ಹೆಜಮಾಡಿ ಬಂದರು ಕಾಂಗ್ರೆಸ್ ಪ್ರಯತ್ನ : ವಿನಯ ಕುಮಾರ್ ಸೊರಕೆ
ಹೆಜಮಾಡಿ ಮೀನುಗಾರಿಕಾ ಬಂದರು ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಂಜೂರು ಮಾಡಿದ್ದು ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾದ ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ ಹೆಜಮಾಡಿ ಬಂದರನ್ನು ಎಲ್ಲಾ ಪೂರಕ ದಾಖಲೆಗಳನ್ನು ಕ್ರೋಡೀಕರಿಸಿ ಮಂಜೂರು ಮಾಡಿದ್ದರು. ಆ ಸಂದರ್ಭ ಕೇಂದ್ರ ಸರ್ಕಾರ 75 ಶೇಕಡ ಹಾಗೂ ರಾಜ್ಯ ಸರ್ಕಾರ 25 ಶೇಕಡ ಹಣ ಹೊಂದಿಸಿಕೊಳ್ಳುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಲಾಯಿತು. ಇದೇ ಸಂದರ್ಭ ನಮ್ಮ ಯುಪಿಎ ಸರ್ಕಾರ ಹೋಗಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು ನಮ್ಮ ಈ ಪ್ರಸ್ತಾವನೆಯನ್ನು ಧಿಕ್ಕರಿಸಲಾಯಿತು. ಬಳಿಕದ ದಿನದಲ್ಲಿ ಬಂದರು ನಿರ್ಮಾಣಕ್ಕೆ 50+50 ಎಂಬ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿದ್ದು ಅದಕ್ಕೆ ಕೇಂದ್ರದಿಂದಲೂ ಗ್ರೀನ್ ಸಿಗ್ನಲ್ ದೊರಕಿತ್ತು. ಆ ವೇಳೆಯಲ್ಲಿ ರಾಜ್ಯದಲ್ಲಿ ಅಸ್ಥಿತ್ವದಲ್ಲಿದ್ದ ಕಾಂಗ್ರೆಸ್ ಜೆಡಿಯಸ್ ಜಂಟಿ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ರಚನೆಯ ಬಳಿಕ ಮುಖ್ಯ ಮಂತ್ರಿಯಾದ ಯಡಿಯೂರಪ್ಪ ಹೆಜಮಾಡಿ ಬಂದರಿಗೆ ಶಿಲಾನ್ಯಾಸ ಮಾಡಿದ್ದು ಬಿಟ್ಟರೆ ಈ ಬಂದರು ನಿರ್ಮಾಣದಲ್ಲಿ ರಾಜ್ಯ ಬಿಜೆಪಿಯ ಯಾವುದೇ ಪಾತ್ರ ಇಲ್ಲ ಎಂಬುದಾಗಿ ವಿನಯಕುಮಾರ್ ಸೊರಕೆ ಸ್ಪಷ್ಟ ಪಡಿಸಿದ್ದು, ಈ ಬಗ್ಗೆ ಜನರಿಗೂ ಮಾಹಿತಿ ಇದೆ ಎಂದರು.