ಉದ್ಯಾವರ : ರೈಲ್ವೇ ಕ್ರಾಸಿಂಗ್ ಗೇಟ್‍ನಿಂದ ಪ್ರಯಾಣಿಕರಿಗೆ ತೊಂದರೆ
ಮಂಜೇಶ್ವರ : ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ಸಮೀಪವಿರುವ ಉದ್ಯಾವರ ರೈಲ್ವೇ ಕ್ರಾಸಿಂಗ್ ಗೇಟ್ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ನಿರಂತರ ಅಡಚಣೆಯಾಗಿದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಹಾಗೂ ಜನ ಸಾಮಾನ್ಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.
ಯಾವುದೇ ಮುನ್ಸೂಚನೆ ಕೂಡ ನೀಡದೆ ರೈಲ್ವೇ ಗೇಟ್‍ನ್ನು ಇಲ್ಲಿ ಬಂದ್ ಮಾಡುತ್ತಾರೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ. ಮಂಜೇಶ್ವರ ರಥಬೀದಿ ಅಥವಾ ಹೊಸಂಗಡಿ ಭಾಗದಿಂದ ಆಗಮಿಸಿದವರು ಮತ್ತೆ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಗುತಿದ್ದರೂ ಸ್ಥಳೀಯರು ಸಂಬಂಧ ಪಟ್ಟ ರೈಲ್ವೇ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲವೆನ್ನಲಾಗಿದೆ.
ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ರೈಲ್ವೇ ಕ್ರಾಸಿಂಗ್ ಮೂಲಕ ಹಾದು ಹೋಗುತಿದ್ದಾರೆ. ಈ ಸಂದರ್ಭಗಳಲ್ಲಿ ಮುನ್ಸೂಚನೆ ನೀಡದೆ ರೈಲ್ವೇ ಗೇಟನ್ನು ಕಾಮಗಾರಿಯ ಹೆಸರಿನಲ್ಲಿ ಮುಚ್ಚುತ್ತಿರುವುದು ನಾಗರೀಕರ ಆಕ್ರೋಶಕ್ಕೂ ಕಾರಣವಾಗುತ್ತಿದೆ.