ಅವಧಿ ಪೂರ್ವದಲ್ಲೇ ತುಂಬೆ ವೆಂಟೆಡ್ ಡ್ಯಾಂನಲ್ಲಿ ಗೇಟ್‍ಗಳನ್ನು ಮುಚ್ಚಿ ನೀರು ಸಂಗ್ರಹಣೆ

ಇನ್ನೂ ಮಳೆಗಾಲ ಮುಗಿದಿಲ್ಲ. ಅದಾಗಲೇ ತುಂಬೆ ವೆಂಟೆಡ್ ಡ್ಯಾಂನಲ್ಲಿ ಗೇಟ್‍ಗಳನ್ನು ಮುಚ್ಚಿ ನೀರು ಸಂಗ್ರಹಣೆ ಆರಂಭಿಸಲಾಗಿದೆ. ಪ್ರತೀ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಡ್ಯಾಂಲ್ಲಿ ನೀರು ಸಂಗ್ರಹಣ ಆರಂಭವಾಗುತ್ತಿದ್ದರೆ ಈ ಬಾರಿ ಅವಧಿಗಿಂತ ಮೊದಲೇ ನೀರು ಸಂಗ್ರಹಣೆ ಆರಂಭಗೊಂಡಿದೆ.

ಈ ಬಾರಿ ಮಳೆಯಿಲ್ಲದೆ ಮಳೆಗಾಲದಲ್ಲಿಯೇ ನದಿ ಬರಡಾಗಿ ಮುಂದಿನ ದಿನಗಳಲ್ಲಿ ಕಾಡಬಹುದಾದ ಬರದ ಛಾಯೆ ಈಗಲೇ ಗೋಚರಿಸಿದೆ. ಜಿಲ್ಲೆಯ ಜೀವನದಿ ನೇತ್ರಾವತಿ ನದಿಯಲ್ಲೂ ಒಳಹರಿವು ಕ್ಷೀಣಿಸಿದ ಪರಿಣಾಮ ಅವಧಿ ಪೂರ್ವದಲ್ಲೇ ಡ್ಯಾಂನಲ್ಲಿ ನೀರು ಸಂಗ್ರಹಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ತುುಂಬೆ ವೆಂಟೆಡ್ ಡ್ಯಾಂನಲ್ಲಿ 7 ಮೀಟರ್ ಎತ್ತರಕ್ಕೆ ನೀರು ಸಂಗ್ರಹಣೆ ಮಾಡುವ ಸಾಮರ್ಥ್ಯ, ಅವಕಾಶ ಇದ್ದರೂ ಕೂಡ ಕಳೆದ ವರ್ಷದವರೆಗೆ ಕೇವಲ 6 ಮೀಟರ್ ಮಾತ್ರ ನೀರು ಸಂಗ್ರಹಣೆ ಮಾಡಲಾಗುತ್ತಿತ್ತು. ನೀರು ಸಂಗ್ರಹಣೆ ಆರಂಭಗೊಂಡ ದಿನದಿಂದಲೇ ನದಿಯಲ್ಲಿ ಒಳಹರಿವಿನಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದು ಡ್ಯಾಂನಲ್ಲಿ 6 ಮೀಟರ್ ನೀರು ಸಂಗ್ರಹಣೆ ಇರುತ್ತಿತ್ತು.

ಸುಮಾರು ಫೆಬ್ರವರಿ ತಿಂಗಳವರೆಗೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗುತ್ತಿತ್ತು. ನದಿಯಲ್ಲಿ ಹರಿದು ಬಂದ ಹೆಚ್ಚುವರಿ ನೀರನ್ನು ಹೊರ ಹರಿಯ ಬಿಡಲಾಗುತ್ತಿತ್ತು. ಆದರೆ ಈ ಬಾರಿ ಮಳೆಗಾಲವೇ ಇನ್ನೂ ಮುಗಿದಿಲ್ಲ. ಮಳೆಯೂ ಸರಿಯಾಗಿ ಬಂದಿಲ್ಲ. ಈ ಸಂದರ್ಭದಲ್ಲಿಯೇ ಎಲ್ಲಾ ಗೇಟುಗಳನ್ನು ಮುಚ್ಚಿ, ಒಂದು ಗೇಟ್‍ನಲ್ಲಿ ಮಾತ್ರ ನೀರು ಹೊರ ಹರಿಯ ಬಿಟ್ಟರೂ ಕೂಡ ಕೇವಲ 5 ಮೀಟರ್ ನೀರು ಸಂಗ್ರಹಣೆ ಆಗಿರುವುದು ನದಿಯ ಒಳಹರಿವು ಕ್ಷೀಣಿಸಿರುವುದರ ಸೂಚನೆಯಾಗಿದೆ. ಇದು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯನ್ನು ತೋರಿಸುತ್ತದೆ.

ಈ ಬಾರಿ ಮಳೆಗಾಲದಲ್ಲಿ ಒಂದು ದಿನ ಮಾತ್ರ ನದಿ ಅಪಾಯದ ಮಟ್ಟವನ್ನು (8.5) ಮೀರಿ ಹರಿದಿದೆ. ಉಳಿದ ದಿನಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆ ಇತ್ತು. ಆಟಿಯ ಬಾರಿ ಮಳೆಯ ಸುರಿಯುವ ದಿನಗಳಲ್ಲೂ ನದಿಯಲ್ಲಿ ನೀರಿಲ್ಲದೆ ಮರಳು ಕಾಣಿಸುತ್ತಿತು. ಜಿಲ್ಲೆಯ ಎಲ್ಲಾ ನದಿಗಳ ಸ್ಥಿತಿ ಇದೇ ಆಗಿದ್ದು ಮಳೆಗಾಲ ಮುಗಿಯುವ ಮೊದಲೇ ನದಿಗಳು ಬರಡಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಈ ಬಾರಿ ಡಿಸೆಂಬರ್‍ನಲ್ಲಿಯೇ ಕುಡಿಯುವ ನೀರಿಗೆ ತತ್ವಾರ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

Related Posts

Leave a Reply

Your email address will not be published.