ರೋಗರುಜಿನಗಳಿಂದ ರಕ್ಷಣೆಗಾಗಿ ‘ತಪ್ತ ಮುದ್ರಾಧಾರಣೆ’ : ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮುದ್ರಾಧಾರಣೆಗೆ ಮುಂದಾದ ಭಕ್ತರು
ಉಡುಪಿ: ಮಳೆಗಾಲ ಬಂತು ಅಂದರೆ ನಾನಾ ರೋಗರುಜಿನಗಳ ಆಗಮನವಾಯಿತೆಂದೇ ಅರ್ಥ. ಈ ಸಮಯದಲ್ಲಿ ಒಂದಲ್ಲ ಒಂದು ರೀತಿಯ ರೋಗಕ್ಕೆ ತುತ್ತಾಗುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಬರಬಹುದಾದ ರೋಗರುಜಿನಗಳಿಂದ ರಕ್ಷಣೆಯ ಸಲುವಾಗಿ ತಪ್ತ ಮುದ್ರಾಧಾರಣೆ ಮಾಡುವ ಎಂಬ ನಂಬಿಕೆಯಿದೆ. ಮುದ್ರಾಧಾರಣೆಯನ್ನು ಚಾತುರ್ಮಾಸ್ಯದ ಮೊದಲ ದಿನ ಸರ್ವೈಕಾದಶಿಯಂದೇ ನಡೆಸಲಾಗುತ್ತದೆ. ಈ ಸಲುವಾಗಿ ಇಂದು ಉಡುಪಿಯ ಶ್ರೀ ಕೃಷ್ಣ ಮಠ ಹಾಗೂ ಅಷ್ಟಮಠಗಳಲ್ಲಿ ಮುದ್ರಾಧಾರಣೆ ನಡೆಯಿತು. ಮಳೆಗಾಲದ ಆರಂಭದಲ್ಲಿ ನಡೆಯುವ ಅಪರೂಪದ ಧಾರ್ಮಿಕ ಆಚರಣೆಯನ್ನು ಅಷ್ಠ ಮಠಗಳ ಸ್ವಾಮೀಜಿಗಳು ಮಾಧ್ವ ಮತಕೇಂದ್ರಗಳಲ್ಲಿ ತಪ್ತಮುದ್ರಾಧಾರಣೆ ನೆರವೇರಿಸಿದರು. ಸುದರ್ಶನ ಹೋಮ ನಡೆಸಿ ಶಂಖ, ಚಕ್ರದ ಮುದ್ರೆಯನ್ನು ಭಕ್ತರಿಗಿರಿಸುವ ಸಂಪ್ರದಾಯ ಪಾಲಿಸಿದರು. ಸ್ವಾಮೀಜಿಗಳಿಂದ ಮುದ್ರೆ ಹಾಕಿಕೊಳ್ಳಲು ಬಂದ ಸಾವಿರಾರು ಭಕ್ತರು ಸಾಲಿನಲ್ಲಿ ನಿಂತು ಮುದ್ರಾಧಾರಣೆ ಮಾಡಿಸಿಕೊಂಡರು. ಪುರುಷರಿಗೆ ತೋಳು ಮತ್ತು ಎದೆ , ಮಹಿಳೆಯರಿಗೆ ಎಡ ಬಲ ತೋಳುಗಳಿಗೆ ಮುದ್ರಾಧಾರಣೆ ಮಾಡಲಾಯಿತು. ಮುದ್ರಾ ಧಾರಣೆಯ ಮೂಲಕ ತಾವು ವೈಷ್ಣವ ತತ್ವದ ಅನುಯಾಯಿಗಳು ಎಂದು ಹೇಳುವ ಪದ್ಧತಿಯಿದೆ. ಕೇವಲ ಯತಿಗಳಿಗೆ ಮಾತ್ರ ಮುದ್ರಾ ಧಾರಣೆ ಮಾಡುವ ಹಕ್ಕಿದೆ.