಮಗಳೂ ನಡೆಯದೆ ಈ ಮಂತ್ರಾಕ್ಷತೆ ಎಲ್ಲಿಂದ ಬಂತು. ಇದು ಪಕ್ಕಾ ರಾಜಕೀಯ. ಪೂಜಾ ಕಾರ್ಯಕ್ರಮ ನಡೆದ ಬಳಿಕ ಸಿಗಬೇಕಾದ ಮಂತ್ರಾಕ್ಷತೆಯನ್ನು ಮನೆ ಮನೆಗೆ ಹಂಚುವ ಮೂಲಕ ಈ ಮಂತ್ರಾಕ್ಷತೆಯ ಮಹತ್ವವನ್ನು ಹಾಳು ಕೀರ್ತಿ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸಂದಾಯವಾಗಿದೆ. ಪುತ್ತೂರಿನ ಮುಂಡೂರಿನಲ್ಲಿ ಜಾಗದ ವಿವಾದದ ಹಲ್ಲೆಯನ್ನು ಮಂತ್ರಾಕ್ಷತೆ ಹಂಚುವ ವಿಚಾರದಲ್ಲಿ ನಡೆದಿದೆ ಎಂದು ತಿರುಚಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರೇ ಮಂತ್ರಾಕ್ಷತೆ ರಾಜಕೀಯ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಪುತ್ತೂರಿನ ಬಿಜೆಪಿಯ ಬಣಗಳು ಒಂದಾದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುವುದು ಎಂಬ ಭಯದಿಂದ ಈ ಮಂತ್ರಾಕ್ಷತೆ ವಿಚಾರವನ್ನು ಮಾಜಿ ಶಾಸಕರು ಎಳೆದು ತಂದಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಕಾಂಗ್ರೇಸ್ ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಮತ್ತು ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಉಪಸ್ಥಿತರಿದ್ದರು.