ಶಿವಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಅತಿರುದ್ರ ಮಹಾಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ
ಶಿವಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆಬ್ರವರಿ 22, ಬುಧವಾರದಿಂದ ಆರಂಭಿಸಿ ಮಾರ್ಚ್ 05 ರವಿವಾರ ಪರ್ಯಂತವಾಗಿ ಸಂಪನ್ನಗೊಳ್ಳಲಿರುವ ಅತಿರುದ್ರ ಮಹಾಯಾಗದ ಆಮಂತ್ರಣ ಪತ್ರಿಕೆಯನ್ನು ಫೆಬ್ರವರಿ 6, 2023 ರ ಸೋಮವಾರದಂದು ಶ್ರೀ ಶೃಂಗೇರಿ ಶಾರದಾಪೀಠದಲ್ಲಿ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಶ್ರೀಪಾದಂಗಳವರು, ಲೋಕ ಕಲ್ಯಾಣಾರ್ಥವಾಗಿ ಅತಿರುದ್ರ ಮಹಾಯಾಗ ನಡೆಸುತ್ತಿರುವುದು ಒಂದು ಮಹತ್ಕಾರ್ಯ, ಈ ಮಹಾ ಕಾರ್ಯದಲ್ಲಿ ಅತ್ಯಂತ ಸಂಭ್ರಮದಿಂದ ಭಾಗಿಯಾಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅತಿರುದ್ರ ಮಹಾ ಯಾಗ ಸಮಿತಿಯ ಅಧ್ಯಕ್ಷರಾದ ಉಡುಪಿ ಶಾಸಕ ಕೆ.ರಘುಪತಿ ಭಟ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ , ಶ್ರೀ ಕ್ಷೇತ್ರ ಶೃಂಗೇರಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್ ಶಾಸ್ತ್ರಿ, ಶಾಂಕರ ತತ್ವ ಪ್ರಸಾರ ಅಭಿಯಾನ ಉಡುಪಿ ಜಿಲ್ಲಾ ಸಂಚಾಲಕ ವಿಶ್ವನಾಥ್ ಶ್ಯಾನುಭೋಗ್, ಮಹಾಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಮಂಜುನಾಥ್ ಹೆಬ್ಬಾರ್, ದೇಗುಲದ ಆಡಳಿತ ಮೊಕ್ತೇಸರರಾದ ಸುಭಾಕರ ಸಾಮಂತ್, ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ದೇವಾಲಯದ ಟ್ರಸ್ಟಿಗಳು, ರತ್ನಾಕರ್ ಇಂದ್ರಾಳಿ, ಯಾಗ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಮಾರ್ಚ್ 04, 2023 ರ ಶನಿವಾರ ಸಾಯಂಕಾಲ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರನ್ನು ಭವ್ಯ ಶೋಭಾಯಾತ್ರೆ ಮೂಲಕ ಶಿವಪಾಡಿ ಶ್ರೀ ಉಮಾ ಮಹೇಶ್ವರ ಕ್ಷೇತ್ರಕ್ಕೆ ಬರಮಾಡಿಕೊಂಡು ಧೂಳಿ ಪಾದಪೂಜೆ ಬಳಿಕ ಸಾರ್ವಜನಿಕ ಸಮಾರಂಭ, ರಾತ್ರಿ ಚಂದ್ರಮೌಳೀ ದೇವರ ಪೂಜೆ, ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿದೆ. ಮಾರ್ಚ್ 05, 2023 ರ ಭಾನುವಾರ ಬೆಳಗ್ಗೆ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅತಿ ರುದ್ರ ಮಹಾಯಾಗ ಪೂರ್ಣಾಹುತಿ ನಡೆಯಲಿದೆ.