ಬೆಂಗಳೂರು: ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ
ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಶುಕ್ರವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, 6 ತಿಂಗಳ ಬಳಿಕ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆದಿದೆ. ಶಾಸಕರ ಅಭಿಪ್ರಾಯ ಪಡೆದು ದೆಹಲಿಯಿಂದ ಬಂದಿದ್ದ ವೀಕ್ಷಕರು ಅಶೋಕ್ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
66ರ ಹರೆಯದ ಅಶೋಕ್ ಅವರು ಆರ್ ಎಸ್ ಎಸ್ ಹಿನ್ನಲೆ ಹೊಂದಿದ್ದು, ಈ ಹಿಂದೆ ವಿಧಾನಸಭೆಯ ವಿಪಕ್ಷದ ಉಪನಾಯಕರಾಗಿ ಉಪಮುಖ್ಯಮಂತ್ರಿಯಾಗಿ, ಕಂದಾಯ , ಗೃಹ ಮತ್ತು ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆಗೆ ಮುನ್ನ ಮೂರು ಬಾರಿ ಉತ್ತರಳ್ಳಿ ವಿಧಾನಸಭಾ ಕ್ಷೇತ್ರದಿಂದ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ನಾಲ್ಕು ಬಾರಿ ಸೇರಿ ಒಟ್ಟು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.